ಚನ್ನರಾಯಪಟ್ಟಣ: ತಾಲ್ಲೂಕು ಕಚೇರಿ ಎದುರು ನಿರ್ಮಿಸಲಾಗಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಪದೇಪದೇ ಮುಂದೂಡುತ್ತಿರುವುದನ್ನು ಖಂಡಿಸಿ ದಲಿತಪರ, ರೈತಪರ, ಕಾರ್ಮಿಕ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಮೆ ಅನಾವರಣಕ್ಕೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ವಿಳಂಬ ಮಾಡುತ್ತಿರುವುದನ್ನು ಆಕ್ಷೇಪಿಸಿದ ಪ್ರತಿಭಟನಾಕಾರರು, ಅನಿರ್ದಿಷ್ಟಾವಧಿ ಧರಣಿ ನಡೆಸಿ ಆಡಳಿತ ವ್ಯವಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೂಡಲೇ ಪ್ರತಿಮೆ ಅನಾವರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ದಲಿತ ಮುಖಂಡ ಶಂಕರ್ ಮಾತನಾಡಿ, ತಾಲೂಕಿನ ಎಲ್ಲ ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ಸಭೆ ನಡೆಸಿ ನವೆಂಬರ್ 30ರಂದು ಅಂಬೇಡ್ಕರ್ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಸಾರ್ವಜನಿಕರು ಆಗಮಿಸುವಂತೆ ಗ್ರಾಮಗಳಾದ್ಯಂತ ಮಾಹಿತಿ ನೀಡಿವೆ. ಈಗ ಏಕಾಏಕಿ ಕಾರ್ಯಕ್ರಮ ಮುಂದೂಡಿರುವುದು ಸಾರ್ವಜನಿಕರಿಗೆ ಒಪ್ಪಿಗೆಯಾಗದ ವಿಚಾರವಾಗಿದೆ ಎಂದರು.

ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕಾಗಿ ಈಗಾಗಲೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಗ್ರಾಮಗಳಿಗೆ ಭೇಟಿ ನೀಡಿ ಜನರನ್ನು ಕರೆತರಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನೂ ಪೂರ್ಣಗೊಳಿಸಲಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ನವೆಂಬರ್ 30ರ ಕಾರ್ಯಕ್ರಮವನ್ನು ಮುಂದೂಡಬಾರದು. ಯಾರೇ ಬಂದರೂ, ಬರದಿದ್ದರೂ ಅಂದು ಸಾರ್ವಜನಿಕರ ಸಮ್ಮುಖದಲ್ಲಿ ಬೋಧಿಸತ್ವ ಅಂಬೇಡ್ಕರ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿಯೇ ತೀರುತ್ತೇವೆ ಎಂದು ಘೋಷಿಸಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಮಂಜುನಾಥ್ ಮಾತನಾಡಿ, ಅಂಬೇಡ್ಕರ್ ಪ್ರತಿಮೆಯನ್ನು ಸ್ಥಾಪನೆಗಾಗಿ ತರಿಸಿ ಒಂದು ವರ್ಷ ಎರಡು ತಿಂಗಳು ಕಳೆದಿದ್ದರೂ ಇದುವರೆಗೂ ಅನಾವರಣಗೊಳಿಸದಿರುವುದು ಬೇಸರದ ಸಂಗತಿ. ಕಳೆದ ವರ್ಷ ಜನವರಿ 26ರಂದು ಪ್ರತಿಮೆ ಅನಾವರಣಗೊಳಿಸಲು ಉದ್ದೇಶಿಸಲಾಗಿತ್ತು. ಆದರೆ, ವಿವಿಧ ಕಾರಣಗಳಿಂದ ಸಾಧ್ಯವಾಗಿರಲಿಲ್ಲ. ಬಳಿಕ ತಾಲೂಕು ಆಡಳಿತ ಸಭೆ ನಡೆಸಿ ನವೆಂಬರ್ 26ರಂದು ದಿನಾಂಕ ನಿಗದಿಪಡಿಸಿತಾದರೂ ಅಂದೂ ಕಾರ್ಯಕ್ರಮ ನಡೆಯಲಿಲ್ಲ. ನಂತರ ಮತ್ತೆ ಸಭೆ ನಡೆಸಿ ನವೆಂಬರ್ 30ರಂದು ಅನಾವರಣಗೊಳಿಸಲು ತೀರ್ಮಾನಿಸಲಾಗಿತ್ತು ಎಂದು ತಿಳಿಸಿದರು.
ಆದರೆ, ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯಕ್ರಮಕ್ಕೆ ಗೈರಾಗುವ ಹಿನ್ನೆಲೆಯಲ್ಲಿ ನವೆಂಬರ್ 30ರಂದು ನಿಗದಿಯಾಗಿರುವ ಕಾರ್ಯಕ್ರಮವೂ ಮುಂದೂಡಿಕೆಯಾಗುವ ಸಾಧ್ಯತೆಯಿದೆ ಎಂಬ ಮಾಹಿತಿ ಲಭ್ಯವಾಗಿದೆ. ರಾಜಕೀಯ ಪಕ್ಷಗಳ ಪ್ರತಿಷ್ಠೆ ಹಾಗೂ ವಿವಿಧ ಕಾರಣಗಳಿಂದ ಅಂಬೇಡ್ಕರ್ ಪ್ರತಿಮೆ ಅನಾವರಣ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದಲಿತ ಮುಖಂಡ ವಿರೂಪಾಕ್ಷಪುರ ಪ್ರಕಾಶ್ ಮಾತನಾಡಿ, ನವೆಂಬರ್ 30ರಂದು ಪ್ರತಿಮೆ ಅನಾವರಣಗೊಳಿಸಲು ತಾಲೂಕು ಆಡಳಿತ ಕೂಡಲೇ ಕ್ರಮ ಕೈಗೊಳ್ಳಬೇಕು. ಅಂದು ಆಡಳಿತ ವ್ಯವಸ್ಥೆಯಿಂದ ಕಾರ್ಯಕ್ರಮ ನಡೆಯದಿದ್ದರೆ, ತಾಲೂಕಿನ ಎಲ್ಲ ದಲಿತಪರ ಹಾಗೂ ಪ್ರಗತಿಪರ ಸಂಘಟನೆಗಳು ಒಗ್ಗೂಡಿ ಸ್ವತಃ ಪ್ರತಿಮೆಯನ್ನು ಅನಾವರಣಗೊಳಿಸಲಿವೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ದಲಿತಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಿ.ಎಸ್. ರವಿ, ಅಂಬೇಡ್ಕರ್ ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಈಶ್ವರನ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರಾಮಚಂದ್ರ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಪ್ಪ, ದಲಿತ ಮುಖಂಡರಾದ ಆಲದಹಳ್ಳಿ ವೆಂಕಟೇಶ್, ದಿಂಡಗೂರು ಗೋವಿಂದ, ವಿರೂಪಾಕ್ಷಪುರ ಪ್ರಕಾಶ್, ಸಿ.ಜಿ. ಸೋಮಶೇಖರ್, ಕುರುವಂಕ ಮಂಜುನಾಥ್, ದಮ್ಮನಿಂಗಲ ಶಂಕರ್, ರವಿಕುಮಾರ್, ಟಿ.ಡಿ. ಹರೀಶ್, ವೆಂಕಟೇಶ್, ನರಸಿಂಹಮೂರ್ತಿ, ಅಣ್ಣಪ್ಪ, ಶಂಕರಪ್ಪ, ಗೋವಿನಕೆರೆ ತೇಜಸ್, ಜೋಗಿಪುರ ಮಂಜೇಗೌಡ, ಭೂಮಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಂಕರಲಿಂಗೇಗೌಡ, ಗೌರವ ಅಧ್ಯಕ್ಷ ರಾಜಕುಮಾರ್, ಡಿಶ್ ಕುಮಾರ, ಟೈಲರ್ ಕುಮಾರ್, ಮುಸ್ಲಿಂ ಮುಖಂಡ ಸಯೀದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ : ಐ ಕೆ ಮಂಜುನಾಥ್
