ತುಮಕೂರು:ಎಲ್ಲರೂ ವೈದ್ಯರ ನೆರವು ಪಡೆದು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು,ಅದರಲ್ಲೂ ಹಿರಿಯ ನಾಗರೀಕರು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಏಕೆಂದರೆ ವಯಸ್ಸು ಆಗುತ್ತಾ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ,ಬ್ರೆಸ್ಟ್ ಕ್ಯಾನ್ಸರ್,ಚರ್ಮ ಸಂಬಂಧಿ ಖಾಯಿಲೆ,ಹೃದಯ ಸಮಸ್ಯೆ,ಬಿಪಿ,ಮಧುಮೇಹ ಇತ್ಯಾದಿ ರೋಗಗಳಿಂದ ಎದುರಾಗುವ ಸಮಸ್ಯೆಗಳಿಂದ ವೈದ್ಯರ ನೆರವು ಪಡೆದು ಆರೋಗ್ಯ ಕಾಪಾಡಿಕೊಳ್ಳಿ ಎಂದು ಸಿದ್ಧಗಂಗಾ ಮಠದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾ||ವೈ.ಆರ್.ರಶ್ಮಿರವರು ತಿಳಿಸಿದರು.
ಅವರು ಇಂದು ತುಮಕೂರು ವೀರಶೈವ ಲಿಂಗಾಯಿತರ ಅಭಿವೃದ್ಧಿ ಸಮಿತಿ,ಪತಂಜಲಿ ಯೋಗ ಶಿಕ್ಷಣ ಸಮಿತಿ(ರಿ)ವತಿಯಿಂದ ಮಾರುತಿನಗರದ ವೈಷ್ಣವ ಸಮುದಾಯ ಭವನದಲ್ಲಿ ಆಯೋಜಿಸಿದ್ದ ನವರಾತ್ರಿ ನಾಡಹಬ್ಬದ ವೈಶಿಷ್ಟö್ಯತೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಟಿ.ಎಸ್.ಮೋಹನ್ ಕುಮಾರ್ ರವರು ಧರ್ಮಕ್ಕಾಗಿ ದುಡಿಯೋಣ ಧರ್ಮವನ್ನು ದುಡಿಸಿಕೊಳ್ಳುವುದು ಬೇಡ ಎಂಬ ಹಿರೇಮಠದ ಶ್ರೀಗಳ ವಾಣಿಯಂತೆ ಎಲ್ಲರೂ ಧರ್ಮವನ್ನು ಉಳಿಸಿ ಬೆಳೆಸಬೇಕು,ನಾಡಹಬ್ಬ ದಸರಾ ಮೈಸೂರು ಯದು ವಂಶದ ರಾಜರಿಂದ ಪ್ರಾರಂಭವಾಗಿ ಇಂದು ನಾಡಹಬ್ಬವಾಗಿದೆ. ತಾಯಿ ಚಾಮುಂಡೇಶ್ವರಿಯ ಮಹಿಮೆ ಅಪಾರ ಆಕೆ ನಮ್ಮನ್ನು ನಮ್ಮ ನಾಡನ್ನು ಕಾಪಾಡುತ್ತಿದ್ದಾಳೆ,ನಾಡಿಗೆ ಉತ್ತಮ ಮಳೆ ಬೆಳೆ ಬರಬೇಕು ಎಂದು ತಾಯಿಯಲ್ಲಿ ಪ್ರಾರ್ಥನೆ,ತಾಯಂದಿರು ಮಕ್ಕಳಲ್ಲಿ ಧರ್ಮದ ಬಗ್ಗೆ ಜ್ಞಾನವನ್ನು ತುಂಬಬೇಕು,ಪ್ರತಿನಿತ್ಯ ನಾಡಿನ ಸಾಧು-ಸಂತರ,ದೇವರ ಬಗ್ಗೆ ತಿಳಿಸಬೇಕು ಆಗ ಪ್ರತಿ ಮಕ್ಕಳು ಕುವೆಂಪುರವರು ಹೇಳಿದಂತೆ ವಿಶ್ವಮಾನವರಾಗುತ್ತಾರೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪಾಲನೇತ್ರಯ್ಯನವರು ತಾಯಂದಿರು ಮಕ್ಕಳಿಗೆ ಹಬ್ಬ ಹರಿದಿನಗಳ ಬಗ್ಗೆ,ವಚನಗಳ ಬಗ್ಗೆ ದೇವರ ಲೀಲೆಗಳ ಬಗ್ಗೆ,ವೇದ,ಉಪನಿಷತ್,ರಾಮಾಯಣ,ಮಹಾಭಾರತ ಇತ್ಯಾದಿಗಳ ಬಗ್ಗೆ ತಿಳಿಸಬೇಕು,ಕಾಯಕವೇ ಕೈಲಾಸವೆಂಬಂತೆ ಎಲ್ಲರೂ ದುಡಿದು ಪ್ರಸಾದ ಸ್ವೀಕರಿಸಬೇಕು,ವಚನಗಳ ಮೌಲ್ಯ ಅಪಾರ,12ನೇ ಶತಮಾನದಲ್ಲಿ ವಚನಕಾರರು ನಾಡಿಗೆ ನೀಡಿದ ಕೊಡುಗೆ ಅಪಾರ,ಬಸವಣ್ಣನವರು,ಅಕ್ಕಮಹಾದೇವಿ ಸೇರಿದಂತೆ ಈ ನಾಡು ನುಡಿಗೆ ವಚನಕಾರರ ಕೊಡುಗೆ ಅಮೂಲ್ಯ,ಎಲ್ಲರೂ ಸೇವಾಕಾರ್ಯದಲ್ಲಿ ತೊಡಗಬೇಕು,ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಗೆ ಅನ್ನವಿಟ್ಟಾಗ,ಬಟ್ಟೆ ಕೊಟ್ಟಾಗ,ವಿದ್ಯೆ ಕೊಟ್ಟಾಗ ಸಮಸಮಾಜ ನಿರ್ಮಾಣವಾಗುತ್ತದೆ ಅದನ್ನೇ ಬಸವಣ್ಣನವರು,ಡಾ||ಶ್ರೀಶಿವಕುಮಾರಸ್ವಾಮೀಜಿಗಳು ಹೇಳಿದ್ದು ಅದನ್ನು ಎಲ್ಲರೂ ಅಳವಡಿಸಿಕೊಂಡು ದಾಸೋಹಕ್ಕೆ ಮನ್ನಣೆ ನೀಡಿ ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಮಲ್ಲಪ್ಪ, ಡಾ||ಗೀತಾ, ಎಸ್.ಆರ್.ಶಿವಶಂಕರ್, ವಿ.ಆರ್.ಮಂಜಣ್ಣ, ಕುಮಾರಸ್ವಾಮಿ(ಹೆಚ್.ಎಂ.ಟಿ),ಶ್ರೀಮತಿ ಜಯಶ್ರೀ,ಶ್ರೀಮತಿ ಸೌಭಾಗ್ಯ, ಆರ್.ಎಸ್.ವೀರಪ್ಪದೇವರು, ಕೆ.ಆರ್.ಮಂಜುಳಾ, ಗಂಗಾಧರ್, ಪ್ರೇಮಾರಾಧ್ಯ, ಅಂಬಿಕಾ, ಶಾಂತರಾಜು, ಮುಂತಾದವರು ಉಪಸ್ಥಿತರಿದ್ದರು.
– ಚಂದ್ರಚೂಡ ಕೆ.ಬಿ.
