ತುಮಕೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ನಾಡಿನ ಪ್ರತಿಷ್ಠಿತ ನಾಯಕರು.ಇಬ್ಬರೂ ನಾಯಕರಿಗೆ ರಾಜ್ಯಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳು, ಬೆಂಬಲಿಗರಿದ್ದಾರೆ.ಒಕ್ಕಲಿಗ ಸಮುದಾಯದ ಈ ನಾಯಕರಿಬ್ಬರೂ ಪರಸ್ಪರ ಟೀಕೆ ಮಾಡಿಕೊಳ್ಳುವುದನ್ನು ನಿಲ್ಲಿಸಿ ರಾಜ್ಯದ ಅಭಿವೃದ್ಧಿ ಕಡೆ ಗಮನ ಹರಿಸಬೇಕು ಎಂದು ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಕೆ.ಬಿ.ಬೋರೇಗೌಡ ಮನವಿ ಮಾಡಿದರು.
ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಂತ್ರಿ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ನಮ್ಮ ಸಮುದಾಯದವರು ಎಂಬದು ನಮಗೆ ಹೆಮ್ಮೆಯ ವಿಚಾರ.ಆದರೆ, ಈ ನಾಯಕರಿಬ್ಬರುಇತ್ತೀಚೆಗೆ ಪ್ರತಿನಿತ್ಯ ಪರಸ್ಪರಟೀಕೆ, ನಿಂದನೆ ಮಾಡಿಕೊಳ್ಳುತ್ತಿರುವುದು ಒಕ್ಕಲಿಗ ಸಮಾಜಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ತೀವ್ರ ನೋವು ತಂದಿದೆ.ಅವರ ಪಕ್ಷಗಳ ಕಾರ್ಯಕರ್ತರು, ಒಕ್ಕಲಿಗ ಸಮಾಜ ಬಾಂಧವರು ಮುಜುಗರಪಡುವಂತಾಗಿದೆ ಎಂದು ಹೇಳಿದರು.
ಈ ನಾಯಕರಿಬ್ಬರ ದಿನನಿತ್ಯದ ಜಗಳದಿಂದ ಒಕ್ಕಲಿಗ ಸಮಾಜದಲ್ಲಿ ಒಡಕು ಉಂಟಾಗುವ, ಸಮುದಾಯದಲ್ಲಿ ಗುಂಪುಗಾರಿಗೆ ಶುರುವಾಗಿ ಸಮಾಜದ ಐಕ್ಯತೆಗೆ ಧಕ್ಕೆಯಾಗುವ ಅಪಾಯವೂ ಇದೆ ಎಂಬ ಆತಂಕವೂ ಎದುರಾಗಿದೆ.ಹೆಚ್.ಡಿ.ಕುಮಾರಸ್ವಾಮಿಯವರು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಒಳ್ಳೆಯ ಆಡಳಿತ ನೀಡಿರುತ್ತಾರೆ.ಈಗ ನಮ್ಮದೇ ಸಮುದಾಯದ ಡಿ.ಕೆ.ಶಿವಕುಮಾರ್. ಮುಖ್ಯಮಂತ್ರಿಯಾಗಿ ಒಳ್ಳೆಯ ಆಡಳಿತವನ್ನೂ ನೀಡುತ್ತಿದ್ದಾರೆ.ಆದರೆ ಈ ನಾಯಕರಿಬ್ಬರು ಪ್ರತಿದಿನ ಒಬ್ಬರಿಗೊಬ್ಬರು ಟೀಕೆ ಮಾಡಿಕೊಳ್ಳುತ್ತಾ ಪರಸ್ಪರ ತೇಜೋವಧೆ ಮಾಡಿಕೊಳ್ಳುತ್ತಿರುವುದನ್ನು ಒಕ್ಕಲಿಗ ಸಮಾಜ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ನಾಯಕರ ಕಿತ್ತಾಟದಿಂದ ಒಕ್ಕಲಿಗ ಸಮಾಜವೂ ನಿತ್ಯ ಮುಜುಗರ ಅನುಭವಿಸುವಂತಾಗಿದೆ ಎಂಬುದನ್ನು ಇವರು ಅರಿತುಕೊಳ್ಳಲಿ ಎಂದು ಬೋರೇಗೌಡರು ಹೇಳಿದರು.
