ಹಾಸನ: ವಿಶ್ವ ವೀರಶೈವ ಲಿಂಗಾಯತ ಮಹಾವೇದಿಕೆಯ ಹಾಸನ ಜಿಲ್ಲಾ ಮಾಜಿ ಅಧ್ಯಕ್ಷರು ಹಾಗೂ ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಯಡೂರು ಕುಮಾರ್ (62) ನಿಧನರಾಗಿದ್ದಾರೆ.
ಅಲೂರು ತಾಲ್ಲೂಕಿನ ಯಡೂರು ಗ್ರಾಮದವರಾದ ಅವರು ಪತ್ನಿ, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಇಂದು ಸಂಜೆ ಯಡೂರು ಗ್ರಾಮದಲ್ಲಿ ನೆರವೇರಿತು.
ಯಡೂರು ಕುಮಾರ್ ಅವರು ವಿಶ್ವ ವೀರಶೈವ ಲಿಂಗಾಯತ ಮಹಾವೇದಿಕೆಯ ಮೂಲಕ ಸಮಾಜದ ವಟುಗಳಿಗೆ ಉಚಿತ ಲಿಂಗಧಾರಣೆ ಸೇರಿದಂತೆ ಹಲವು ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಕಾರ್ಯಕರ್ತರಾಗಿಯೂ ಸೇವೆ ಸಲ್ಲಿಸಿದ್ದ ಅವರು ವಿವಿಧ ಸಂಘಟನೆಗಳಲ್ಲಿ ಕೆಲಸ ಮಾಡಿದ್ದರು.
ಅವರ ನಿಧನಕ್ಕೆ ವಿಶ್ವ ವೀರಶೈವ ಲಿಂಗಾಯತ ಮಹಾವೇದಿಕೆಯ ರಾಜ್ಯಾಧ್ಯಕ್ಷ ರಾಮನಾಥಪುರದ ಎಂ.ಎನ್. ಕುಮಾರಸ್ವಾಮಿ, ಹಾಸನ ಜಿಲ್ಲಾಧ್ಯಕ್ಷ ಹಳ್ಳಿಮೈಸೂರು ಪ್ರಕಾಶ್, ಹಾಸನ ತಾಲ್ಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
– ಕುಮಾರಸ್ವಾಮಿ ಎಂ.ಎನ್.
