ರಾಮನಾಥಪುರ: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ರಾಮನಾಥಪುರದಲ್ಲಿ ಆಯುಧಪೂಜೆಯ ಅಂಗವಾಗಿ ಶ್ರೀ ಸುಬ್ರಹ್ಮಣ್ಯಸ್ವಾಮಿ, ಶ್ರೀ ಅಗಸ್ತೇಶ್ವರಸ್ವಾಮಿ ಹಾಗೂ ಶ್ರೀ ರಾಮೇಶ್ವರಸ್ವಾಮಿ ದೇವಾಲಯಗಳ ಉತ್ಸವ ಮೂರ್ತಿಗಳ ಮೆರವಣಿಗೆ ಮತ್ತು ಬನ್ನಿಮರದ ಪೂಜೆ ಸಾಂಗವಾಗಿ ನೆರವೇರಿತು.
ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಅರ್ಚಕ ವೇ. ಸೋಮಶೇಖರ್ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಮೂರು ದೇವಾಲಯಗಳ ಉತ್ಸವ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ರಾಜಬೀದಿಯ ಮೂಲಕ ಮೆರವಣಿಗೆ ನಡೆಸಿ, ಶ್ರೀ ರಾಮೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿರುವ ಅಶ್ವತ್ಥಕಟ್ಟೆಯಲ್ಲಿ ಪ್ರತಿಷ್ಠಾಪಿಸಲಾಯಿತು.

ನಂತರ ಬನ್ನಿಮರಕ್ಕೆ ಪೂಜೆ ಸಲ್ಲಿಸಿ, ಮಹಾಮಂಗಳಾರತಿ ನೆರವೇರಿಸಲಾಯಿತು. ಭಕ್ತರು ಬನ್ನಿಪತ್ರೆಯನ್ನು ಪರಸ್ಪರ ವಿನಿಮಯ ಮಾಡಿಕೊಂಡು ಹಬ್ಬದ ಶುಭಾಶಯಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಅರ್ಚಕ ಸೋಮಶೇಖರ್, ನಾಡಿನ ಜನತೆಗೆ ಆಯುಧಪೂಜೆ ಹಾಗೂ ವಿಜಯದಶಮಿ ಹಬ್ಬದ ಶುಭಾಶಯಗಳನ್ನು ಕೋರಿ, ಎಲ್ಲರ ಬದುಕಿನಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸಲಿ ಎಂದು ಹಾರೈಸಿದರು.
ಬೆಲೆ ಏರಿಕೆ ನಡುವೆಯೂ ಆಯುಧಪೂಜೆಗೆ ಬೂದುಗುಂಬಳ, ಹೂವು, ತರಕಾರಿ ಖರೀದಿ ಭರಾಟೆ
ಆಯುಧಪೂಜೆ ಹಾಗೂ ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ರಾಮನಾಥಪುರದ ಬಸವೇಶ್ವರ ವೃತ್ತದಲ್ಲಿ ಬೂದುಗುಂಬಳ, ಹೂವು ಹಾಗೂ ತರಕಾರಿಗಳ ಖರೀದಿ ಭರಾಟೆ ಕಂಡುಬಂದಿತು. ಬೆಲೆ ಏರಿಕೆಯ ನಡುವೆಯೂ ಜನರು ಹಬ್ಬದ ಪೂಜೆಗೆ ಅಗತ್ಯವಾದ ವಸ್ತುಗಳನ್ನು ಖರೀದಿಸಿದರು.
ಆಯುಧಪೂಜೆಯಲ್ಲಿ ಬೂದುಗುಂಬಳಕ್ಕೆ ವಿಶೇಷ ಮಹತ್ವವಿರುವುದರಿಂದ ಮನೆಗಳು, ಅಂಗಡಿಗಳು, ಕಚೇರಿಗಳು, ಕಾರ್ಖಾನೆಗಳು ಹಾಗೂ ವಾಹನಗಳ ಪೂಜೆಗೆ ಜನರು ಬೂದುಗುಂಬಳ ಖರೀದಿಸಿದರು. ಈ ಬಾರಿ ಮಳೆಯ ಕೊರತೆ ಹಾಗೂ ಬಿಸಿಲಿನ ಪರಿಣಾಮ ಬೆಲೆ ಏರಿಕೆಯಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶಗಳಿಂದ ತರಲಾದ ಬೂದುಗುಂಬಳ ಸಗಟು ಮಾರುಕಟ್ಟೆಯಲ್ಲಿ ಕೆ.ಜಿಗೆ ₹50ರಿಂದ ₹150ರವರೆಗೆ ಮಾರಾಟವಾಯಿತು. ಚಂಡುಹೂವು, ಕಾಕಡ, ಮಲ್ಲಿಗೆ ಮೊಗ್ಗು, ಸುಗಂಧರಾಜ ಹಾಗೂ ಸೇವಂತಿಗೆ ಹೂವುಗಳ ಬೆಲೆಯೂ ಹೆಚ್ಚಾಗಿದ್ದು, ಹೂವುಗಳ ದರ ₹60ರಿಂದ ₹100ರವರೆಗೆ ಇತ್ತು. ಬೆಲೆ ದುಬಾರಿಯಾದರೂ ಹಬ್ಬದ ಸಂಪ್ರದಾಯದಂತೆ ಜನರು ಅಗತ್ಯ ವಸ್ತುಗಳನ್ನು ಖರೀದಿಸಿ ಪೂಜೆ ನೆರವೇರಿಸಿದರು.
ಶ್ರೀ ರಾಮೇಶ್ವರಸ್ವಾಮಿ ದೇವಾಲಯದ ಮುಖ್ಯ ಅರ್ಚಕ ಶ್ರೀನಿವಾಸ್, ಸಹ ಅರ್ಚಕರಾದ ಅಭಿಷೇಕ್, ಗುಂಡಣ್ಣ, ಮಂಜುನಾಥ್ ಸೇರಿದಂತೆ ಹಲವು ಭಕ್ತರು ಭಾಗವಹಿಸಿದ್ದರು.
– ಕುಮಾರಸ್ವಾಮಿ ಎಂ.ಎನ್.
