ಕೆ.ಆರ್.ಪೇಟೆ, ಅ.07:* ತಾಲ್ಲೂಕಿನ ಸಂತೆಬಾಚಹಳ್ಳಿ ಹೋಬಳಿಯ ಆದಿಹಳ್ಳಿ ಗ್ರಾಮದಲ್ಲಿರುವ ನವೋದಯ ಮಾದರಿ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಹೆಚ್ಚುವರಿ ಶಾಲಾ ತರಗತಿ ಕೊಠಡಿ ಕಟ್ಟಡ, ವಿಜ್ಞಾನ ಪ್ರಯೋಗಾಲಯ (ಲ್ಯಾಬ್) ಹಾಗೂ ಗ್ರಂಥಾಲಯ ಕಟ್ಟಡಗಳ ಕಾಮಗಾರಿಗೆ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ಟಿ.ಮಂಜು ಅವರು ಇಂದು ವಿಧ್ಯುಕ್ತವಾಗಿ ಭೂಮಿಪೂಜೆ ನೆರವೇರಿಸಿದರು.
ಭೂಮಿಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಹೆಚ್.ಟಿ.ಮಂಜು ಅವರು, ವಸತಿ ಶಾಲೆಯ ಮಕ್ಕಳ ಭವಿಷ್ಯಕ್ಕಾಗಿ ನಿರ್ಮಾಣವಾಗುತ್ತಿರುವ ಈ ಕಟ್ಟಡಗಳ ಕಾಮಗಾರಿ ಅತ್ಯಂತ ಗುಣಮಟ್ಟದಿಂದ ಕೂಡಿರಬೇಕು ಎಂದು ಗುತ್ತಿಗೆದಾರರಿಗೆ ಮತ್ತು ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
*ಕಾಂಗ್ರೆಸ್ ಸರ್ಕಾರ ಅನುದಾನ ನೀಡುತ್ತಿಲ್ಲ, 2028ಕ್ಕೆ ಮೈತ್ರಿ ಸರ್ಕಾರ ಖಚಿತ*
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು ತಾಲೂಕಿನ ಜನತೆ ಈಗಾಗಲೇ ನನಗೆ ಒಮ್ಮೆ ಅಭೂತಪೂರ್ವ ಆಶೀರ್ವಾದ ಮಾಡಿದ್ದೀರಿ. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ನಮ್ಮ ತಾಲ್ಲೂಕಿನ ಅಭಿವೃದ್ಧಿಗೆ ನಿರೀಕ್ಷಿತ ಅಗತ್ಯ ಅನುದಾನ ನೀಡುತ್ತಿಲ್ಲ. ಹೆಚ್ಚು ಅನುಧಾನವನ್ನು ಗ್ಯಾರಂಟಿ ಯೋಜನೆಗಳಿಗೆ ನೀಡುತ್ತಿದೆ. ಇದರಿಂದ ತಾಲ್ಲೂಕಿನ ಅಭಿವೃದ್ದಿ ನನ್ನ ನಿರೀಕ್ಷೆಗೆ ಹಾಗೂ ಜನರ ನಿರೀಕ್ಷೆಗೆ ತಕ್ಕಂತೆ ಮಾಡಲು ಆಗುತ್ತಿಲ್ಲ ಎಂದು ರಾಜ್ಯ ಸರಕಾರವು ಅನುದಾನದ ನೀಡದೇ ಇರುವುದರ ವಿರುದ್ದ ಬೇಸರ ವ್ಯಕ್ತಪಡಿಸಿದರು. 2028ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುವುದು ಶೇ.100 ರಷ್ಟು ಖಚಿತ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

“ಆದ್ದರಿಂದ ಮತ್ತೊಮ್ಮೆ ನೀವು ನನಗೆ ಆಶೀರ್ವಾದ ಮಾಡಬೇಕು. ಮೈತ್ರಿ ಸರ್ಕಾರದಲ್ಲಿ ನನಗೆ ಸಚಿವನಾಗುವ ಅವಕಾಶ ಕೂಡಿಬರಲಿದೆ. ಆಗ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರೂಪಾಯಿ ಅನುದಾನ ತಂದು ತಾಲ್ಲೂಕನ್ನು ಮಾದರಿ ತಾಲ್ಲೂಕನ್ನಾಗಿ ಮಾಡುತ್ತೇನೆ” ಎಂದು ಭರವಸೆ ನೀಡಿದರು.
*ನನಗೆ ಬಿ.ಫಾರಂ ಖಚಿತ, ಗೊಂದಲ ಬೇಡ: ಹೆಚ್.ಟಿ.ಮಂಜು*
“2028ರ ವಿಧಾನಸಭಾ ಚುನಾವಣೆಗೆ ಮೈತ್ರಿ ಪಕ್ಷದಿಂದ ಜೆಡಿಎಸ್ ಅಭ್ಯರ್ಥಿಯಾಗಿ ನನಗೆ ಬಿ.ಫಾರಂ ಸಿಗುವುದು ಖಚಿತ. ಈ ಬಗ್ಗೆ ಕಾರ್ಯಕರ್ತರು ಯಾವುದೇ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ. ಮೈತ್ರಿ ಪಕ್ಷದ ರಾಜ್ಯ ಮಟ್ಟದ ನಾಯಕರು, ಜೆಡಿಎಸ್ ಪಕ್ಷದ ಹಾಲಿ ಶಾಸಕರೆಲ್ಲರಿಗೂ ಟಿಕೆಟ್ ಕೊಡುವ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನನಗೆ ಟಿಕೆಟ್ ಸಿಗುವುದು ಶೇ.100 ರಷ್ಟು ನಿಶ್ಚಿತ. ಹಾಗೆಯೇ ತಾಲ್ಲೂಕಿನ ಜನರ ಹಾಗೂ ಮುಖಂಡರ ಆಶೀರ್ವಾದದಿಂದ ಮತ್ತೊಮ್ಮೆ ಗೆಲ್ಲುವುದು ಅಷ್ಟೇ ಖಚಿತ” ಎಂದು ಶಾಸಕರು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಮಲ್ಲೇನಹಳ್ಳಿ ಎಂ. ಮೋಹನ್, ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ರಾಧಾಶ್ರೀ ನಾಗೇಶ್, ಮುಖಂಡರಾದ ಆದಿಹಳ್ಳಿ ನಾಗೇಶ್, ಮಹಾದೇವ್, ವಾಟರ್ ಮ್ಯಾನ್ ಮಂಜಣ್ಣ, ಗುಂಡಣ್ಣ, ಸೋಮಶೇಖರ್, ನಂಜುಂಡೇಗೌಡ, ಮನು, ರಾಜೇಗೌಡ, ಮಂಜೇಗೌಡ, ದೇವರಾಜು, ಚಿಕ್ಕಗೌಡ, ಎ.ಸಿ.ಮಂಜು, ಮಾಳಗೂರು ಹರೀಶ್, ನವೀನ್, ಕುಂದೂರು ವಾಸು, ಹುಬ್ಬನಹಳ್ಳಿ ಬಲರಾಮ್, ನಿರ್ಮಿತಿ ಕೇಂದ್ರದ ಇಂಜಿನಿಯರ್ ಹೇಮಂತ್, ವಸತಿ ಶಾಲೆಯ ಪ್ರಾಂಶುಪಾಲರು, ಶಿಕ್ಷಕರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮುಖಂಡರು, ಪೋಷಕರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
