ಕೊರಟಗೆರೆ: ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ 71ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಸೀಲ್ದಾರ್ ಶರತ್ಕುಮಾರ್, ಕನ್ನಡ ಭಾಷೆಯ ಶ್ರೀಮಂತ ಇತಿಹಾಸ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯ ಮಹತ್ವವನ್ನು ಪ್ರತಿಯೊಬ್ಬರೂ ಅರಿಯಬೇಕು. ಕನ್ನಡ ಭಾಷೆಯನ್ನು ಕೇವಲ ಸಂವಹನದ ಮಾಧ್ಯಮವಾಗಿ ನೋಡದೆ, ನಮ್ಮ ಬದುಕಿನ ಅಸ್ಮಿತೆಯಾಗಿ ಗೌರವಿಸಬೇಕು. ಮುಂದಿನ ಪೀಳಿಗೆಗೂ ಕನ್ನಡದ ಮಹತ್ವವನ್ನು ತಿಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಮಕ್ಕಳ ನೃತ್ಯಕ್ಕೆ ಗಣ್ಯರು ಫಿದಾ
ರಾಜ್ಯೋತ್ಸವದ ಅಂಗವಾಗಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಕನ್ನಡ ನಾಡು-ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಬಿಂಬಿಸುವ ಹಾಡುಗಳಿಗೆ ಆಕರ್ಷಕ ನೃತ್ಯ ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ತಾಲ್ಲೂಕು ಆಡಳಿತ ನಗದು ಬಹುಮಾನಗಳನ್ನು ವಿತರಿಸಿತು. ಗಣ್ಯರು ಕೂಡ ವೈಯಕ್ತಿಕವಾಗಿ ನಗದು ಬಹುಮಾನ ನೀಡಿ ಮಕ್ಕಳನ್ನು ಹುರಿದುಂಬಿಸಿದರು.

ನೃತ್ಯ ಸ್ಪರ್ಧೆಯಲ್ಲಿ ಕೊರಟಗೆರೆಯ ಸರ್ಕಾರಿ ಬಾಲಕಿಯರ ಶಾಲೆಯ ಲಿಖಿತ, ಚೈತ್ರ, ಲಹರಿ ಹಾಗೂ ಗೌತಮಿ ಪ್ರಥಮ ಬಹುಮಾನ ಪಡೆದರು. ತೆರೆಸಾ ಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ತೃತೀಯ ಸ್ಥಾನ ಗಳಿಸಿದರು. ಉಳಿದ ಶಾಲೆಗಳ ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.

ಹಿರಿಯರ ಕೋಲಾಟ ವಿಶೇಷ ಆಕರ್ಷಣೆ
ತಾಲ್ಲೂಕಿನ ಗೊಲ್ಲ ಸಮುದಾಯದ ಹಿರಿಯರು ಪ್ರದರ್ಶಿಸಿದ ಲಯಬದ್ಧ ಕೋಲಾಟ ನೃತ್ಯ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಯಮುನಾ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಈರಣ್ಣ ಕೂಡ ಕೋಲಾಟದಲ್ಲಿ ಹೆಜ್ಜೆ ಹಾಕಿ ಸಂಭ್ರಮ ಹೆಚ್ಚಿಸಿದರು.
20 ಸಾಧಕರಿಗೆ ಸನ್ಮಾನ
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ 20 ಮಂದಿಯನ್ನು ತಾಲ್ಲೂಕು ಆಡಳಿತದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಮತ್ತೊಂದೆಡೆ, ಪಟ್ಟಣದ ಆಟೋ ಚಾಲಕರು ತಮ್ಮ ವಾಹನಗಳಿಗೆ ಕೆಂಪು-ಹಳದಿ ಕನ್ನಡ ಬಾವುಟಗಳನ್ನು ಕಟ್ಟುವ ಮೂಲಕ ಕನ್ನಡಾಭಿಮಾನ ಮೆರೆದರು.

ಕನ್ನಡದ ಧ್ವಜಾರೋಹಣ, ಕನ್ನಡ ಜ್ಯೋತಿ ಬೆಳಗಿಸುವಿಕೆ, ಸಾಂಸ್ಕೃತಿಕ ಪ್ರದರ್ಶನ ಹಾಗೂ ಸಾಧಕರಿಗೆ ಗೌರವ ಸಲ್ಲಿಸುವ ಮೂಲಕ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ತಾಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಪೂರ್ವ ಅನಂತರಾಮು, ಎಡಿಎ ಗುರುಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಉಮೇಶ್, ಸಿಪಿಐ ಪುರುಷೋತ್ತಮ್, ಪಿಎಸ್ಐ ತೀರ್ಥೇಶ್, ಬಿಇಒ ಫೈರೋಜ್ ಬೇಗಂ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಯಮುನಾ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಚಿಕ್ಕರಂಗಯ್ಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರುದ್ರೇಶ್, ನಿವೃತ್ತ ಸೈನಿಕ ಕೃಷ್ಣ ನಾಯಕ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಧ್ಯಕ್ಷ ಓಬಳರಾಜು, ಕಸಾಪ ಅಧ್ಯಕ್ಷ ಈರಣ್ಣ, ಮುಖಂಡರಾದ ಡಾಡಿ ವೆಂಕಟೇಶ್, ಪುಟ್ಟಣ್ಣ, ಗಂಗರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ನರಸಿಂಹಯ್ಯ ಹೊಸಕೋಟೆ
