ರಾಮನಾಥಪುರ ಅಕ್ಟೋಬರ್ 29 : ಸುತ್ತೂರು ಶ್ರೀಕ್ಷೇತ್ರದಲ್ಲಿ ಶ್ರೀ ಶಿವರಾತ್ರೀಶ್ವರ ಕರ್ತೃ ಗದ್ದುಗೆಯ ಸನ್ನಿಧಿಯಲ್ಲಿ ಸುತ್ತೂರು ಮಠ ಹಾಗೂ ಹಳೆ ಹುಬ್ಬಳ್ಳಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಟ್ರಸ್ಟ್ ವತಿಯಿಂದ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನೆರವೇರಿತು. ಹುಬ್ಬಳ್ಳಿ, ಧಾರವಾಡ ಹಾಗೂ ದಾವಣಗೆರೆ ಜಿಲ್ಲೆಗಳಿಂದ ಆಗಮಿಸಿದ್ದ 255 ಮುತ್ತೈದೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಉಡಿ ತುಂಬಿಸಿಕೊಂಡರು. ಈ ಸಂದರ್ಭದಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರಿಗೆ ದಿವ್ಯ ಪಾದಪೂಜೆಯನ್ನು ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಬೆಂಗಳೂರು ಶ್ರೀ ಸರ್ಪಭೂಷಣ ಶಿವಯೋಗಿಗಳ ಮಠದ ಶ್ರೀಗಳು, ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಸಿ.ಬಿ. ಮಟ್ಟಿ, ಉಪಾಧ್ಯಕ್ಷರಾದ ಶ್ರೀ ಎಸ್.ಎಂ. ರುದ್ರಯ್ಯ ಸ್ವಾಮಿಗಳು ಹಾಗೂ ಶ್ರೀ ಬಸವರಾಜ ಕಲ್ಯಾಣಶೆಟ್ಟಿಯವರು, ಕಾರ್ಯದರ್ಶಿ ಚಂದ್ರಶೇಖರ್ ಪಾಟೀಲ್, ಟ್ರಸ್ಟ್ನ ಸದಸ್ಯರು ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು.
ವರದಿ : ಕುಮಾರಸ್ವಾಮಿ ರಾಮನಾಥಪುರ
