ಕೆ.ಆರ್. ಪೇಟೆ: ಪಟ್ಟಣದ ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಕಳೆದ ನಾಲ್ಕು ತಿಂಗಳಿಂದ ವೇತನ ಪಾವತಿಸದಿರುವುದಕ್ಕೆ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ಸಿ. ಶಂಕರ್ ಅಂಕನಶೆಟ್ಟಿಪುರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 15 ದಿನಗಳೊಳಗೆ ಬಾಕಿ ವೇತನ ಪಾವತಿಸದಿದ್ದರೆ ಪುರಸಭೆಯ ಮುಖ್ಯಾಧಿಕಾರಿ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದ ಶಹರಿ ರೋಜ್ ಗಾರ್ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಪುರಸಭೆ ಆಡಳಿತ ಮಂಡಳಿಯ ಸಹಯೋಗದಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಭೆಯಲ್ಲಿ ಪೌರ ಕಾರ್ಮಿಕರು ಕಳೆದ ನಾಲ್ಕು ತಿಂಗಳಿಂದ ವೇತನ ದೊರೆಯದಿರುವ ಬಗ್ಗೆ ಆಯೋಗದ ಸದಸ್ಯರ ಗಮನಕ್ಕೆ ತಂದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಿ. ಶಂಕರ್, ಪ್ರಭಾರ ಮುಖ್ಯಾಧಿಕಾರಿ ಪ್ರಿಯಾಂಕ ಅವರಿಗೆ 15 ದಿನಗಳೊಳಗೆ ಬಾಕಿ ವೇತನ ಪಾವತಿಸಿ, ಅನುಪಾಲನಾ ವರದಿಯನ್ನು ರಾಜ್ಯ ಸಫಾಯಿ ಕರ್ಮಚಾರಿ ಆಯೋಗಕ್ಕೆ ಸಲ್ಲಿಸುವಂತೆ ಸೂಚಿಸಿದರು. ನಿಗದಿತ ಅವಧಿಯಲ್ಲಿ ವೇತನ ಪಾವತಿಸದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಇಎಸ್ಐ, ಪಿಎಫ್ ಸೌಲಭ್ಯ ಕಡ್ಡಾಯ
ಪೌರ ಕಾರ್ಮಿಕರಿಗೆ ಇಎಸ್ಐ ಮತ್ತು ಪಿಎಫ್ ಖಾತೆಗಳನ್ನು ತೆರೆಯಬೇಕು. ಸೇವಾ ದಾಖಲೆ ಪುಸ್ತಕ (ಎಸ್ಆರ್ ಬುಕ್) ನಿರ್ವಹಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದರ ಜತೆಗೆ ಕಾರ್ಮಿಕ ಇಲಾಖೆ ನಿಗದಿಪಡಿಸಿರುವ ವೇತನವನ್ನೇ ಪಾವತಿಸಬೇಕು. ಈ ನಿಯಮಗಳನ್ನು ಉಲ್ಲಂಘಿಸುವುದನ್ನು ಆಯೋಗ ಸಹಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಸ್ಪಷ್ಟಪಡಿಸಿದರು.
ಪಟ್ಟಣದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಎಲ್ಲ ಪೌರ ಕಾರ್ಮಿಕರು ಕಡ್ಡಾಯವಾಗಿ ಸುರಕ್ಷತಾ ಕವಚಗಳನ್ನು ಧರಿಸಬೇಕು. ಪುರಸಭೆಯಿಂದ ಸುರಕ್ಷತಾ ಕಿಟ್ಗಳನ್ನು ಒದಗಿಸದಿದ್ದರೆ ನೇರವಾಗಿ ಆಯೋಗದ ಗಮನಕ್ಕೆ ತರಬೇಕು ಎಂದು ಸೂಚಿಸಿ, ಕಾರ್ಮಿಕರಿಗೆ ಆಯೋಗದ ದೂರವಾಣಿ ಸಂಖ್ಯೆಯನ್ನು ನೀಡಿದರು.
ಪೌರ ಕಾರ್ಮಿಕರ ಆರೋಗ್ಯ, ವಸತಿಗೆ ಆದ್ಯತೆ ನೀಡಿ
ಬಿಸಿಲು, ಮಳೆ, ಚಳಿ ಎನ್ನದೆ ಪಟ್ಟಣದ ಸ್ವಚ್ಛತೆ ಹಾಗೂ ಸಾರ್ವಜನಿಕರ ಆರೋಗ್ಯಕ್ಕಾಗಿ ಶ್ರಮಿಸುವ ಪೌರ ಕಾರ್ಮಿಕರ ಬದುಕು ಸಂಕಷ್ಟದಲ್ಲಿರುವುದು ವಿಷಾದನೀಯ. ಕೆಲಸದ ಸ್ವರೂಪದಿಂದಾಗಿ ಅನಾರೋಗ್ಯದ ಅಪಾಯ ಎದುರಿಸುತ್ತಿರುವ ಕಾರ್ಮಿಕರು ತಮ್ಮ ವೈಯಕ್ತಿಕ ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಕುಟುಂಬದ ಯೋಗಕ್ಷೇಮದ ಕಡೆ ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು.
ಪೌರ ಕಾರ್ಮಿಕರು ಸಂವಿಧಾನಬದ್ಧವಾಗಿ ದೊರೆಯಬೇಕಾದ ಸೌಲಭ್ಯಗಳನ್ನು ಜಾಗೃತಿಯಿಂದ ಕೇಳಿ ಪಡೆದುಕೊಳ್ಳಬೇಕು. ಜೀವನದಲ್ಲಿ ಎಷ್ಟೇ ಸಮಸ್ಯೆಗಳು ಎದುರಾದರೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿ, ಉನ್ನತ ಹುದ್ದೆಗಳನ್ನು ಅಲಂಕರಿಸಿ ಸ್ವಾಭಿಮಾನದಿಂದ ಬದುಕುವಂತೆ ಪ್ರೋತ್ಸಾಹಿಸಬೇಕು ಎಂದರು.
ಸ್ವಂತ ಮನೆ ಹೊಂದಿರದ ಪೌರ ಕಾರ್ಮಿಕರನ್ನು ಗುರುತಿಸಿ, ಅವರಿಗೆ ನಿವೇಶನ ಒದಗಿಸುವ ನಿಟ್ಟಿನಲ್ಲಿ ಪುರಸಭೆಯ ಮುಖ್ಯಾಧಿಕಾರಿ ಹಾಗೂ ಆಡಳಿತಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಈ ಕುರಿತು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಪೌರ ಕಾರ್ಮಿಕರು ಸ್ವಂತ ಮನೆ ಹೊಂದಲು ನೆರವಾಗಬೇಕು ಎಂದು ಸೂಚಿಸಿದರು.
ಕಾರ್ಯಕ್ರಮದಲ್ಲಿ ಹಲವು ಪೌರ ಕಾರ್ಮಿಕರು ಪುರಸಭೆಯಲ್ಲಿ ತಮಗಾಗುತ್ತಿರುವ ತೊಂದರೆಗಳ ಕುರಿತು ಲಿಖಿತ ದೂರುಗಳನ್ನು ಸಲ್ಲಿಸಿ, ತಮ್ಮ ಕುಂದುಕೊರತೆಗಳನ್ನು ಆಯೋಗದ ಸದಸ್ಯರ ಮುಂದೆ ವಿವರಿಸಿದರು.
ಈ ಸಂದರ್ಭದಲ್ಲಿ ಗ್ರೇಡ್-1 ತಹಶೀಲ್ದಾರ್ ಲೋಕೇಶ್, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಶಂಕರ್, ಪರಿಸರ ಎಂಜಿನಿಯರ್ ಪ್ರಿಯಾಂಕ, ಆರೋಗ್ಯ ನಿರೀಕ್ಷಕ ಅಶೋಕ್, ಪೌರ ಕಾರ್ಮಿಕರ ಸಂಘಟನೆಯ ಮುಖಂಡರಾದ ಬನ್ನಾರಿ, ಕುಮಾರ್, ಮಂಡ್ಯ ಗಣೇಶ್, ಶ್ರೀರಂಗಪಟ್ಟಣ ಕುಮಾರ್ ಸೇರಿದಂತೆ ಪುರಸಭೆಯ ಅಧಿಕಾರಿಗಳು ಹಾಗೂ ನೌಕರರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
