1. ನಾನು ಪಕ್ಷದ ಶಿಸ್ತಿನ ಸಿಪಾಯಿ, ನೊಟೀಸ್ ಗೆ 72 ಗಂಟೆಯಲ್ಲೇ ಉತ್ತರಿಸಿದ್ದೇನೆ: ಎಂ ಪಿ ರೇಣುಕಾಚಾರ್ಯ
ಬೆಂಗಳೂರು: ನಾನು ಬಿಜೆಪಿ ಶಿಸ್ತಿನ ಸಿಪಾಯಿಯಾಗಿದ್ದು ಕೇಂದ್ರೀಯ ಶಿಸ್ತು ಸಮಿತಿ ನೀಡಿದ ನೋಟಿಸ್ಗೆ ಉತ್ತರ ನೀಡಿದ್ದೇನೆ ಎಂದು ಮಾಜಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.
ಬಿಜೆಪಿಯ ಕೇಂದ್ರ ಶಿಸ್ತು ಸಮಿತಿಯು ಪಕ್ಷದ ಶಿಸ್ತು ಉಲ್ಲಂಘಿಸಿದ್ದಕ್ಕಾಗಿ ವಿವರಣೆ ನೀಡುವಂತೆ ಶೋ-ಕಾಸ್ ನೋಟಿಸ್ ನೀಡಿರುವ ಐದು ನಾಯಕರಲ್ಲಿ ರೇಣುಕಾಚಾರ್ಯ ಕೂಡ ಒಬ್ಬರಾಗಿದ್ದಾರೆ. ಶಿಸ್ತು ಸಮಿತಿ ನೊಟೀಸ್ ಬಗ್ಗೆ ಪ್ರತಿಕ್ರಿಯಿಸಿದ, ನಾನು 72 ಗಂಟೆಗಳ ಗಡುವಿನೊಳಗೆ ನನ್ನ ಉತ್ತರವನ್ನು ಸಲ್ಲಿಸಿದ್ದೇನೆ.
ನಾನು ರಾಷ್ಟ್ರೀಯ ನಾಯಕರ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ಯಡಿಯೂರಪ್ಪ, ರಾಜ್ಯಾಧ್ಯಕ್ಷರ ಬಗ್ಗೆ ಮಾತನಾಡಿದ್ದಕ್ಕೆ ನಾನು ಮಾತನಾಡಿದ್ದೇನೆ ಅಷ್ಟೇ. ಯಡಿಯೂರಪ್ಪ ವಿರುದ್ಧ ಸದನದ ಒಳಗೆ, ಹೊರಗೆ ಮಾತನಾಡಿ ಅಪಮಾನ ಮಾಡಿದ್ದರು ಎಂದರು.

***********************************************************************************************
2.ಅತಿದೊಡ್ಡ defence deal: 156 LCH ಪ್ರಚಂಡ್ ಹೆಲಿಕಾಪ್ಟರ್ ಖರೀದಿ ಒಪ್ಪಂದಕ್ಕೆ ಸಹಿ! ಕರ್ನಾಟಕದಲ್ಲೇ ನಿರ್ಮಾಣ
ನವದೆಹಲಿ: ಭಾರತೀಯ ಸೇನೆ ಮತ್ತು ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ (HAL) ನಡುವೆ ಅತೀ ದೊಡ್ಡ ರಕ್ಷಣಾ ಒಪ್ಪಂದ ಏರ್ಪಟ್ಟಿದೆ. ಭಾರತ ಸರ್ಕಾರವು 62,000 ಕೋಟಿ ರೂ. ಮೌಲ್ಯದ 156 ಎಲ್ಸಿಎಚ್ ಪ್ರಚಂಡ್ ಹೆಲಿಕಾಪ್ಟರ್ಗಳನ್ನು ಖರೀದಿಸಲು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ. ಆ ಮೂಲಕ ಇದುವರೆಗಿನ ಅತಿದೊಡ್ಡ ರಕ್ಷಣಾ ಒಪ್ಪಂದ ಎಂಬ ಕೀರ್ತಿಗೆ ಇದು ಪಾತ್ರವಾಗಿದೆ. ಭಾರತವು ಶುಕ್ರವಾರ ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ನಿಂದ ಭಾರತೀಯ ಸೇನೆ ಮತ್ತು ವಾಯುಪಡೆಗಾಗಿ 156 ನಿರ್ಮಿತ ಲೈಟ್ ಕಾಂಬ್ಯಾಟ್ (LCH) ಪ್ರಚಂಡ್ ಹೆಲಿಕಾಪ್ಟರ್ಗಳನ್ನು ಖರೀದಿಸಲು ತನ್ನ ಅತಿದೊಡ್ಡ ರಕ್ಷಣಾ ಒಪ್ಪಂದಕ್ಕೆ ಅನುಮೋದನೆ ನೀಡಿದೆ. ಈ ಒಪ್ಪಂದವು 62,000 ಕೋಟಿ ರೂ. ಮೌಲ್ಯದ್ದಾಗಿದ್ದು, ಇಂದು ನಡೆದ ಸಭೆಯಲ್ಲಿ ಭದ್ರತೆ ಕುರಿತ ಸಂಪುಟ ಸಮಿತಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ.
***************************************************************************************************************************
3. 2024 ಸಮೀಕ್ಷೆ: ಕರ್ನಾಟಕದ 5 ಅಭಯಾರಣ್ಯಗಳಲ್ಲಿರುವ ಹುಲಿಗಳ ಸಂಖ್ಯೆ 393
ಬೆಂಗಳೂರು: ಕರ್ನಾಟಕದ ಐದು ಹುಲಿ ಅಭಯಾರಣ್ಯಗಳಲ್ಲಿ ಹುಲಿಗಳ ಅಂದಾಜು ಸಂಖ್ಯೆ 393 ಆಗಿದೆ, ಕಳೆದ ವರ್ಷ ರಾಜ್ಯ ಸರ್ಕಾರ ನಡೆಸಿದ ನಾಲ್ಕನೇ ಹಂತದ ಮೇಲ್ವಿಚಾರಣಾ ಸಮೀಕ್ಷೆಯಿಂದ ಇದು ತಿಳಿದುಬಂದಿದೆ. ದೇಶದ ಹುಲಿ ಅಭಯಾರಣ್ಯದಲ್ಲಿ ನಡೆಸಲಾದ ವಾರ್ಷಿಕ ಮೇಲ್ವಿಚಾರಣಾ ಸಮೀಕ್ಷೆಯ ಭಾಗವಾಗಿ 2023ರ ನವೆಂಬರ್ ಮತ್ತು ಫೆಬ್ರವರಿ 2024ರ ಮಧ್ಯೆ ನಾಗರಹೊಳೆ, ಬಂಡೀಪುರ, ಭದ್ರಾ, ಬಿಳಿಗಿರಿ ರಂಗನಾಥ ಸ್ವಾಮಿ ದೇವಸ್ಥಾನ(BRT) ಮತ್ತು ಕಾಳಿ(ದಾಂಡೇಲಿ-ಅಂಶಿ) ಅಭಯಾರಣ್ಯದಲ್ಲಿ ಸಮೀಕ್ಷೆ ನಡೆಸಲಾಯಿತು. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ(NTCA) ಪ್ರಕಾರ, ನಾಲ್ಕನೇ ಹಂತದ ಸಮೀಕ್ಷೆಯನ್ನು ಪ್ರತಿವರ್ಷ ಎಲ್ಲಾ ಹುಲಿ ಅಭಯಾರಣ್ಯದಲ್ಲಿ ನಡೆಸಲಾಗುತ್ತದೆ. ಸಮೀಕ್ಷೆ ನಂತರ, ಅರಣ್ಯ ಇಲಾಖೆ ಅದರ ಕರ್ನಾಟಕ ವನ್ಯಜೀವಿ ತಾಂತ್ರಿಕ ಕೋಶ ಮೂಲಕ ಹುಲಿಗಳ ಸಂತತಿ ಮತ್ತು ಇತರ ಸಸ್ತನಿಗಳ ಬಗ್ಗೆ 2024ರ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿತು.

********************************************************************************************************************
4. ಬೆಂಗಳೂರು: ಶೇ.29 ರಷ್ಟು ವಾಹನಗಳಿಗೆ ಮಾತ್ರ HSRP ಅಳವಡಿಕೆ; ಮತ್ತೆ ಗಡುವು ವಿಸ್ತರಣೆ ಸಾಧ್ಯತೆ!
ಬೆಂಗಳೂರು: ಮಾರ್ಚ್ 31 ರಂದು ಹೈ ಸೆಕ್ಯುರಿಟಿ ನೋಂದಣಿ ಫಲಕಗಳನ್ನು (HSRP) ಅಳವಡಿಸಲು ಅಧಿಕೃತ ಗಡುವು ಕೊನೆಗೊಳ್ಳಲಿದ್ದು, ಸುಮಾರು 2 ಕೋಟಿ ವಾಹನಗಳಲ್ಲಿ ಕೇವಲ 29 ಪ್ರತಿಶತ ವಾಹನಗಳು ಮಾತ್ರ ಅವುಗಳನ್ನು ಅಳವಡಿಸಿವೆ ಹೀಗಾಗಿ ಗಡುವು ಮತ್ತಷ್ಟು ವಿಸ್ತರಣೆಯಾಗುವ ಸಾಧ್ಯತೆಯಿದೆ. ಏಪ್ರಿಲ್ 1, 2019 ರ ಮೊದಲು ನೋಂದಾಯಿಸಲಾದ ವಾಹನಗಳಿಗೆ ನವೆಂಬರ್ 2023 ರ ಮೊದಲು HSRP ಅಳವಡಿಸಲು ರಾಜ್ಯ ಸರ್ಕಾರ ಆಗಸ್ಟ್ 2023 ರಲ್ಲಿ ಅಧಿಸೂಚನೆ ಹೊರಡಿಸಿತು, ಈ ಹೊಸ ನಂಬರ್ ಪ್ಲೇಟ್ ಅಳವಡಿಸುವುದರಿಂದ ವಾಹನ ಸುರಕ್ಷತೆ ಹೆಚ್ಚಿಸುವ, ವಾಹನಗಳ ಕಳ್ಳತನ ಮತ್ತು ದುರುಪಯೋಗವನ್ನು ತಡೆಯುವ ಮತ್ತು ಕಾನೂನು ಜಾರಿ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಅಳವಡಿಸಲಾಗಿದೆ ಎಂದು ಉಲ್ಲೇಖಿಸಿದೆ.
*****************************************************************************************************
5. ಮ್ಯಾನ್ಮಾರ್, ಥೈಲ್ಯಾಂಡ್ ನಲ್ಲಿ ಭೂಕಂಪಕ್ಕೆ ಮೃತಪಟ್ಟವರ ಸಂಖ್ಯೆ 150ಕ್ಕೆ ಏರಿಕೆ: ಭಾರತದಿಂದ ಅಗತ್ಯ ಪರಿಹಾರ ಸಾಮಗ್ರಿಗಳ ರವಾನೆ
ಬ್ಯಾಂಕಾಕ್: ಮ್ಯಾನ್ಮಾರ್ ಮತ್ತು ನೆರೆಯ ಥೈಲ್ಯಾಂಡ್ನಲ್ಲಿ ನಿನ್ನೆ ಶುಕ್ರವಾರ ಮಧ್ಯಾಹ್ನ ಹೊತ್ತಿಗೆ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಕಟ್ಟಡಗಳು, ಸೇತುವೆಗಳು, ರಸ್ತೆಗಳು, ಸಾರ್ವಜನಿಕ ಆಸ್ತಿಪಾಸ್ತಿಗಳು ನಾಶವಾಗಿದೆ. ಭೂಕಂಪಕ್ಕೆ ಸಂಬಂಧಪಟ್ಟ ಫೋಟೋ-ವಿಡಿಯೊಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು, ದೃಶ್ಯಗಳು ಭಯಾನಕವಾಗಿವೆ.
ಮ್ಯಾನ್ಮಾರ್ನಲ್ಲಿ ಭೂಕಂಪಕ್ಕೆ ಮೃತಪಟ್ಟವರ ಸಂಖ್ಯೆ 150ಕ್ಕೆ ಏರಿಕೆಯಾಗಿದೆ. ಭೂಕಂಪಕ್ಕೆ ಮ್ಯಾನ್ಮಾರ್ ನ ಎರಡು ನಗರಗಳು ತೀವ್ರವಾಗಿ ಹಾನಿಗೀಡಾಗಿವೆ. ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್ ನಲ್ಲಿ ನಿರ್ಮಾಣ ಹಂತದಲ್ಲಿದ್ದ ಎತ್ತರದ ಕಟ್ಟಡ ಕುಸಿದು ಕನಿಷ್ಠ 10 ಜನರು ಮೃತಪಟ್ಟಿದ್ದಾರೆ. ಸಾವು-ನೋವು ಗಾಯ ಮತ್ತು ವಿನಾಶದ ಸಂಪೂರ್ಣ ಪ್ರಮಾಣವು ತಕ್ಷಣಕ್ಕೆ ಸಿಕ್ಕಿಲ್ಲ. ವಿಶ್ವದ ಅತ್ಯಂತ ಬಡ ದೇಶಗಳಲ್ಲಿ ಒಂದಾದ ಮ್ಯಾನ್ಮಾರ್ ಈಗಾಗಲೇ ಅಂತರ್ಯುದ್ಧದಿಂದ ಸಿಲುಕಿಹಾಕಿಕೊಂಡಿದೆ.
ಭೂಕಂಪದಿಂದ ಜನರ ಸಾವಿನ ಸಂಖ್ಯೆ ಮತ್ತು ಗಾಯದ ಪ್ರಮಾಣಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮ್ಯಾನ್ಮಾರ್ನ ಮಿಲಿಟರಿ ಸರ್ಕಾರದ ಮುಖ್ಯಸ್ಥ, ಹಿರಿಯ ಜನರಲ್ ಮಿನ್ ಆಂಗ್ ಹ್ಲೈಂಗ್ ಅವರು ಸರ್ಕಾರಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಮ್ಯಾನ್ಮಾರ್ ನಲ್ಲಿ ಮೃತಪಟ್ಟವರ ಸಂಖ್ಯೆ 150ಕ್ಕೆ ಏರಿಕೆಯಾಗಿದ್ದು, 730 ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.



