ಬೆಂಗಳೂರು, ಅಕ್ಟೋಬರ್ 7, 2026: ಭಾರತದ ಪ್ರಮುಖ ದೂರಸಂಪರ್ಕ ಸೇವಾ ಪೂರೈಕೆದಾರರಾದ ಭಾರ್ತಿ ಏರ್ಟೆಲ್ ಹೊಸ ಪೋಸ್ಟ್ಪೇಯ್ಡ್ ಪ್ಲಾನ್ಗಳನ್ನು ಘೋಷಿಸಿದ್ದು, ಎಲ್ಲಾ ಹೊಸ ಪೋಸ್ಟ್ಪೇಯ್ಡ್ ಪ್ಲಾನ್ಗಳಲ್ಲಿ ಗ್ರಾಹಕರಿಗೆ ವರ್ಷಕ್ಕೆ ಒಂದು ಬಾರಿ ಉಚಿತ ಅಂತರರಾಷ್ಟ್ರೀಯ ರೋಮಿಂಗ್ ಸೌಲಭ್ಯ ನೀಡುವುದಾಗಿ ತಿಳಿಸಿದೆ.
ಅಕ್ಟೋಬರ್ 8, 2026ರಿಂದ ಜಾರಿಗೆ ಬರಲಿರುವ ಈ ಯೋಜನೆಯಡಿ, ಪ್ರತಿ ಸಿಮ್ಗೆ ವರ್ಷಕ್ಕೆ ಒಂದು ಉಚಿತ ಅಂತರರಾಷ್ಟ್ರೀಯ ಪ್ರವಾಸದ ರೋಮಿಂಗ್ ಸೌಲಭ್ಯ ದೊರೆಯಲಿದೆ. ಉಚಿತ ರೋಮಿಂಗ್ ಪ್ಯಾಕ್ 5 ದಿನಗಳ ಅವಧಿಯನ್ನು ಹೊಂದಿದ್ದು, 5GB ಡೇಟಾ, 60 ನಿಮಿಷಗಳ ಕರೆಗಳು, 25 ಹೊರಹೋಗುವ ಎಸ್ಎಂಎಸ್ಗಳು ಹಾಗೂ ಉಚಿತ ಒಳಬರುವ ಎಸ್ಎಂಎಸ್ ಸೌಲಭ್ಯಗಳನ್ನು ಒಳಗೊಂಡಿದೆ. ಗ್ರಾಹಕರು ವಿದೇಶ ಪ್ರವಾಸದ ಸಂದರ್ಭದಲ್ಲಿ ತಮ್ಮ ಅಗತ್ಯಕ್ಕೆ ಅನುಗುಣವಾಗಿ ಈ ಪ್ಯಾಕ್ ಅನ್ನು ಸಕ್ರಿಯಗೊಳಿಸಬಹುದಾಗಿದೆ.
ಏರ್ಟೆಲ್ ಪೋಸ್ಟ್ಪೇಯ್ಡ್ ಫ್ಯಾಮಿಲಿ ಪ್ಲಾನ್ ಹೊಂದಿರುವ ಗ್ರಾಹಕರಿಗೆ, ಪ್ಲಾನ್ನಲ್ಲಿ ಒಳಗೊಂಡಿರುವ ಪ್ರತಿಯೊಬ್ಬ ಕುಟುಂಬ ಸದಸ್ಯರಿಗೂ ಈ ಉಚಿತ ಅಂತರರಾಷ್ಟ್ರೀಯ ರೋಮಿಂಗ್ ಪ್ರಯೋಜನ ಲಭ್ಯವಾಗಲಿದೆ.
ಹೊಸ ಪ್ಲಾನ್ಗಳಲ್ಲಿ ಉಚಿತ ರೋಮಿಂಗ್ ಮಾತ್ರವಲ್ಲದೆ, ಅನ್ಲಿಮಿಟೆಡ್ ಡೇಟಾ ಮತ್ತು ಕರೆಗಳು, 5ಜಿ ಫಾಸ್ಟ್ ಲೇನ್ ತಂತ್ರಜ್ಞಾನ, ಸ್ಪ್ಯಾಮ್ ಮತ್ತು ವಂಚನೆ ವಿರುದ್ಧ ನೆಟ್ವರ್ಕ್ ಮಟ್ಟದ ರಕ್ಷಣೆ, ವಿವಿಧ ಮನರಂಜನಾ ಚಂದಾದಾರಿಕೆಗಳು ಹಾಗೂ ಇತರ ಡಿಜಿಟಲ್ ಸೇವೆಗಳ ಪ್ರಯೋಜನಗಳನ್ನೂ ನೀಡಲಾಗಿದೆ.

ಹೊಸ ಯೋಜನೆಗಳಲ್ಲಿ ₹499 ವೈಯಕ್ತಿಕ ಪ್ಲಾನ್ನಿಂದ ₹1,799ರ ಐದು ಸದಸ್ಯರ ಕುಟುಂಬ ಪ್ಲಾನ್ವರೆಗೆ ಆಯ್ಕೆಗಳಿವೆ. ₹1,449 ಮತ್ತು ₹1,799 ಪ್ಲಾನ್ಗಳಲ್ಲಿ ನೆಟ್ಫ್ಲಿಕ್ಸ್ ಸೌಲಭ್ಯವೂ ದೊರೆಯಲಿದೆ. ಇತರ ಪ್ಲಾನ್ಗಳಲ್ಲಿ Amazon Prime, JioHotstar, Xstream Play Premium, Google One, Apple iCloud+ ಹಾಗೂ Apple Music ಸೇರಿದಂತೆ ವಿವಿಧ ಚಂದಾದಾರಿಕೆಗಳು ಲಭ್ಯವಿವೆ.
ಈ ಕುರಿತು ಮಾತನಾಡಿದ ಭಾರ್ತಿ ಏರ್ಟೆಲ್ನ ಮಾರ್ಕೆಟ್ ಆಪರೇಷನ್ಸ್ ನಿರ್ದೇಶಕ ಅಮಿತ್ ತ್ರಿಪಾಠಿ, ಪೋಸ್ಟ್ಪೇಯ್ಡ್ ಗ್ರಾಹಕರಿಗೆ ಅತ್ಯುತ್ತಮ ನೆಟ್ವರ್ಕ್ ಅನುಭವದ ಜೊತೆಗೆ ಮನರಂಜನೆ, ಡಿಜಿಟಲ್ ಸೇವೆಗಳು ಮತ್ತು ಸುರಕ್ಷತಾ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಹೊಸ ಪ್ರಯೋಜನಗಳನ್ನು ಸೇರ್ಪಡೆಗೊಳಿಸಲಾಗಿದೆ ಎಂದು ತಿಳಿಸಿದರು. ಉಚಿತ ಅಂತರರಾಷ್ಟ್ರೀಯ ರೋಮಿಂಗ್ ಸೌಲಭ್ಯವು ಗ್ರಾಹಕರಿಗೆ ಹೆಚ್ಚಿನ ಮೌಲ್ಯ ನೀಡಲಿದೆ ಎಂದರು.
ಹೊಸ ಪ್ಲಾನ್ಗಳು ಅಕ್ಟೋಬರ್ 8ರಿಂದ ಲಭ್ಯವಾಗಲಿದ್ದು, ಹಾಲಿ ಏರ್ಟೆಲ್ ಪ್ರಿಪೇಯ್ಡ್ ಅಥವಾ ಪೋಸ್ಟ್ಪೇಯ್ಡ್ ಗ್ರಾಹಕರು Airtel App ಮೂಲಕ ಅಥವಾ ಸಮೀಪದ ಏರ್ಟೆಲ್ ಸ್ಟೋರ್ಗೆ ಭೇಟಿ ನೀಡಿ ಈ ಪ್ಲಾನ್ಗಳಿಗೆ ಅಪ್ಗ್ರೇಡ್ ಆಗಬಹುದು. ಇತರ ನೆಟ್ವರ್ಕ್ಗಳ ಗ್ರಾಹಕರು ಸಹ ಏರ್ಟೆಲ್ಗೆ ಪೋರ್ಟ್ ಆಗುವ ಮೂಲಕ ಹೊಸ ಪೋಸ್ಟ್ಪೇಯ್ಡ್ ಯೋಜನೆಗಳನ್ನು ಪಡೆಯಬಹುದಾಗಿದೆ.
