ನವದೆಹಲಿ: ಏರ್ ಮಾರ್ಷಲ್ ಆಶುತೋಷ್ ದೀಕ್ಷಿತ್ ಅವರನ್ನು ಮುಂದಿನ ಭಾರತೀಯ ವಾಯುಪಡೆ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಹಾಲಿ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಅವರು ಅಕ್ಟೋಬರ್ 31ರಂದು ನಿವೃತ್ತಿಯಾಗಲಿದ್ದು, ಅವರ ಉತ್ತರಾಧಿಕಾರಿಯಾಗಿ ಆಶುತೋಷ್ ದೀಕ್ಷಿತ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಹಾಗೂ ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿರುವ ದೀಕ್ಷಿತ್ ಅವರು 1986ರ ಡಿಸೆಂಬರ್ನಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನ ವಿಭಾಗಕ್ಕೆ ನಿಯೋಜನೆಗೊಂಡಿದ್ದರು.
3,500 ಗಂಟೆಗೂ ಹೆಚ್ಚು ಯುದ್ಧ ವಿಮಾನ ಹಾರಾಟದ ಅನುಭವ ಹೊಂದಿರುವ ಅವರು, ಕಾರ್ಗಿಲ್ ಯುದ್ಧದಲ್ಲೂ ಭಾಗವಹಿಸಿದ್ದರು. ಕಳೆದ ವರ್ಷದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಸಂದರ್ಭದಲ್ಲಿ ವಾಯುಪಡೆಯ ಕಾರ್ಯಾಚರಣೆಗಳನ್ನು ಮುನ್ನಡೆಸಿದ್ದರು.
ಸ್ವದೇಶಿ ನಿರ್ಮಿತ ಎಲ್ಸಿಎ ತೇಜಸ್ ಯುದ್ಧ ವಿಮಾನ ಯೋಜನೆಯಲ್ಲಿಯೂ ಆಶುತೋಷ್ ದೀಕ್ಷಿತ್ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ಅವರ ಸುದೀರ್ಘ ಸೇವಾ ಅನುಭವ ಮತ್ತು ವಿವಿಧ ಪ್ರಮುಖ ಜವಾಬ್ದಾರಿಗಳ ಹಿನ್ನೆಲೆಯಲ್ಲಿ ಅವರನ್ನು ಮುಂದಿನ ವಾಯುಪಡೆ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ.
