ಹಾಸನ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘವು ಪ್ರತಿಯೊಬ್ಬ ನೌಕರನ ಶಕ್ತಿ ಕೇಂದ್ರವಾಗಿದೆ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗಟ್ಟಿನಿಂದ ಮುನ್ನಡೆದಾಗ ನೌಕರರ ಕುಂದುಕೊರತೆಗಳನ್ನು ಸುಲಭವಾಗಿ ಪರಿಹರಿಸಲು ಸಾಧ್ಯ ಎಂದು ಸಂಘದ ಹಾಸನ ಜಿಲ್ಲಾಧ್ಯಕ್ಷ ಬಿ.ಪಿ. ಕೃಷ್ಣೇಗೌಡ ಹೇಳಿದರು.
ನಗರದ ಹೃದಯಭಾಗದಲ್ಲಿರುವ ರಾಜ್ಯ ಸರಕಾರಿ ನೌಕರರ ಸಂಘದ ಸಭಾಂಗಣದಲ್ಲಿ ನಡೆದ ಹಾಸನ ಜಿಲ್ಲಾ ಸರಕಾರಿ ನೌಕರರ ಸಂಘದ 2025–26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಪ್ರತಿವರ್ಷ ನೌಕರರ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರತಿಭಾ ಪುರಸ್ಕಾರ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘದ ವತಿಯಿಂದ ಯಶಸ್ವಿಯಾಗಿ ಆಯೋಜಿಸಲಾಗುತ್ತಿದೆ. ಇದಕ್ಕೆ ಸದಸ್ಯರ ಸಹಕಾರವೇ ಮುಖ್ಯ ಕಾರಣ. ಮುಂದೆಯೂ ಇದೇ ರೀತಿಯ ಸಹಕಾರ ಮತ್ತು ಪ್ರೋತ್ಸಾಹ ಅಗತ್ಯವಿದೆ ಎಂದು ತಿಳಿಸಿದರು.
ಸಂಘದ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಹೊಸ ಮಳಿಗೆಗಳನ್ನು ನಿರ್ಮಿಸಲಾಗಿದೆ. ಅವುಗಳನ್ನು ಬಾಡಿಗೆಗೆ ನೀಡುವ ಮೂಲಕ ಸಂಘಕ್ಕೆ ನಿರಂತರ ಆದಾಯದ ಮೂಲ ಕಲ್ಪಿಸುವುದು ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಸಂಘದ ಕಾರ್ಯದರ್ಶಿ ಲಕ್ಷ್ಮೀಕಾಂತ್ ಅವರು 2025–26ನೇ ಸಾಲಿನ ಆದಾಯ ಮತ್ತು ವೆಚ್ಚಗಳ ವಿವರಗಳನ್ನು ಮಂಡಿಸಿದರು. ಸರ್ವ ಸದಸ್ಯರು ಇದಕ್ಕೆ ಒಪ್ಪಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯಾಧ್ಯಕ್ಷ ವಿಷ್ಣುಪ್ರಕಾಶ್, ಹಿರಿಯ ಉಪಾಧ್ಯಕ್ಷರಾದ ಗೋಪಾಲ್, ಲಕ್ಷ್ಮೀಶ್, ಪಾರ್ಥೇಶ್, ಆಲೂರು ತಾಲ್ಲೂಕು ಅಧ್ಯಕ್ಷ ಡಿ.ಎಂ. ವರದರಾಜು, ಅರಸೀಕೆರೆ ತಾಲ್ಲೂಕು ಅಧ್ಯಕ್ಷ ಜಯಣ್ಣ, ಅರಕಲಗೂಡು ತಾಲ್ಲೂಕು ಅಧ್ಯಕ್ಷ ಪುಟ್ಟರಾಜು, ಗೊರೂರು ಯೋಜನಾ ಘಟಕದ ಅಧ್ಯಕ್ಷ ಚನ್ನಕೇಶವ, ಉಪಾಧ್ಯಕ್ಷ ಮಧು, ಡಾ. ಪಲ್ಲವಿ, ಕ್ರೀಡಾ ಕಾರ್ಯದರ್ಶಿ ಆಶಾ, ರವೀಂದ್ರ, ವೆಂಕಟೇಶ್, ಆಲೂರು ತಾಲ್ಲೂಕು ಗೌರವಾಧ್ಯಕ್ಷ ಬಿ.ಆರ್. ಧರ್ಮ, ಸಂಘದ ನಿರ್ದೇಶಕರಾದ ಎಂ.ಆರ್. ಶ್ರೀನಿವಾಸ್, ಎಂ.ಆರ್. ವೇಣುಗೋಪಾಲ್, ಸಿ.ಎಸ್. ಅಣ್ಣಪ್ಪ, ಕೊಟ್ರೇಶ್ ಎಸ್. ಉಪ್ಪಾರ್ ಸೇರಿದಂತೆ ನೂರಾರು ಸಂಘದ ಸದಸ್ಯರು ಉಪಸ್ಥಿತರಿದ್ದರು.
