ಹಾಸನ : ಚುಟುಕು ಸಾಹಿತ್ಯ ಪರಿಷತ್ತು, ಚನ್ನರಾಯಪಟ್ಟಣ ತಾಲೂಕು ಘಟಕದ ವತಿಯಿಂದ 75ನೇ ವರ್ಷದ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯ ಅಮೃತ ಮಹೋತ್ಸವದ ಸವಿನೆನಪಿಗಾಗಿ ಜಿಲ್ಲಾ ದಸರಾ ಕವಿಗೋಷ್ಠಿ, ವಿಚಾರಗೋಷ್ಠಿ, ಗೀತಗಾಯನ ಹಾಗೂ ಕೃತಿ ಲೋಕಾರ್ಪಣೆ ಸಮಾರಂಭವನ್ನು ಅಕ್ಟೋಬರ್ 25ರ ಭಾನುವಾರ ಚನ್ನರಾಯಪಟ್ಟಣದ ಗಣಪತಿ ಪೆಂಡಾಲ್ನಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮವು ಬೆಳಿಗ್ಗೆ 10 ಗಂಟೆಗೆ ಆರಂಭವಾಗಲಿದ್ದು, ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಡಾ. ಸಿ.ಎನ್. ಬಾಲಕೃಷ್ಣ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ತಿನ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ ಅವರು ಭುವನೇಶ್ವರಿಗೆ ಪುಷ್ಪಾರ್ಚನೆ ನೆರವೇರಿಸಲಿದ್ದು, ಬಿಜೆಪಿ ಮುಖಂಡ ಚಿದಾನಂದ ಅವರು ಕನ್ನಡ ಧ್ವಜ ಅರಳಿಸಲಿದ್ದಾರೆ.

ಚುಟುಕು ಸಾಹಿತ್ಯ ಪರಿಷತ್ತಿನ ಚನ್ನರಾಯಪಟ್ಟಣ ತಾಲೂಕು ಘಟಕದ ಗೌರವಾಧ್ಯಕ್ಷ ಗೋಕಾಕ್ ಪುಟ್ಟಣ್ಣ ಪ್ರಾಸ್ತಾವಿಕ ನುಡಿಯಾಡಲಿದ್ದು, ತಾಲೂಕು ಘಟಕದ ಅಧ್ಯಕ್ಷ ಬಿ.ಎಸ್. ಶಂಕರಾಚಾರ್ ಸಂಘಟನಾ ನುಡಿ ಹೇಳಲಿದ್ದಾರೆ. ಕೇಂದ್ರ ಚುಟುಕು ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಚುಟುಕು ಯುಗಾಚಾರ್ಯ ಡಾ. ಎಂ.ಜಿ.ಆರ್. ಅರಸು ಅಧ್ಯಕ್ಷತೆ ವಹಿಸಲಿದ್ದಾರೆ.
ಹಾಸನ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನಾಡಶ್ರೀ ಬಾ.ನಂ. ಲೋಕೇಶ ಅವರು ದಿನೇಶ್ ಡಿ.ಎಸ್. ವಿರಚಿತ ‘ಕಾವ್ಯಕೊಳಲು’ ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದು, ಆಚಾರ್ಯ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಆದರ್ಶ ಎಚ್.ಆರ್. ಕೃತಿ ಪರಿಚಯ ಮಾಡಿಕೊಡಲಿದ್ದಾರೆ. ಪ್ರಥಮ ಹಾಸನ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಡಾ. ರತ್ನ ಹಾಲಪ್ಪಗೌಡ ಅವರು ಪುಸ್ತಕ ತಾಂಬೂಲ ನೆರವೇರಿಸಲಿದ್ದಾರೆ.
ಮಧ್ಯಾಹ್ನ 1 ಗಂಟೆಗೆ ವಿಚಾರಗೋಷ್ಠಿ ನಡೆಯಲಿದ್ದು, ಹೊನ್ನಶೆಟ್ಟಿಹಳ್ಳಿ ಗಿರಿರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ. ರೈತ ಬದುಕಿನ ಸ್ಥಿತ್ಯಂತರಗಳು ಮತ್ತು ಸಾಮಾಜಿಕ ಪರಿಣಾಮಗಳು, ಡಿಜಿಟಲ್ ಯುಗದಲ್ಲಿ ಮಕ್ಕಳ ಸಾಹಿತ್ಯದ ಮರುಚಿಂತನೆ ಹಾಗೂ ನೆಲದ ನಂಟಿನಿಂದ ನುಡಿಯ ನಾದದವರೆಗೆ ಕನ್ನಡ ಸಾಹಿತ್ಯದ ಅಸ್ಮಿತೆ ಪಯಣ ಸೇರಿದಂತೆ ವಿವಿಧ ವಿಷಯಗಳ ಕುರಿತಾಗಿ ವಿಚಾರ ಮಂಡನೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಸಚಿನ್ ಮುಂದಿನ ಕೇರಿ ನಿರ್ದೇಶನದ ಮನಸೆಲ್ಲಾ ನೀನೆ ಚಿತ್ರತಂಡದ ಆಡಿಯೋ ಸಾಂಗ್ ಬಿಡುಗಡೆಯಾಗಲಿದೆ.
ಮಧ್ಯಾಹ್ನ 2:30 ಕ್ಕೆ ದಸರಾ ಚುಟುಕು ಕವಿಗೋಷ್ಠಿ ನಡೆಯಲಿದ್ದು ಅಧ್ಯಕ್ಷತೆಯನ್ನು ಜಯಂತಿ ಚಂದ್ರಶೇಖರ್ ವಹಿಸಲಿದ್ದಾರೆ. ಹಾಸನ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ ಕವಿಗಳಿಂದ ಚುಟುಕು ವಾಚನ ನಡೆಯಲಿದೆ. ಕಾರ್ಯಕ್ರಮದಲ್ಲಿ ತಬಲವಾದನ, ಗೀತ ಗಾಯನ ಹಾಗೂ ಸಾಂಸ್ಕೃತಿಕ ಪ್ರದರ್ಶನಗಳು ನೆರವೇರಲಿವೆ.
ಸಮಾರೋಪ ಸಮಾರಂಭಕ್ಕೆ ಚನ್ನರಾಯಪಟ್ಟಣ ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ ಎಸ್ ಶಂಕರಾಚಾರ್ ವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಭಾಗವಹಿಸಬೇಕೆಂದು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಶಂಕರಾಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
