ಶ್ಲೋಕ – 04
ನಿಶ್ಚಯಂ ಶೃಣು ಮೇ ತತ್ರ ತ್ಯಾಗೇ ಭರತಸತ್ತಮ ।
ತ್ಯಾಗೋ ಹಿ ಪುರುಷವ್ಯಾಘ್ರ ತ್ರಿವಿಧಃ ಸಂಪ್ರಕೀರ್ತಿತಃ ॥೪॥
ನಿಶ್ಚಯಮ್ ಶೃಣು ಮೇ ತತ್ರ ತ್ಯಾಗೇ ಭರತಸತ್ತಮ ।
ತ್ಯಾಗಃ ಹಿ ಪುರುಷವ್ಯಾಘ್ರ ತ್ರಿವಿಧಃ ಸಂಪ್ರಕೀರ್ತಿತಃ — ಭರತಸತ್ತಮ, ಅದರಲ್ಲಿ ತ್ಯಾಗದ ಬಗ್ಗೆ ನನ್ನ ನಿರ್ಧಾರ ಕೇಳು. ಪುರುಷವ್ಯಾಘ್ರ, ಮೂರು ಬಗೆಯ ತ್ಯಾಗ ಉಕ್ತವಾಗಿದೆ.
“ತ್ಯಾಗದ ವಿಷಯದಲ್ಲಿ ನಿಶ್ಚಿತವಾದ ಅಭಿಪ್ರಾಯವನ್ನು ನಿನಗೆ ಹೇಳುತ್ತೇನೆ” ಎನ್ನುತ್ತಾನೆ ಕೃಷ್ಣ. ಹೇಗೆ ಯಜ್ಞ-ದಾನ-ತಪಸ್ಸು ಮೂರು ವಿಧವೋ ಹಾಗೇ ತ್ಯಾಗವೂ ಕೂಡ ಮೂರು ವಿಧ. ಅದನ್ನು ಕೃಷ್ಣ ಅರ್ಜುನನಿಗೆ ವಿವರಿಸುತ್ತಾನೆ. ಇಲ್ಲಿ ಕೃಷ್ಣ ಅರ್ಜುನನನ್ನು ಭರತಸತ್ತಮ ಮತ್ತು ಪುರುಷವ್ಯಾಘ್ರ ಎಂದು ಸಂಬೋಧಿಸಿದ್ದಾನೆ. ಭರತವಂಶದ ಅರಸರ ಮಾಲಿಕೆಯಲ್ಲಿ ಗಣ್ಯನಾದ್ದರಿಂದ ಅರ್ಜುನ ಭರತಸತ್ತಮ-ಇದು ಮೇಲ್ನೋಟದ ಅರ್ಥ.
ಭಗವಂತನಲ್ಲಿ ಮತ್ತು ಜ್ಞಾನದಲ್ಲಿ ರತನಾದವ, ಭಕ್ತಿ ಉಳ್ಳವ ಭರತಸತ್ತಮ ಎನ್ನುವುದು ಈ ಸಂಬೋಧನೆಯ ಅಂತರಂಗದ ಅರ್ಥ. ಅದೇ ರೀತಿ ಪುರುಷವ್ಯಾಘ್ರ ಎಂದರೆ ಪುರುಷಶ್ರೇಷ್ಠ ಎಂದರ್ಥ. ಭಗವಂತನ ಕಡೆಗೆ ತಮ್ಮ ಮನಸ್ಸನ್ನು ಹರಿಯಗೊಟ್ಟವರು ಪುರುಷರು. ಅವರಲ್ಲಿ ಶ್ರೇಷ್ಠ-ಪುರುಷಶ್ರೇಷ್ಠ. ಅಂದರೆ ಜ್ಞಾನಿಗಳಲ್ಲಿ ಶ್ರೇಷ್ಠ ಎಂದರ್ಥ. ನಾವೂ ಕೂಡ ನಮ್ಮ ಜೀವನದಲ್ಲಿ ಭರತಸತ್ತಮರು, ಪುರುಷವ್ಯಾಘ್ರರು ಆಗಬೇಕು. ಆಗ ಭಗವಂತನ ಸಂದೇಶ ನಮಗೆ ತಲುಪುತ್ತದೆ.
