*ಬೆಂಗಳೂರು, ಅಕ್ಟೋಬರ್ 29, 2026* ಸ್ತನ ಕ್ಯಾನ್ಸರ್ ಎಂದರೆ ಕೇವಲ ರೋಗನಿರ್ಣಯ ಮತ್ತು ಚಿಕಿತ್ಸೆಯಷ್ಟೇ ಅಲ್ಲ. ಈ ಸಂದರ್ಭದಲ್ಲಿ ಮಹಿಳೆಯರು ಭಾವನಾತ್ಮಕ ಒತ್ತಡ, ದೇಹದಲ್ಲಿನ ಬದಲಾವಣೆಗಳು ಮತ್ತು ಭವಿಷ್ಯದ ಬಗ್ಗೆ ಹಲವು ಸವಾಲುಗಳನ್ನು ಎದುರಿಸುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು, ಮಣಿಪಾಲ್ ಆಸ್ಪತ್ರೆ ಹಳೆಯ ವಿಮಾನ ನಿಲ್ದಾಣ ರಸ್ತೆ, ಬೆಂಗಳೂರಿನಲ್ಲಿ ಸ್ತನ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಸ್ತನ ಕ್ಯಾನ್ಸರ್ನಿಂದ ಚೇತರಿಸಿಕೊಂಡ ಮಹಿಳೆಯರು ಮತ್ತು ತಜ್ಞ ವೈದ್ಯರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಇದೇ ವೇಳೆ, ಕ್ಯಾನ್ಸರ್ ಗೆದ್ದ ಮಹಿಳೆಯರು ಇತರರಿಗೆ ನೆರವಾಗಲು ತರಬೇತಿ ನೀಡುವ SHE RISES ಕಾರ್ಯಕ್ರಮಕ್ಕೂ ಚಾಲನೆ ನೀಡಲಾಯಿತು.
*ಜಾಗೃತಿ ಕಾರ್ಯಕ್ರಮವನ್ನು ವಲಯ ನಿರ್ದೇಶಕ ಡಾ. ಮನೀಶ್ ರೈ ಮತ್ತು ಆಸ್ಪತ್ರೆಯ ನಿರ್ದೇಶಕಿ ನಯನಾ ಪೈ* ಉದ್ಘಾಟಿಸಿದರು. ಸ್ತನ ಕ್ಯಾನ್ಸರ್ನ ಆರಂಭಿಕ ಪತ್ತೆ, ಚಿಕಿತ್ಸೆ, ಚಿಕಿತ್ಸೆಯ ನಂತರದ ಆರೈಕೆ ಮತ್ತು ಮಾನಸಿಕ ಬೆಂಬಲದ ಮಹತ್ವವನ್ನು ಈ ಕಾರ್ಯಕ್ರಮದಲ್ಲಿ ಚರ್ಚಿಸಲಾಯಿತು.
*ಕಾರ್ಯಕ್ರಮದಲ್ಲಿ ನಾಲ್ಕು ಪ್ರಮುಖ ಅಧಿವೇಶನಗಳು (ಗೋಷ್ಠಿ) ನಡೆದವು.*
ಮೊದಲು ನಡೆದ ‘She Hears’ ಅಧಿವೇಶನದಲ್ಲಿ ಶಸ್ತ್ರಚಿಕಿತ್ಸಾ ತಜ್ಞರು ಮತ್ತು ಸ್ತನ ಕ್ಯಾನ್ಸರ್ನಿಂದ ಚೇತರಿಸಿಕೊಂಡ ಮಹಿಳೆಯರು ಕ್ಯಾನ್ಸರ್ನ ಅಪಾಯಕಾರಿ ಅಂಶಗಳು, ಶಸ್ತ್ರಚಿಕಿತ್ಸೆ, ದುಗ್ಧರಸ ಗ್ರಂಥಿಗಳ ಪರೀಕ್ಷೆ ಮತ್ತು ಆನುವಂಶಿಕ ಸಲಹೆಯ ಕುರಿತು ಚರ್ಚಿಸಿದರು. ಆರಂಭಿಕ ಪತ್ತೆ, ಸ್ವಯಂ ಸ್ತನ ಪರೀಕ್ಷೆ ಮತ್ತು ಸಮಯಕ್ಕೆ ಸರಿಯಾಗಿ ವೈದ್ಯರನ್ನು ಸಂಪರ್ಕಿಸುವುದರ ಮಹತ್ವವನ್ನು ತಿಳಿಸಿದರು.
She Chooses ಅಧಿವೇಶನದಲ್ಲಿ ವೈದ್ಯಕೀಯ ಕ್ಯಾನ್ಸರ್ ತಜ್ಞರು ಚಿಕಿತ್ಸೆಯ ವಿವಿಧ ಆಯ್ಕೆಗಳಾದ ಗುರಿ ( ಟಾರ್ಗೆಟೆಡ್) ಆಧಾರಿತ ಚಿಕಿತ್ಸೆ, ಇಮ್ಯುನೊಥೆರಪಿ ಮತ್ತು ಹಾರ್ಮೋನ್ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದರು. ಸೂಕ್ತ ಚಿಕಿತ್ಸೆಯನ್ನು ಆಯ್ಕೆ ಮಾಡಿಕೊಳ್ಳುವುದು ಮತ್ತು ದೈನಂದಿನ ಜೀವನಕ್ಕೆ ಮರಳುವಾಗ ಎದುರಾಗುವ ಸವಾಲುಗಳನ್ನು ನಿಭಾಯಿಸುವ ಕುರಿತು ಚರ್ಚಿಸಲಾಯಿತು.
She Prevails ಅಧಿವೇಶನದಲ್ಲಿ ವಿಕಿರಣ ಚಿಕಿತ್ಸೆಯಲ್ಲಿನ ಆಧುನಿಕ ತಂತ್ರಜ್ಞಾನಗಳು ಮತ್ತು ಪ್ರತಿಯೊಬ್ಬ ರೋಗಿಯ ಅಗತ್ಯಕ್ಕೆ ಅನುಗುಣವಾಗಿ ಚಿಕಿತ್ಸೆ ರೂಪಿಸುವುದರ ಮಹತ್ವವನ್ನು ವಿವರಿಸಲಾಯಿತು.
ಕೊನೆಯದಾಗಿ, She Navigates ಅಧಿವೇಶನದಲ್ಲಿ ಚಿಕಿತ್ಸೆಯ ನಂತರದ ವ್ಯಾಯಾಮ, ಪೌಷ್ಟಿಕ ಆಹಾರ, ಕುಟುಂಬದವರ ಆರೈಕೆ ಮತ್ತು ಕ್ಯಾನ್ಸರ್ಗೆ ಸಂಬಂಧಿಸಿದ ಆಹಾರ ಪದ್ಧತಿಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳ ಕುರಿತು ಮಾಹಿತಿ ನೀಡಲಾಯಿತು.
SHE RISES ಕಾರ್ಯಕ್ರಮ, ಸ್ತನ ಕ್ಯಾನ್ಸರ್ನಿಂದ ಚೇತರಿಸಿಕೊಂಡ ಮಹಿಳೆಯರಿಗೆ ಇತರ ರೋಗಿಗಳಿಗೆ ನೆರವಾಗಲು ತರಬೇತಿ ನೀಡುತ್ತದೆ. ಈ ಮೂಲಕ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡು, ಇತರ ಮಹಿಳೆಯರಿಗೆ ಭಾವನಾತ್ಮಕ ಬೆಂಬಲ, ಸೂಕ್ತ ಮಾಹಿತಿ ಮತ್ತು ಆತ್ಮವಿಶ್ವಾಸ ನೀಡಲು ಸಾಧ್ಯವಾಗುತ್ತದೆ.
ಈ ಕಾರ್ಯಕ್ರಮದ ಮೂಲಕ ಮಣಿಪಾಲ್ ಆಸ್ಪತ್ರೆ ಹಳೆಯ ವಿಮಾನ ನಿಲ್ದಾಣ ರಸ್ತೆ, ಸ್ತನ ಕ್ಯಾನ್ಸರ್ ಚಿಕಿತ್ಸೆಯ ಜೊತೆಗೆ ರೋಗಿಗಳಿಗೆ ಮಾನಸಿಕ ಧೈರ್ಯ ಮತ್ತು ನಿರಂತರ ಬೆಂಬಲ ನೀಡುವ ಆರೈಕೆಗೆ ಒತ್ತು ನೀಡಿದೆ. ಆರಂಭಿಕ ಪತ್ತೆ, ಸೂಕ್ತ ಚಿಕಿತ್ಸೆ ಮತ್ತು ಪರಸ್ಪರ ಬೆಂಬಲದ ಮೂಲಕ ಮಹಿಳೆಯರು ಕ್ಯಾನ್ಸರ್ ವಿರುದ್ಧ ಧೈರ್ಯದಿಂದ ಹೋರಾಡಲು ನೆರವಾಗುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
