“ನೂರು ಸಿನಿಮಾಗಳಲ್ಲಿ ನಟಿಸಬೇಕೆಂಬ ಕನಸು ಹೊತ್ತು ಬೆಂಗಳೂರಿಗೆ ಬಂದೆ. ಆದರೆ ಮಾಡಲು ಸಾಧ್ಯವಾಗಿದ್ದು ಒಂದೇ ಸಿನಿಮಾ. ಅದರ ಹೆಸರು ‘ಮಂದಾಕಿನಿ’. ಕಥೆ, ಸಾಹಿತ್ಯ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಎಲ್ಲವೂ ನನ್ನದೇ.
ನೋಡಿದವರು ಸುಮಾರು ಒಂದು ಸಾವಿರ ಮಂದಿ. ಚಿತ್ರದಲ್ಲಿ ಮನರಂಜನೆಗೇನೂ ಕೊರತೆಯಿರಲಿಲ್ಲ. ಆದರೆ ಅದೃಷ್ಟ ಕೈಹಿಡಿಯಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಎಷ್ಟು ಮಂದಿ ನೋಡಿದ್ದಾರೋ ಗೊತ್ತಿಲ್ಲ” ಎಂದು ರಂಗಭೂಮಿ, ಸಾಹಿತ್ಯ ಹಾಗೂ ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ರಮೇಶ್ ಸುರ್ವೆ ತಮ್ಮ ಸಿನಿಪಯಣದ ಅನುಭವ ಹಂಚಿಕೊಂಡರು.

“ಬಾನಿಗೆ ಭಾಸ್ಕರ ಚೆಂದ…” ಎಂಬ ತಮ್ಮ ಗೀತೆಗೆ 2008ರಲ್ಲಿ ಹಿನ್ನೆಲೆ ಗಾಯಕಿ ನಂದಿತಾ ಅವರು ಪ್ರಶಸ್ತಿ ಪಡೆದದ್ದು ಸಂತಸದ ಸಂಗತಿ ಎಂದು ಅವರು ಸ್ಮರಿಸಿದರು.
ರಮೇಶ್ ಸುರ್ವೆ ನನಗೆ ಹಲವು ವರ್ಷಗಳಿಂದ ಪರಿಚಿತರು. ‘ಸುರ್ವೆ ಪತ್ರಿಕೆ’ ಹಾಗೂ ‘ಇಂಜಿನಿಯರ್ ಡೈರಿ’ ಪತ್ರಿಕೆಗಳ ಸಂಪಾದಕರಾಗಿರುವ ಅವರು ಸಿನಿಮಾ ಕ್ಷೇತ್ರದಲ್ಲಿ ನಿರೀಕ್ಷಿತ ಯಶಸ್ಸು ಕಾಣದಿದ್ದರೂ ಸಾಹಿತ್ಯ ಮತ್ತು ಬರವಣಿಗೆಯ ನಂಟನ್ನು ಎಂದಿಗೂ ಕಳೆದುಕೊಂಡಿಲ್ಲ. ಅವರ ಬದುಕಿನ ಪಯಣದ ಪುಟಗಳನ್ನು ತಿರುವಿದಾಗ ರಂಗಭೂಮಿಯ ಮೇಲಿನ ಅಪಾರ ಪ್ರೀತಿ, ಕಲಾಸಕ್ತಿಯ ಹಿಂದೆ ಇದ್ದ ಪರಿಶ್ರಮ ಹಾಗೂ ಸಾಹಿತ್ಯದ ಒಲವು ಅನಾವರಣಗೊಳ್ಳುತ್ತವೆ.

ಕಲೆಯ ವಾತಾವರಣದಲ್ಲಿ ಅರಳಿದ ಪ್ರತಿಭೆ
ರಮೇಶ್ ಸುರ್ವೆ ಅವರು 1958ರ ಮೇ 5ರಂದು ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಇಟಗಿ ಗ್ರಾಮದಲ್ಲಿ ಜನಿಸಿದರು. ಮಹಾದೇವ ದೇವಸ್ಥಾನದಿಂದ ಐತಿಹಾಸಿಕ ಮಹತ್ವ ಪಡೆದಿರುವ ಇಟಗಿಯ ಪರಿಸರದಲ್ಲಿ ಬೆಳೆದ ಅವರು ಪಿಯುಸಿವರೆಗೆ ವಿದ್ಯಾಭ್ಯಾಸ ಮಾಡಿದರು.
ತಂದೆ ಮಾರುತಿರಾವ್ ಸುರ್ವೆ ಜೂನಿಯರ್ ಕಾಲೇಜಿನ ಉಪನ್ಯಾಸಕರು. ಅಜ್ಜ ಗೋವಿಂದರಾವ್ ಸುರ್ವೆ ಕರಾರು ಪತ್ರ ಹಾಗೂ ಆಸ್ತಿ ಪತ್ರಗಳನ್ನು ಬರೆಯುವುದರಲ್ಲಿ ಪರಿಣತ ಕರಣಿಕರಾಗಿದ್ದರು. ಚಿಕ್ಕಪ್ಪ ಕೇಶವರಾವ್ ಭಜನಾ ಕಲಾವಿದರಾಗಿದ್ದರೆ, ಮಾವ ವಾಸುದೇವರಾವ್ ಬಯಲಾಟದಲ್ಲಿ ಆಂಜನೇಯನ ಪಾತ್ರ ನಿರ್ವಹಿಸುತ್ತಿದ್ದರು. ಕುಟುಂಬದ ಈ ಕಲಾ ಮತ್ತು ಸಾಹಿತ್ಯದ ವಾತಾವರಣ ಸಹಜವಾಗಿಯೇ ಸುರ್ವೆ ಅವರ ಮೇಲೆ ಪ್ರಭಾವ ಬೀರಿತು.
ಅವರ ಮೊದಲ ಕವಿತೆ ‘ಮೊರಾರ್ಜಿ ಸ್ವಾಗತ ಗೀತೆ’. ಅದನ್ನು ಬರೆದು ವಾಚಿಸುವ ಮೂಲಕ ಸಾಹಿತ್ಯ ಲೋಕದತ್ತ ಮೊದಲ ಹೆಜ್ಜೆ ಇಟ್ಟರು. ಕವಿ ದಿನಕರ ದೇಸಾಯಿ ಅವರ ಚುಟುಕುಗಳು ಅವರಿಗೆ ಅಚ್ಚುಮೆಚ್ಚು. ಅವರ ಕವಿತೆಗಳು ‘ದುಡಿಮೆ’, ‘ವಾಸವಿ’, ‘ವಿಶ್ವ ಪರ್ಯಟನೆ’ ಹಾಗೂ ‘ವಿನೋದವಾಣಿ’ ಪತ್ರಿಕೆಗಳಲ್ಲಿ ಪ್ರಕಟಗೊಂಡವು.
ಪ್ರಾಚಾರ್ಯ ಸೂರ್ಯನಾರಾಯಣರಾವ್ ಅವರ ಪ್ರೋತ್ಸಾಹದಿಂದ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಹತ್ತು ನಿಮಿಷಗಳ ಭೀಮನ ಏಕಪಾತ್ರಾಭಿನಯದಲ್ಲಿ ಗದೆ ಎತ್ತಿ ಆರ್ಭಟಿಸುತ್ತಿದ್ದ ಅವರ ಅಭಿನಯ ಪ್ರೇಕ್ಷಕರ ಗಮನ ಸೆಳೆಯುತ್ತಿತ್ತು. ಈ ಏಕಪಾತ್ರಾಭಿನಯ ಸುಮಾರು 85 ಪ್ರದರ್ಶನಗಳನ್ನು ಕಂಡಿರುವುದು ಅವರ ರಂಗಾಸಕ್ತಿಗೆ ಸಾಕ್ಷಿ.
18ನೇ ವಯಸ್ಸಿನಲ್ಲೇ ದ್ರೋಣಾಚಾರ್ಯನ ಪಾತ್ರ
ಸೇತು ಮಾದವರಾವ್ ಹಂಜಕ್ಕಿ ಅವರ ಮಾರ್ಗದರ್ಶನದಲ್ಲಿ ‘ಕುರುಕ್ಷೇತ್ರ’ ನಾಟಕದಲ್ಲಿ ದ್ರೋಣಾಚಾರ್ಯನ ಪಾತ್ರ ನಿರ್ವಹಿಸಿದಾಗ ಸುರ್ವೆ ಅವರಿಗೆ ಕೇವಲ 18 ವರ್ಷ ವಯಸ್ಸು. ಆರಂಭದಲ್ಲಿ ಗುಬ್ಬಿ ಕಂಪನಿಯೊಂದಿಗೆ ಒಂದು ವರ್ಷ ಒಡನಾಟ ಹೊಂದಿದ್ದರು. ಚಿತ್ರನಟಿ ಶೃತಿ ಅವರ ತಾಯಿ ರಾಧಾ ರುಕ್ಮಿಣಿ ಅವರು ಲವ-ಕುಶರ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಕಾಲವದು.
ಸುರ್ವೆ ಅವರಲ್ಲಿದ್ದ ರಂಗಾಸಕ್ತಿಯನ್ನು ಗಮನಿಸಿದ ವೀರಣ್ಣನವರು ತಮ್ಮ ಕ್ಯಾಂಟೀನ್ನಲ್ಲಿ ಊಟ-ತಿಂಡಿ ನೀಡುವ ಮೂಲಕ ಪ್ರೋತ್ಸಾಹಿಸಿದರು. ಇದು ಅವರ ಕಲಾಪ್ರೀತಿಗೆ ಮತ್ತಷ್ಟು ಬಲ ತುಂಬಿತು.
ನಂತರ ಕುಕನೂರು ರಹಮಾನ್ ಕಂಪನಿ, ಮಹಾಂತೇಶ ಶಾಸ್ತ್ರಿಗಳ ಕಂಪನಿ, ಹಾರಾಪುರ ರಾಮರಾವ್ ದೇಸಾಯಿ ಕಂಪನಿ, ಬನಶಂಕರಿ ನಾಟ್ಯ ಸಂಘ ಹಾಗೂ ಹುಮ್ನಾಬಾದ್ ಕಂಪನಿಗಳೊಂದಿಗೆ ಒಡನಾಟ ಬೆಳೆಸಿಕೊಂಡರು. ಈ ಕಂಪನಿಗಳಲ್ಲಿ ಹೆಚ್ಚಾಗಿ ಏಕದೃಶ್ಯದ ಪಾತ್ರಗಳಿಗೆ ಸೀಮಿತರಾಗಿದ್ದರೂ, ಅಭಿನಯದ ಅನುಭವವನ್ನು ಸಮೃದ್ಧಗೊಳಿಸಿಕೊಂಡರು.
ದಿಗ್ಗಜರ ಒಡನಾಟದಲ್ಲಿ ಕಲಿಕೆಯ ಪಯಣ
1977ರಲ್ಲಿ ಬೆಂಗಳೂರಿಗೆ ಬಂದ ಸುರ್ವೆ ಅವರು ಆದರ್ಶ ಫಿಲಂ ಇನ್ಸ್ಟಿಟ್ಯೂಟ್ಗೆ ಸೇರಿದರು. ಅಲ್ಲಿ ಬಿ.ವಿ. ಕಾರಂತರು ಮತ್ತು ಗಿರೀಶ್ ಕಾಸರವಳ್ಳಿ ಅವರಂತಹ ಗಣ್ಯರ ಮಾರ್ಗದರ್ಶನ ದೊರೆಯಿತು. ಗಿರೀಶ್ ಕಾರ್ನಾಡ್, ಪಿ. ಲಂಕೇಶ್, ನಾಗಾಭರಣ, ಟಿ.ಎಸ್. ರಂಗ, ಜಿ.ವಿ. ಅಯ್ಯರ್, ಸುಂದರರಾಜ್, ಆರ್.ಟಿ. ರಮಾ ಹಾಗೂ ರಾಜನ್-ನಾಗೇಂದ್ರ ಸೇರಿದಂತೆ ಅನೇಕ ದಿಗ್ಗಜರ ಪಾಠ ಮತ್ತು ಒಡನಾಟ ಅವರ ಕಲಾಪಯಣಕ್ಕೆ ಹೊಸ ಆಯಾಮ ನೀಡಿತು.
1978ರಲ್ಲಿ ಬಂಗಾಳಿ ನಾಟಕವೊಂದನ್ನು ಕನ್ನಡಕ್ಕೆ ರೂಪಾಂತರಿಸಿ ‘ಪರಮೇಶಿ ಪಂಗನಾಮ’ ಎಂಬ ನಾಟಕ ರಚಿಸಿದರು. ಈ ನಾಟಕ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡು ಸುಮಾರು 20 ಪ್ರಯೋಗಗಳನ್ನು ಕಂಡಿತು. ಹಾಸ್ಯನಟ ವೈಜನಾಥ ಬಿರಾದಾರ್ ಅವರೊಂದಿಗೆ ನಟಿಸಿದ್ದು ವಿಶೇಷ ಅನುಭವವಾಗಿತ್ತು.
‘ಕುಟುಂಬದಲ್ಲಿ ಕುರುಕ್ಷೇತ್ರ’, ‘ಜಲೀಲನ ಜಟಕಾ’ ಹಾಗೂ ‘ಕಿತಾಪತಿ ಕೃಷ್ಣಯ್ಯ’ ಅವರ ಇತರ ನಾಟಕಗಳು. ಹಾಸ್ಯವೇ ಈ ನಾಟಕಗಳ ಜೀವಾಳವಾಗಿತ್ತು. ಮೈಸೂರು ರಮಾನಂದ, ವೈಜನಾಥ ಬಿರಾದಾರ್ ಹಾಗೂ ಜಯಶ್ರೀ ಅವರಂತಹ ಕಲಾವಿದರೊಂದಿಗೆ ರಂಗ ಹಂಚಿಕೊಂಡ ಅನುಭವವೂ ಅವರಿಗಿದೆ.
ಏಕಪಾತ್ರಾಭಿನಯದಲ್ಲಿ ಐತಿಹಾಸಿಕ ವ್ಯಕ್ತಿಗಳ ಆವಾಹನೆ
ಸುರ್ವೆ ಅವರು 30 ನಿಮಿಷಗಳ ಅವಧಿಯ ಪೌರಾಣಿಕ, ಐತಿಹಾಸಿಕ ಹಾಗೂ ಸಾಮಾಜಿಕ ಏಕಪಾತ್ರಾಭಿನಯಗಳ ಚಿತ್ರಕಥೆಗಳನ್ನು ರಚಿಸಿ ಅಭಿನಯಿಸಿದ್ದಾರೆ. ಛತ್ರಪತಿ ಶಿವಾಜಿ, ಕೆಂಪೇಗೌಡ ಸೇರಿದಂತೆ ಹಲವು ಐತಿಹಾಸಿಕ ವ್ಯಕ್ತಿಗಳ ವೇಷ ಧರಿಸಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಆ ಸಂದರ್ಭಗಳ ಛಾಯಾಚಿತ್ರಗಳು ಅವರ ನೆನಪಿನ ಆಲ್ಬಂನಲ್ಲಿ ಇಂದಿಗೂ ಸ್ಥಾನ ಪಡೆದಿವೆ.
ಸಿನಿಮಾ ಕ್ಷೇತ್ರದಲ್ಲಿ ನೂರು ಚಿತ್ರಗಳಲ್ಲಿ ನಟಿಸುವ ಕನಸು ಕಂಡಿದ್ದ ಸುರ್ವೆ ಅವರಿಗೆ ಆ ಕನಸನ್ನು ಸಂಪೂರ್ಣವಾಗಿ ನನಸಾಗಿಸಲು ಸಾಧ್ಯವಾಗಲಿಲ್ಲ. ಆದರೆ ರಂಗಭೂಮಿ, ನಾಟಕ ರಚನೆ, ಸಾಹಿತ್ಯ, ಪತ್ರಿಕೋದ್ಯಮ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮದೇ ಆದ ಅನುಭವದ ಸಂಪತ್ತನ್ನು ಗಳಿಸಿದ್ದಾರೆ.
ಒಂದು ಸಿನಿಮಾ ಮಾತ್ರ ಮಾಡಿದರೂ ಕಲೆಯ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. ಸಿನಿಮಾ ಕೈಹಿಡಿಯದಿದ್ದರೂ ಬರವಣಿಗೆ ಕೈಬಿಡಲಿಲ್ಲ. ರಂಗಭೂಮಿಯ ಅನುಭವ, ಸಾಹಿತ್ಯದ ಒಲವು ಮತ್ತು ಪತ್ರಿಕೋದ್ಯಮದ ಪಯಣವನ್ನು ಜೊತೆಯಾಗಿಸಿಕೊಂಡು ಸಾಗುತ್ತಿರುವ ರಮೇಶ್ ಸುರ್ವೆ ಅವರ ಬದುಕು, ಯಶಸ್ಸು ಸಿಕ್ಕರೂ ಸಿಗದಿದ್ದರೂ ಕಲಾಸಕ್ತಿಯೇ ಕಲಾವಿದನನ್ನು ಮುನ್ನಡೆಸುತ್ತದೆ ಎಂಬುದಕ್ಕೆ ಒಂದು ನಿದರ್ಶನ.

ಗೊರೂರು ಅನಂತರಾಜು, ಹಾಸನ
