ರಾಮನಾಥಪುರ, ಅ. 10: ಮಳೆಯ ಕೊರತೆಯಿಂದ ಬರದ ಬೇಗೆಯಲ್ಲಿ ನರಳುತ್ತಿರುವ ರಾಮನಾಥಪುರ ಹೋಬಳಿಯ ರಾಗಿಮರೂರು ಸೇರಿದಂತೆ ವಿವಿಧ ಗ್ರಾಮಗಳ ಕೆರೆಗಳಿಗೆ ಕಂಡಲಕ್ಕನಕಟ್ಟೆಯಿಂದ ನೀರು ಹರಿಸುವಂತೆ ಮಾಜಿ ಸಚಿವ ಕೆ.ಬಿ. ಮಲ್ಲಪ್ಪ ಅವರ ಪುತ್ರ ಹಾಗೂ ಸಮಾಜಸೇವಕ ಡಾ. ಮೋಹನ್ ಮಲ್ಲಪ್ಪ ಒತ್ತಾಯಿಸಿದ್ದಾರೆ.

ರಾಮನಾಥಪುರ ಹೋಬಳಿಯ ಮಲ್ಲಾಪುರ, ಹರಳಹಳ್ಳಿ, ಸೋಂಪುರ, ಕೆರಗೋಡು, ಲಕ್ಕೂರು, ರಾಗಿಮರೂರು ಸೇರಿದಂತೆ ಹಲವು ಗ್ರಾಮಗಳ ಕೆರೆಗಳಿಗೆ ನೀರು ಹರಿಸಿದರೆ ಈ ಭಾಗದ ರೈತರು, ಸಾರ್ವಜನಿಕರು ಹಾಗೂ ಜಾನುವಾರುಗಳಿಗೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಹಾಸನ ಮತ್ತು ಮೈಸೂರು ಜಿಲ್ಲೆಗಳ ಗಡಿಭಾಗದಲ್ಲಿರುವ ಅರಕಲಗೂಡು ಹಾಗೂ ಪಿರಿಯಾಪಟ್ಟಣ ತಾಲ್ಲೂಕಿನ ಗ್ರಾಮಗಳ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ನೀರಾವರಿ ಯೋಜನೆಗೆ ಹಿಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಅವಧಿಯಲ್ಲಿ ಶಂಕುಸ್ಥಾಪನೆ ನೆರವೇರಿಸಿ ಕಾಮಗಾರಿ ಆರಂಭಿಸಲಾಗಿತ್ತು. ನಂತರ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಪ್ರತಿವರ್ಷ ಕೆರೆಗಳಿಗೆ ನೀರು ಹರಿಸಲಾಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.
ರಾಮನಾಥಪುರ ಹೋಬಳಿಯ ಮಲ್ಲಾಪುರ, ರಾಗಿಮರೂರು, ಹರಳಹಳ್ಳಿ, ಕೆರಗೋಡು ಹಾಗೂ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ, ಹಡಗನಹಳ್ಳಿ, ಸುರಗಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಕೆರೆಗಳಿಗೆ ಈ ಹಿಂದೆ ಪ್ರತಿವರ್ಷ ನೀರು ಹರಿಸಲಾಗುತ್ತಿತ್ತು. ಆದರೆ, ಈ ವರ್ಷ ಮಳೆಯ ಕೊರತೆಯಿಂದಾಗಿ ನೀರು ಹರಿಸದ ಕಾರಣ ಕೆರೆಗಳು ಬತ್ತಿಹೋಗಿದ್ದು, ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಕೆರೆಕಟ್ಟೆಗಳಿಗೆ ನೀರು ಹರಿಸಿ ಜನರು ಹಾಗೂ ಜಾನುವಾರುಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಡಾ. ಮೋಹನ್ ಮಲ್ಲಪ್ಪ ಮನವಿ ಮಾಡಿದ್ದಾರೆ.

ಶೀಘ್ರ ನೀರು ಹರಿಸಲು ಕ್ರಮ: ಶಾಸಕ ಎ. ಮಂಜು
ಕಂಡಲಕ್ಕನಕಟ್ಟೆಯಿಂದ ರಾಗಿಮರೂರು, ಹಡಗನಹಳ್ಳಿ, ಸೋಂಪುರ, ಕೆರಗೋಡು, ಮಲ್ಲಾಪುರ ಸೇರಿದಂತೆ ವಿವಿಧ ಗ್ರಾಮಗಳ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಆದಷ್ಟು ಬೇಗ ಕೆರೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅರಕಲಗೂಡು ಕ್ಷೇತ್ರದ ಶಾಸಕ ಎ. ಮಂಜು ಭರವಸೆ ನೀಡಿದ್ದಾರೆ.
ವರದಿ : ಕುಮಾರಸ್ವಾಮಿ, ರಾಮನಾಥಪುರ
