ನವದೆಹಲಿ: ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಡುವಿನ ಜಂಟಿ ಸೇನಾ ಸಮರಾಭ್ಯಾಸ ‘ಮೌಂಟನ್ ಗಾರ್ಡಿಯನ್ 2026’ ಅಕ್ಟೋಬರ್ 5ರಿಂದ ಉತ್ತರಾಖಂಡದ ಚೌಬಾಟಿಯಾದ ಫಾರಿನ್ ಟ್ರೈನಿಂಗ್ ನೋಡ್ನಲ್ಲಿ ಆರಂಭಗೊಂಡಿದೆ.
ಅಕ್ಟೋಬರ್ 5ರಿಂದ 18ರವರೆಗೆ ನಡೆಯಲಿರುವ ಈ ಸಮರಾಭ್ಯಾಸದಲ್ಲಿ ಭಾರತ ಮತ್ತು ಯುಎಇ ಸೇನೆಗಳ ತಲಾ ಸಮಾನ ಸಂಖ್ಯೆಯ ಸಿಬ್ಬಂದಿ ಸೇರಿದಂತೆ ಒಟ್ಟು 92 ಯೋಧರು ಭಾಗವಹಿಸುತ್ತಿದ್ದಾರೆ.
ಭಾರತೀಯ ಸೇನೆಯ ಭೈರವ್ ಬೆಟಾಲಿಯನ್ ಹಾಗೂ ಯುಎಇ ಸೇನೆಯ ಮೌಂಟನ್ ಇನ್ಫ್ಯಾಂಟ್ರಿ ಬೆಟಾಲಿಯನ್ ಈ ಜಂಟಿ ಸಮರಾಭ್ಯಾಸದಲ್ಲಿ ಪಾಲ್ಗೊಂಡಿವೆ.
ಎರಡೂ ದೇಶಗಳ ಸೇನೆಗಳ ನಡುವೆ ಪರ್ವತ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ, ಪರಸ್ಪರ ಸಮನ್ವಯ ಹಾಗೂ ಕಾರ್ಯಾಚರಣಾ ಅನುಭವವನ್ನು ಹೆಚ್ಚಿಸುವುದು ಈ ರೀತಿಯ ಜಂಟಿ ಸಮರಾಭ್ಯಾಸಗಳ ಪ್ರಮುಖ ಉದ್ದೇಶವಾಗಿದೆ.
ಈ ಬಾರಿಯ ಸಮರಾಭ್ಯಾಸದ ವಿಶೇಷತೆಯೆಂದರೆ ಭಾರತ ಮತ್ತು ಯುಎಇ ಎರಡೂ ಸೇನೆಗಳ ಮಹಿಳಾ ಅಧಿಕಾರಿಗಳು ಹಾಗೂ ಯೋಧರು ಸಹ ಸಕ್ರಿಯವಾಗಿ ಭಾಗವಹಿಸುತ್ತಿರುವುದು.
