ಕೆ.ಆರ್.ಪೇಟೆ: ಬದಲಾದ ಕಾಲಘಟ್ಟದಲ್ಲಿ ಯುವಕರ ಚಿಂತನೆಗಳು ಬದಲಾಗುತ್ತಿದ್ದು, ಕ್ರೀಡಾ ಚಟುವಟಿಕೆಗಳತ್ತ ಅವರ ಆಸಕ್ತಿ ಕಡಿಮೆಯಾಗುತ್ತಿದೆ. ಆರೋಗ್ಯವನ್ನು ಕಾಪಾಡುವ ಕ್ರೀಡೆಗಳ ಮಹತ್ವದ ಕುರಿತು ಯುವಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಸಮಾಜಸೇವಕ ಆರ್.ಟಿ.ಓ. ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಸ್ನೇಹಜೀವಿ ಯುವಕರ ಬಳಗದ ವತಿಯಿಂದ ಮಹಾಲಯ ಅಮಾವಾಸ್ಯೆ ಹಾಗೂ ಪಿತೃಪಕ್ಷದ ಅಂಗವಾಗಿ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಎಸ್.ಎಲ್.ಎನ್.ಸಿ. ಕಪ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹಿಂದೆ ಜನಪ್ರಿಯವಾಗಿದ್ದ ಅನೇಕ ಜನಪದ ಆಟಗಳು ಇಂದು ಮರೆಯಾಗುತ್ತಿವೆ. ಆಧುನಿಕ ಕ್ರೀಡೆಗಳ ಬಗ್ಗೆಯೂ ಯುವಕರು ಆಸಕ್ತಿ ತೋರುತ್ತಿಲ್ಲ. ಮೊಬೈಲ್ ಬಳಕೆಯಲ್ಲಿ ಹೆಚ್ಚು ಸಮಯ ಕಳೆಯುತ್ತಿರುವ ಯುವಕರು ಉತ್ತಮ ಹವ್ಯಾಸಗಳಿಂದ ದೂರವಾಗುತ್ತಿದ್ದಾರೆ. ಸರ್ಕಾರ ಕ್ರೀಡೆಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಯುವಕರು ಅವುಗಳನ್ನು ಸದ್ಬಳಕೆ ಮಾಡಿಕೊಂಡು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಪುರಸಭೆ ಉಪಾಧ್ಯಕ್ಷೆ ವೀಣಾ ಗುಡಿ, ಆರೋಗ್ಯಯುತ ಮನಸ್ಸು ಹಾಗೂ ಸದೃಢ ದೇಹವನ್ನು ಹೊಂದಲು ಕ್ರೀಡೆಗಳು ಅತ್ಯಗತ್ಯ. ಶಾಲಾ-ಕಾಲೇಜು ಹಂತದಲ್ಲಿಯೇ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಶಾಲಾ-ಕಾಲೇಜುಗಳ ವ್ಯಾಪ್ತಿಯನ್ನು ಮೀರಿ ಸಾರ್ವಜನಿಕ ಮಟ್ಟದಲ್ಲಿಯೂ ಕ್ರೀಡೆಗಳಿಗೆ ಉತ್ತೇಜನ ನೀಡುವಲ್ಲಿ ದಸರಾ ಕ್ರೀಡಾಕೂಟಗಳಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ. ಜೀವನದಲ್ಲಿ ಶಿಸ್ತು ಬೆಳೆಸಿಕೊಳ್ಳಲು ಹಾಗೂ ದೈಹಿಕ ಸದೃಢತೆಯನ್ನು ಕಾಪಾಡಿಕೊಳ್ಳಲು ಕ್ರೀಡೆಗಳು ಸಹಕಾರಿಯಾಗಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸ್ನೇಹಜೀವಿ ಯುವಕರ ಬಳಗದ ಪದಾಧಿಕಾರಿಗಳು, ಸದಸ್ಯರು ಹಾಗೂ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.
ವರದಿ: ಮನು ಮಾಕವಳ್ಳಿ, ಕೆ.ಆರ್.ಪೇಟೆ
