ಶ್ಲೋಕ – 24
ತಸ್ಮಾದೋಮಿತ್ಯುದಾಹೃತ್ಯ ಯಜ್ಞದಾನತಪಃಕ್ರಿಯಾಃ ।
ಪ್ರವರ್ತಂತೇ ವಿಧಾನೋಕ್ತಾಃ ಸತತಂ ಬ್ರಹ್ಮವಾದಿನಾಮ್ ॥೨೪॥
ತಸ್ಮಾತ್ ಓಂ ಇತಿ ಉದಾಹೃತ್ಯ ಯಜ್ಞ ದಾನ ತಪಃ ಕ್ರಿಯಾಃ ।
ಪ್ರವರ್ತಂತೇ ವಿಧಾನ ಉಕ್ತಾಃ ಸತತಮ್ ಬ್ರಹ್ಮವಾದಿನಾಮ್ – ಆದ್ದರಿಂದ ಶಾಸ್ತ್ರದ ಕಟ್ಟಳೆಗೆ ಅನುಗುಣವಾದ, ಬ್ರಹ್ಮ ಚಿಂತಕರ ಯಜ್ಞ, ದಾನ ಮತ್ತು ತಪದ ಕ್ರಿಯೆಗಳು ಯಾವಾಗಲೂ ‘ಓಂ’ ಎಂದು ಭಗವಂತನ ನಾಮ ಸ್ಮರಣೆಯ ಜತೆಗೆಯೆ ತೊಡಗುತ್ತವೆ.
ಕರ್ಮದಲ್ಲಿ ಓಂಕಾರ ಬಳಕೆಯ ಮಹತ್ವವನ್ನು ಕೃಷ್ಣ ಇಲ್ಲಿ ವಿವರಿಸಿದ್ದಾನೆ. ನಮಗೆ ತಿಳಿದಂತೆ ಒಬ್ಬ ವೇದಜ್ಞನಾಗಬೇಕಾದರೆ ಆತನಿಗೆ ಓಂಕಾರದ ಉಪದೇಶವಾಗಿರಬೇಕು; ಯಜ್ಞದ ಆದಿ-ಅಂತದಲ್ಲಿ ಓಂಕಾರ ಹೇಳಬೇಕು; ವೇದ ಪಠಣದ ಆದಿ-ಅಂತದಲ್ಲಿ ಓಂಕಾರವಿರಬೇಕು. ಇದೆಲ್ಲವೂ ಹಿಂದಿನಿಂದಲೂ ಬಂದಿರುವ ಆಚರಣೆಗಳು. ನಾವು ಮಾಡುವ ಯಾವ ಕಾರ್ಯವೇ ಇರಲಿ, ಅದನ್ನು ಪ್ರಾರಂಭಿಸುವಾಗ “ಇದನ್ನು ಭಗವಂತನ ಪೂಜಾರೂಪವಾಗಿ ಮಾಡುತ್ತೇನೆ” ಎನ್ನುವ ಸಂಕಲ್ಪ ಮಾಡಿ ಮಾಡುವುದು ಮತ್ತು ಅಂತ್ಯದಲ್ಲಿ “ನಾನು ಮಾಡಿದ್ದನ್ನು ಭಗವಂತ ಸ್ವೀಕರಿಸಲಿ” ಎಂದು ಹೇಳುವುದು-ಇದರ ಮೂಲ ಉದ್ದೇಶ. ಹೀಗೆ ಓಂಕಾರ ಹೇಳಿಯೇ ಕರ್ಮ ಮಾಡಬೇಕು ಎನ್ನುವ ಆಚರಣೆ ಹಿಂದಿನಿಂದ ಬೆಳೆದುಬಂತು. ಈ ಅನುಸಂಧಾನದಿಂದ ನಾವು ಯಾವುದೇ ಪಾರಾಯಣ, ಹೋಮ, ಹವನ, ಯಜ್ಞ, ತಪಸ್ಸು, ದಾನ ಮಾಡಿದರೂ ಕೂಡ ಅದು ಸಾತ್ವಿಕ ಕರ್ಮವೆನಿಸುತ್ತದೆ.
