ರಾಮನಾಥಪುರ: ಕನ್ನಡ ರಾಜ್ಯೋತ್ಸವ ಹಾಗೂ ತಮ್ಮ ಜನ್ಮದಿನದ ಪ್ರಯುಕ್ತ ಅರಕಲಗೂಡು ಶಾಸಕ ಹಾಗೂ ಮಾಜಿ ಸಚಿವ ಎ. ಮಂಜು ಅವರು ರಾಮನಾಥಪುರ ಹೋಬಳಿಯ ತಮ್ಮ ಸ್ವಗ್ರಾಮ ಹನ್ಯಾಳಿನಲ್ಲಿ ಪತ್ನಿ ತಾರಾಮಂಜು ಅವರೊಂದಿಗೆ ಮನೆಯ ಗೋಮಾತೆಗೆ ಗೋಪೂಜೆ ಸಲ್ಲಿಸುವ ಮೂಲಕ ವಿಶೇಷವಾಗಿ ಆಚರಿಸಿದರು.
ಬಳಿಕ ಮಾತನಾಡಿದ ಎ. ಮಂಜು, ಕನ್ನಡ ಭಾಷೆ ನಮ್ಮ ನಾಡಿನ ಹೆಮ್ಮೆಯ ಪ್ರತೀಕವಾಗಿದ್ದು, ಕನ್ನಡಿಗರ ಸಂಸ್ಕೃತಿ, ಪರಂಪರೆ, ಇತಿಹಾಸ ಹಾಗೂ ಸ್ವಾಭಿಮಾನದ ಸಂಕೇತವಾಗಿದೆ. ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆ ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ.

ನಾಡು, ನುಡಿ, ನೆಲ, ಜಲ ಹಾಗೂ ಭಾಷೆಯ ಸಂರಕ್ಷಣೆಗೆ ಎಲ್ಲರೂ ಬದ್ಧರಾಗಬೇಕು. ಕನ್ನಡ ನಾಡಿನ ಏಕತೆ, ಸಮಗ್ರತೆ ಮತ್ತು ಅಭಿವೃದ್ಧಿಗಾಗಿ ಒಗ್ಗಟ್ಟಿನಿಂದ ಶ್ರಮಿಸಿ, ಕನ್ನಡದ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಪಸರಿಸೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ತಾರಾಮಂಜು, ಮುಖಂಡರಾದ ಅಶೋಕ್, ಗುಂಡಣ್ಣ, ಶಿಕ್ಷಕರು, ವಿದ್ಯಾರ್ಥಿಗಳು, ಕನ್ನಡಾಭಿಮಾನಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
– ಕುಮಾರಸ್ವಾಮಿ ಎಂ.ಎನ್.
