ಚನ್ನರಾಯಪಟ್ಟಣ: ಮೈಸೂರು ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯಮಟ್ಟದ 10,000 ಮೀಟರ್ ಟ್ರ್ಯಾಕ್ ಓಟದ ಸ್ಪರ್ಧೆಯಲ್ಲಿ ಮೈಸೂರಿನ ಯುವರಾಜ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ ಹಾಗೂ ಚನ್ನರಾಯಪಟ್ಟಣದ ಶ್ರೀಮತಿ ಜ್ಯೋತಿಲಕ್ಷ್ಮಿ ಮತ್ತು ಶ್ರೀ ಸಿ.ಎನ್. ಅರುಣ್ ಕುಮಾರ್ ಅವರ ದ್ವಿತೀಯ ಪುತ್ರ ಸಿ.ಎ. ಸೃಜನ್ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.
ರಾಜ್ಯಮಟ್ಟದ 10,000 ಮೀಟರ್ ಟ್ರ್ಯಾಕ್ ಓಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಸೃಜನ್, ಪ್ರಥಮ ಸ್ಥಾನ ಗಳಿಸುವ ಮೂಲಕ ಮುಂಬರುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಸ್ಪರ್ಧೆಯಲ್ಲಿ ಸಾಧನೆ ಮಾಡಿದ ಸೃಜನ್ ಅವರನ್ನು ಮೈಸೂರು ವಿಶ್ವವಿದ್ಯಾಲಯದ ವತಿಯಿಂದ ಪ್ರಶಸ್ತಿ ಪತ್ರ ಹಾಗೂ ಚಿನ್ನದ ಪದಕ ನೀಡಿ ಸನ್ಮಾನಿಸಲಾಯಿತು.

ಸೃಜನ್ ಅವರಿಗೆ ತರಬೇತಿ ನೀಡುತ್ತಿರುವ ಮೈಸೂರಿನ ಮಹಾರಾಜ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಟಿ.ಎಸ್. ರವಿ ಅವರು ತಮ್ಮ ಶಿಷ್ಯನ ಸಾಧನೆಗೆ ಅಭಿನಂದನೆ ಸಲ್ಲಿಸಿ, ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿಯೂ ಅತ್ಯುತ್ತಮ ಪ್ರದರ್ಶನ ನೀಡಿ ಕರ್ನಾಟಕ ರಾಜ್ಯ ಹಾಗೂ ಮೈಸೂರು ವಿಶ್ವವಿದ್ಯಾಲಯಕ್ಕೆ ಕೀರ್ತಿ ತರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸೃಜನ್ ಅವರ ಪೋಷಕರಾದ ಶ್ರೀಮತಿ ಜ್ಯೋತಿಲಕ್ಷ್ಮಿ, ಅರುಣ್ ಕುಮಾರ್ ಸೇರಿದಂತೆ ಶಿವಣ್ಣ, ಭಾಗ್ಯ, ಪ್ರಮೋದ್, ಸಿ.ಎ. ದೀಕ್ಷಿತ್ ಹಾಗೂ ಇತರರು ಉಪಸ್ಥಿತರಿದ್ದು ಸೃಜನ್ ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದರು.
- ಚಂದ್ರಚೂಡ ಕೆ.ಬಿ.
