ರಾಮನಾಥಪುರ: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ರಾಮನಾಥಪುರದ ಚತುರ್ಯುಗ ಮೂರ್ತಿ ಶ್ರೀ ರಾಮೇಶ್ವರಸ್ವಾಮಿ ದೇವಾಲಯದ ಪೌಳಿಗಳ ಜೀರ್ಣೋದ್ಧಾರ ಕಾಮಗಾರಿಗೆ ₹4.40 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಶಾಸಕ ಎ. ಮಂಜು ಅವರು ಪ್ರವಾಸೋದ್ಯಮ ಸಚಿವರಲ್ಲಿ ಮನವಿ ಮಾಡಿದ್ದಾರೆ.
ಕಾವೇರಿ ನದಿ ದಂಡೆಯಲ್ಲಿರುವ ಪುರಾತನ ಶ್ರೀ ರಾಮೇಶ್ವರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾಹಿತಿ ಪಡೆದ ಅವರು, ದೇವಾಲಯದ ಪೌಳಿಗಳು ಶಿಥಿಲಗೊಂಡಿರುವ ಬಗ್ಗೆ ಗಮನ ಸೆಳೆದರು.

ದೇವಾಲಯದ ಪೌಳಿಗಳಲ್ಲಿರುವ 36 ಶಿವಲಿಂಗಗಳು, ಇಂದ್ರಾಕ್ಷಿ ಅಮ್ಮ, ಈಸಲಾಕ್ಷಿಮ್ಮ ಹಾಗೂ ಶ್ರೀ ಶಂಕರಾಚಾರ್ಯರು ಪ್ರತಿಷ್ಠಾಪಿಸಿದ್ದಾರೆ ಎನ್ನಲಾದ ಶ್ರೀಚಕ್ರ ಸೇರಿದಂತೆ ಧಾರ್ಮಿಕ ಮಹತ್ವದ ಸನ್ನಿಧಿಗಳ ಮೇಲ್ಛಾವಣಿಯ ಆರ್ಸಿಸಿ ರಚನೆ ಶಿಥಿಲಗೊಂಡಿದೆ. ಮಳೆ ಬಂದಾಗ ನೀರು ಸೋರಿಕೆಯಾಗುತ್ತಿದ್ದು, ಪೌಳಿಯ ಕೆಲವು ಭಾಗಗಳು ಕುಸಿದು ಹಾನಿಗೀಡಾಗಿವೆ. ಹೀಗಾಗಿ ತುರ್ತಾಗಿ ದುರಸ್ತಿ ಮತ್ತು ಜೀರ್ಣೋದ್ಧಾರ ಕಾಮಗಾರಿಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.
ಈ ಹಿಂದೆ ಪ್ರವಾಸೋದ್ಯಮ ಸಚಿವರಾಗಿದ್ದ ಎಚ್.ಕೆ. ಪಾಟೀಲ್ ಅವರಿಗೆ ದೇವಾಲಯದ ಉಳಿಕೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ₹4.40 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಲಾಗಿತ್ತು. ಆಗ ಪ್ರಸ್ತಾವನೆಯನ್ನು ಸ್ವೀಕರಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಲಾಗಿತ್ತು ಎಂದು ಎ. ಮಂಜು ತಿಳಿಸಿದರು.
ಪ್ರಸ್ತುತ ದೇವಾಲಯದ ಪೌಳಿಗಳ ದುರಸ್ತಿ ಹಾಗೂ ಜೀರ್ಣೋದ್ಧಾರ ಕಾಮಗಾರಿಗಳನ್ನು ಕೈಗೊಳ್ಳಲು ಅಗತ್ಯ ಅನುದಾನವನ್ನು ಬಿಡುಗಡೆ ಮಾಡಿ, ಪುರಾತನ ದೇವಾಲಯದ ಸಂರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಈಗಿನ ಪ್ರವಾಸೋದ್ಯಮ ಸಚಿವರಲ್ಲಿ ಮನವಿ ಮಾಡಿರುವುದಾಗಿ ಅವರು ಹೇಳಿದರು.
– ಕುಮಾರಸ್ವಾಮಿ ಎಂ.ಎನ್.
