ಚನ್ನರಾಯಪಟ್ಟಣ: ಸಿಂಹಾದ್ರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಬಳಿಕ ಸಿಇಟಿ ಮತ್ತು ನೀಟ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ವೈದ್ಯಕೀಯ, ತಾಂತ್ರಿಕ, ಕೃಷಿ ಶಿಕ್ಷಣ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಐವರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ಕಾಲೇಜಿನ ವಿದ್ಯಾರ್ಥಿನಿ ಲಕ್ಷ್ಮೀದೇವಿ ಸರ್ಕಾರಿ ಕೋಟಾದಲ್ಲಿ ಎಂಬಿಬಿಎಸ್ ಪ್ರವೇಶಕ್ಕೆ ಆಯ್ಕೆಯಾಗಿದ್ದಾರೆ. ಯದುನಂದನ್ ಐಐಟಿಗೆ ಆಯ್ಕೆಯಾಗಿದ್ದು, ಕಿಶೋರ್ ಮತ್ತು ಅಜಿತ್ ಕೃಷಿ ವಿಜ್ಞಾನ ಪದವಿ (ಬಿ.ಎಸ್ಸಿ. ಅಗ್ರಿಕಲ್ಚರ್) ಅಧ್ಯಯನಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿ ಯೋಗೇಶ್ ಕರ್ನಾಟಕ ರಾಜ್ಯ ಕಬಡ್ಡಿ ತಂಡಕ್ಕೆ ಆಯ್ಕೆಯಾಗುವ ಮೂಲಕ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ.
ಐವರು ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದ ಗಣ್ಯರು, ಅವರ ಪರಿಶ್ರಮ, ಶಿಸ್ತು ಮತ್ತು ಸಾಧನೆಯ ಹಾದಿಯನ್ನು ಶ್ಲಾಘಿಸಿದರು. ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಹಾಗೂ ನಿರಂತರ ಪ್ರಯತ್ನದಿಂದ ಉನ್ನತ ಅವಕಾಶಗಳನ್ನು ಪಡೆದುಕೊಂಡಿರುವುದು ಇತರ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳ ಸಾಧನೆಗೆ ಹರ್ಷ
ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಐವರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ವೈಯಕ್ತಿಕವಾಗಿ ಅಭಿನಂದಿಸುವುದರ ಜತೆಗೆ ಸಿಂಹಾದ್ರಿ ಶಿಕ್ಷಣ ಸಂಸ್ಥೆಯ ಪರವಾಗಿ ಹೃದಯಪೂರ್ವಕ ಶುಭಾಶಯಗಳನ್ನು ಸಲ್ಲಿಸುವುದಾಗಿ ತಿಳಿಸಿದರು. ವಿದ್ಯಾರ್ಥಿಗಳ ಸಾಧನೆಯ ಹಿಂದೆ ಸಂಸ್ಥೆಯ ಅಧ್ಯಕ್ಷ ಮಂಜಣ್ಣ, ಕಾರ್ಯದರ್ಶಿ ಚಂದ್ರಕಲಾ, ಖಜಾಂಚಿ ಭರತರಾಜ್, ಪ್ರಾಂಶುಪಾಲರು, ಉಪನ್ಯಾಸಕರು, ಆಡಳಿತ ಮಂಡಳಿ ಹಾಗೂ ಪೋಷಕರ ಸಹಕಾರ ಮಹತ್ವದ್ದಾಗಿದೆ ಎಂದು ಕೃತಜ್ಞತೆ ಸಲ್ಲಿಸಿದರು.

ಐವರು ವಿದ್ಯಾರ್ಥಿಗಳಿಗೆ ತಮ್ಮ ಪತ್ನಿಯರೊಂದಿಗೆ ಸನ್ಮಾನ ಸಲ್ಲಿಸಲು ಸಂತೋಷವಾಗುತ್ತಿದೆ ಎಂದು ತಿಳಿಸಿದ ಅವರು, ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ತಮ್ಮ ಆಯ್ಕೆಯ ಕ್ಷೇತ್ರಗಳಲ್ಲಿ ಇನ್ನಷ್ಟು ಸಾಧನೆ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲಿ ಎಂದು ಶುಭ ಹಾರೈಸಿದರು.
ಗಣ್ಯರ ಉಪಸ್ಥಿತಿ
ಕಾರ್ಯಕ್ರಮದಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಸಿ.ಕೆ. ಕುಸುಮರಾಣಿ, ಪುರಸಭೆಯ ಮಾಜಿ ಉಪಾಧ್ಯಕ್ಷ ಯೋಗೇಶ್, ಪುರಸಭಾ ಸದಸ್ಯ ರಾಮಕೃಷ್ಣ, ಸಿಂಹಾದ್ರಿ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳಾದ ಮಂಜುನಾಥ್, ಚಂದ್ರಕಲಾ, ಭರತರಾಜ್, ಜೆಡಿಎಸ್ ಯುವ ಮುಖಂಡ ಗೂರನಹಳ್ಳಿ ಶ್ರೀಧರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಮೂಲಕ ಶಿಕ್ಷಣ ಮತ್ತು ಕ್ರೀಡೆಯಲ್ಲಿ ಯುವಜನರು ಮುಂದುವರಿಯಲು ಪ್ರೋತ್ಸಾಹ ನೀಡಲಾಯಿತು.
– ಮಂಜುನಾಥ್ ಐ.ಕೆ.
