ಬೆಂಗಳೂರು, ನವೆಂಬರ್ 1, 2026:* ಇಂಡಿಯಾ ಎಕ್ಸಿಮ್ ಬ್ಯಾಂಕ್ ಆಯೋಜಿಸಿರುವ 11ನೇ ಆವೃತ್ತಿಯ ‘ಎಕ್ಸಿಮ್ ಬಜಾರ್’ಗೆ ಇಂದು ಬೆಂಗಳೂರಿನ ಜಯಮಹಲ್ ಪ್ಯಾಲೇಸ್ನಲ್ಲಿ ಚಾಲನೆ ನೀಡಲಾಯಿತು. *ಕರ್ನಾಟಕ ಕರಕುಶಲ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಚಂದ್ರಾ ಜೈನ್ ಹಾಗೂ ಇಂಡಿಯಾ ಎಕ್ಸಿಮ್ ಬ್ಯಾಂಕ್ನ ಉಪ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ದೀಪಾಲಿ ಅಗರ್ವಾಲ್* ಅವರು ಜಂಟಿಯಾಗಿ ಪ್ರದರ್ಶನವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ *ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ (ಬೆಂಗಳೂರು) ನಿರ್ದೇಶಕ ಡಾ. ಯತೀಂದ್ರ ಲಕ್ಕಣ್ಣ ಹಾಗೂ ಜವಳಿ ಸಚಿವಾಲಯದ ಕರಕುಶಲ ಅಭಿವೃದ್ಧಿ ಆಯುಕ್ತರ ಕಚೇರಿಯ, ಹ್ಯಾಂಡ್ಲೂಮ್ ಸರ್ವಿಸ್ ಸೆಂಟರ್ನ ಸಹಾಯಕ ನಿರ್ದೇಶಕ ಶ್ರೀ ಕೆ.ಎಸ್. ಸುನಿಲ್ ಕುಮಾರ್* ಉಪಸ್ಥಿತರಿದ್ದರು.
ನವೆಂಬರ್ 1ರಿಂದ 8ರವರೆಗೆ ನಡೆಯಲಿರುವ ಈ ಬಜಾರ್ನಲ್ಲಿ ದೇಶದ ವಿವಿಧ ಭಾಗಗಳ ಸಾಂಪ್ರದಾಯಿಕ ಹಾಗೂ ಆಧುನಿಕ ಕರಕುಶಲ ಕಲೆಗಳು ಮತ್ತು ಕೈಮಗ್ಗ ಉತ್ಪನ್ನಗಳನ್ನು ಪ್ರದರ್ಶಿಸಲಾಗುತ್ತಿದೆ.
ದೇಶದ ವಿವಿಧ ಭಾಗಗಳ ಸ್ಥಳೀಯ ಕುಶಲಕರ್ಮಿಗಳು ಹಾಗೂ ಸ್ವದೇಶಿ ಉತ್ಪಾದಕರಿಗೆ ಬೆಂಬಲ ನೀಡುವ ಉದ್ದೇಶದಿಂದ ಈ ಪ್ರದರ್ಶನವನ್ನು ಆಯೋಜಿಸಲಾಗಿದೆ. ಭಾರತದ ಕರಕುಶಲ ಮತ್ತು ಕೈಮಗ್ಗ ಕ್ಷೇತ್ರವನ್ನು ಬಲಪಡಿಸುವಲ್ಲಿ ಎಕ್ಸಿಮ್ ಬಜಾರ್ ವಹಿಸುತ್ತಿರುವ ಪಾತ್ರವನ್ನು ಶ್ಲಾಘಿಸಿದ ಕರ್ನಾಟಕ ಕರಕುಶಲ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಚಂದ್ರಾ ಜೈನ್ ಅವರು, “ಭಾರತದ ಆರ್ಥಿಕ ಮತ್ತು ಸಾಂಸ್ಕೃತಿಕ ವಲಯದಲ್ಲಿ ಕರಕುಶಲ ಕ್ಷೇತ್ರವು ವಿಶೇಷ ಸ್ಥಾನಮಾನ ಹೊಂದಿದೆ. ದೇಶದ ವೈವಿಧ್ಯಮಯ ಸಂಪ್ರದಾಯಗಳು, ನಂಬಿಕೆಗಳು ಮತ್ತು ಪರಂಪರೆಗಳಿಂದ ಈ ಕ್ಷೇತ್ರ ಪ್ರೇರಣೆ ಪಡೆದಿದೆ. ಅಷ್ಟೇ ಅಲ್ಲದೆ, ದೇಶದಾದ್ಯಂತ ಲಕ್ಷಾಂತರ ಜನರ ಜೀವನೋಪಾಯಕ್ಕೆ ಆಧಾರವಾಗಿರುವ ಈ ಕ್ಷೇತ್ರವು ಉದ್ಯೋಗ ಸೃಷ್ಟಿಯ ಪ್ರಮುಖ ಮೂಲವೂ ಆಗಿದೆ” ಎಂದು ಹೇಳಿದರು.
ತಳಮಟ್ಟದ ಉದ್ಯಮಗಳಿಗೆ ಎಕ್ಸಿಮ್ ಬ್ಯಾಂಕ್ ನೀಡುತ್ತಿರುವ ಬೆಂಬಲದ ಕುರಿತು ಮಾತನಾಡಿದ ಬ್ಯಾಂಕ್ನ ಉಪ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ದೀಪಾಲಿ ಅಗರ್ವಾಲ್ ಅವರು, “ಎಕ್ಸಿಮ್ ಬಜಾರ್ನ 11ನೇ ಮಹತ್ವದ ಆವೃತ್ತಿಯಲ್ಲಿ ದೇಶದ ವಿವಿಧ ಭಾಗಗಳ 90 ಕುಶಲಕರ್ಮಿಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿರುವುದು ನಮಗೆ ಸಂತೋಷ ತಂದಿದೆ. ಕುಶಲಕರ್ಮಿಗಳಿಗೆ ದೊರೆಯುತ್ತಿರುವ ಉತ್ತಮ ಪ್ರತಿಕ್ರಿಯೆ ಹಾಗೂ ಬೆಂಗಳೂರಿನ ಜನರಲ್ಲಿ ಕಂಡುಬರುತ್ತಿರುವ ಉತ್ಸಾಹ ನಿಜಕ್ಕೂ ಪ್ರೇರಣಾದಾಯಕವಾಗಿದೆ. ದೇಶದ ವಿವಿಧ ಭಾಗಗಳ ಸ್ಥಳೀಯ ಕಲೆಗಳ ಬಗ್ಗೆ ಕರ್ನಾಟಕದ ಜನರಿಗಿರುವ ಆಸಕ್ತಿಯನ್ನೂ ಇದು ಪ್ರತಿಬಿಂಬಿಸುತ್ತದೆ.
ವೈಯಕ್ತಿಕ ಕುಶಲಕರ್ಮಿಗಳು, ಸೂಕ್ಷ್ಮ ಹಾಗೂ ತಳಮಟ್ಟದ ಉದ್ಯಮಗಳ ವ್ಯಾಪಾರ ಅವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ ಇಂಡಿಯಾ ಎಕ್ಸಿಮ್ ಬ್ಯಾಂಕ್ ಎಕ್ಸಿಮ್ ಬಜಾರ್ ಆಯೋಜಿಸುತ್ತಿದೆ. ಈ ಪ್ರದರ್ಶನವು ಕುಶಲಕರ್ಮಿಗಳಿಗೆ ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೊಳಿಸಲು ಹೆಚ್ಚಿನ ಪ್ರಚಾರ, ಬ್ರ್ಯಾಂಡ್ ಗುರುತಿಸುವಿಕೆ ಮತ್ತು ವ್ಯಾಪಕ ಮಾರುಕಟ್ಟೆ ಅವಕಾಶಗಳನ್ನು ಒದಗಿಸುತ್ತದೆ. ಇದರಿಂದ ಅವರು ನೇರವಾಗಿ ಗ್ರಾಹಕರನ್ನು ತಲುಪಲು, ಭವಿಷ್ಯದ ಮಾರಾಟಕ್ಕೆ ಹೊಸ ಸಂಪರ್ಕಗಳನ್ನು ಬೆಳೆಸಲು, ಗ್ರಾಹಕರ ಆದ್ಯತೆಗಳನ್ನು ಅರ್ಥಮಾಡಿಕೊಳ್ಳಲು, ಉದ್ಯಮದ ಕುರಿತ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಹಾಗೂ ಇತ್ತೀಚಿನ ಮಾರುಕಟ್ಟೆ ಪ್ರವೃತ್ತಿಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ” ಎಂದು ತಿಳಿಸಿದರು.
ಮುಂದುವರಿದು ಮಾತನಾಡಿದ ಅವರು, “ಭಾರತದ ಕರಕುಶಲ ಕ್ಷೇತ್ರವು ಮಹಿಳೆಯರ ಪ್ರಮುಖ ಪಾಲ್ಗೊಳ್ಳುವಿಕೆಯನ್ನು ಹೊಂದಿದೆ. ದೇಶದ 64.66 ಲಕ್ಷ ಕರಕುಶಲ ಕಾರ್ಮಿಕರು ಮತ್ತು ಕುಶಲಕರ್ಮಿಗಳ ಪೈಕಿ ಶೇ.64ರಷ್ಟು ಮಹಿಳೆಯರಿದ್ದಾರೆ. ಇದು ಮಹಿಳಾ ಸಬಲೀಕರಣ, ಸಾಮಾಜಿಕ ಒಳಗೊಳ್ಳುವಿಕೆ ಹಾಗೂ ಗ್ರಾಮೀಣ ಮತ್ತು ಬುಡಕಟ್ಟು ಸಮುದಾಯಗಳ ಉನ್ನತಿಗೆ ಈ ಕ್ಷೇತ್ರ ನೀಡುತ್ತಿರುವ ಮಹತ್ವದ ಕೊಡುಗೆಯನ್ನು ತೋರಿಸುತ್ತದೆ. ಭಾರತೀಯ ಕರಕುಶಲ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಯಲ್ಲಿಯೂ ಉತ್ತಮ ಸ್ಥಾನವನ್ನು ಪಡೆದುಕೊಂಡಿವೆ. 2025-26ನೇ ಹಣಕಾಸು ವರ್ಷದಲ್ಲಿ ಭಾರತದ ಕರಕುಶಲ ಉತ್ಪನ್ನಗಳ ರಫ್ತು 1.8 ಶತಕೋಟಿ ಅಮೆರಿಕನ್ ಡಾಲರ್ ತಲುಪಿದೆ. ಅಮೆರಿಕ, ಯುಎಇ, ಬ್ರಿಟನ್, ನೆದರ್ಲ್ಯಾಂಡ್ಸ್ ಮತ್ತು ಜರ್ಮನಿ ಪ್ರಮುಖ ರಫ್ತು ತಾಣಗಳಾಗಿವೆ” ಎಂದು ಹೇಳಿದರು.
ಕುಶಲಕರ್ಮಿಗಳ ಸಾಮರ್ಥ್ಯ ವೃದ್ಧಿಗಾಗಿ ಎಕ್ಸಿಮ್ ಬ್ಯಾಂಕ್ ವಿನ್ಯಾಸ, ಉತ್ಪನ್ನ ಅಭಿವೃದ್ಧಿ ಹಾಗೂ ಶೈಕ್ಷಣಿಕ ಕಾರ್ಯಾಗಾರಗಳನ್ನು ಆಯೋಜಿಸುವ ಮೂಲಕ ನಿರಂತರ ಮಾರ್ಗದರ್ಶನ ಮತ್ತು ಬೆಂಬಲವನ್ನು ಒದಗಿಸುತ್ತಿದೆ. ಈ ಉಪಕ್ರಮಗಳ ಮುಂದುವರಿದ ಭಾಗವಾಗಿ ಎಕ್ಸಿಮ್ ಬಜಾರ್ ಆಯೋಜಿಸಲಾಗಿದ್ದು, ಕುಶಲಕರ್ಮಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು ಮತ್ತು ಮಾರಾಟ ಮಾಡಲು ಸೂಕ್ತ ವೇದಿಕೆಯನ್ನು ಕಲ್ಪಿಸಲಾಗಿದೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಎಕ್ಸಿಮ್ ಬಜಾರ್ನಲ್ಲಿ ದೇಶದ ವಿವಿಧ ರಾಜ್ಯಗಳ ಕುಶಲಕರ್ಮಿಗಳು ಮತ್ತು ನೇಕಾರರು ಭಾಗವಹಿಸಿದ್ದು, ತಮ್ಮ ವೈವಿಧ್ಯಮಯ ಕೌಶಲ್ಯ, ಪ್ರತಿಭೆ ಹಾಗೂ ಸಾಂಪ್ರದಾಯಿಕ ತಂತ್ರಗಾರಿಕೆಯನ್ನು ಪ್ರದರ್ಶಿಸುತ್ತಿದ್ದಾರೆ. ಇವರಲ್ಲಿ ಅನೇಕರು ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ಮಧುಬನಿ ಚಿತ್ರಕಲೆ, ಚರ್ಮದ ಬೊಂಬೆಯಾಟ, ವಾರ್ಲಿ ಚಿತ್ರಕಲೆ, ಪಿಚ್ವಾಯಿ ಚಿತ್ರಕಲೆ, ಪಟ್ಟಚಿತ್ರ ಮತ್ತು ಫಡ್ ಚಿತ್ರಕಲೆಗಳು, ಬನಾರಸಿ ರೇಷ್ಮೆ ಬಟ್ಟೆಗಳು, ಸೆರಾಮಿಕ್ ಬ್ಲೂ ಪಾಟರಿ, ಡೋಕ್ರಾ ಕಲೆ, ಟೆರಾಕೋಟಾ ಉತ್ಪನ್ನಗಳು, ಜಮ್ದಾನಿ ಸೀರೆಗಳು, ಅಜ್ರಖ್ ಸೀರೆಗಳು ಸೇರಿದಂತೆ ಹಲವು ವಿಶಿಷ್ಟ ಕಲಾಕೃತಿಗಳು ಮತ್ತು ಕರಕುಶಲ ಉತ್ಪನ್ನಗಳು ಇಲ್ಲಿ ಪ್ರದರ್ಶನ ಹಾಗೂ ಮಾರಾಟಕ್ಕೆ ಲಭ್ಯವಿವೆ.
ಎಕ್ಸಿಮ್ ಬ್ಯಾಂಕ್ ವಿಶೇಷವಾಗಿ ಆಯೋಜಿಸುವ ಭಾರತದ ಕೈಮಗ್ಗ ಮತ್ತು ಕರಕುಶಲ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳವಾದ ‘ಎಕ್ಸಿಮ್ ಬಜಾರ್’ ತನ್ನ ಆರಂಭದ ಬಳಿಕ ಇದೇ ಮೊದಲ ಬಾರಿಗೆ ಬೆಂಗಳೂರಿನ ಜಯಮಹಲ್ ಪ್ಯಾಲೇಸ್ನಲ್ಲಿ ಆಯೋಜನೆಯಾಗಿದೆ.
ಸಾವಿರಾರು ಸಂದರ್ಶಕರನ್ನು ಆಕರ್ಷಿಸುವ ನಿರೀಕ್ಷೆಯಿರುವ ಈ ಪ್ರದರ್ಶನವು ವೈಯಕ್ತಿಕ ಕುಶಲಕರ್ಮಿಗಳು ಹಾಗೂ ಸೂಕ್ಷ್ಮ ಮತ್ತು ತಳಮಟ್ಟದ ಉದ್ಯಮಗಳ ವ್ಯಾಪಾರ ಅವಕಾಶಗಳನ್ನು ವಿಸ್ತರಿಸಲು ಸಹಕಾರಿಯಾಗಲಿದೆ. ಕುಶಲಕರ್ಮಿಗಳಿಗೆ ಹೆಚ್ಚಿನ ಪ್ರಚಾರ ಮತ್ತು ಬ್ರ್ಯಾಂಡ್ ಗುರುತಿಸುವಿಕೆ ದೊರೆಯುವುದರ ಜೊತೆಗೆ ನೇರ ಗ್ರಾಹಕರ ಸಂಪರ್ಕ, ಭವಿಷ್ಯದ ಮಾರಾಟದ ಅವಕಾಶಗಳು, ಗ್ರಾಹಕರ ಆದ್ಯತೆಗಳ ಅರಿವು, ಉದ್ಯಮದ ಜ್ಞಾನ ಹಾಗೂ ಮಾರುಕಟ್ಟೆಯಲ್ಲಿನ ಹೊಸ ಪ್ರವೃತ್ತಿಗಳನ್ನು ತಿಳಿದುಕೊಳ್ಳಲು ನೆರವಾಗಲಿದೆ.
ಇಂಡಿಯಾ ಎಕ್ಸಿಮ್ ಬ್ಯಾಂಕ್ ತನ್ನ ‘ಗ್ರಾಸ್ರೂಟ್ಸ್ ಇನಿಶಿಯೇಟಿವ್ಸ್ ಅಂಡ್ ಡೆವಲಪ್ಮೆಂಟ್’ (GRID) ಹಾಗೂ ‘ಮಾರ್ಕೆಟಿಂಗ್ ಅಡ್ವೈಸರಿ ಸರ್ವಿಸಸ್’ (MAS) ಕಾರ್ಯಕ್ರಮಗಳ ಮೂಲಕ ಕುಶಲಕರ್ಮಿಗಳು, ನುರಿತ ಕರಕುಶಲ ತಜ್ಞರು, ನೇಕಾರರು, ಉತ್ಪಾದನಾ ಸಮೂಹಗಳು, ಸ್ವಸಹಾಯ ಸಂಘಗಳು, ತಳಮಟ್ಟದ ಉದ್ಯಮಗಳು ಮತ್ತು ಸೂಕ್ಷ್ಮ ಉದ್ಯಮಗಳಿಗೆ ವಿವಿಧ ರೀತಿಯ ನೆರವು ನೀಡುತ್ತಿದೆ. ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳ ಜೊತೆಗೆ ವಿದೇಶಿ ಖರೀದಿದಾರರು ಮತ್ತು ವಿತರಕರನ್ನು ಸಂಪರ್ಕಿಸುವ ಮೂಲಕ ಅವರ ಉತ್ಪನ್ನಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆ ಅವಕಾಶಗಳನ್ನು ಕಲ್ಪಿಸುತ್ತಿದೆ.
ಈ ಕಾರ್ಯಕ್ರಮಗಳ ಮೂಲಕ ವೈಯಕ್ತಿಕ ಕುಶಲಕರ್ಮಿಗಳ ಆರ್ಥಿಕ ಸಬಲೀಕರಣ, ಉದ್ಯೋಗ ಸೃಷ್ಟಿ, ಉದ್ಯಮಶೀಲತೆಯ ಉತ್ತೇಜನ ಹಾಗೂ ಶತಮಾನಗಳಷ್ಟು ಹಳೆಯದಾದ ಸಾಂಪ್ರದಾಯಿಕ ಕರಕುಶಲ ಮತ್ತು ಕೈಮಗ್ಗ ಉತ್ಪನ್ನಗಳ ಉಳಿವು ಮತ್ತು ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ಎಕ್ಸಿಮ್ ಬ್ಯಾಂಕ್ ನೆರವಾಗುತ್ತಿದೆ.
