ಹಾಸನ: ನಗರದ ಪ್ರತಿಷ್ಠಿತ ವಾಣಿಜ್ಯ ವಿದ್ಯಾಸಂಸ್ಥೆಯಾದ ಆಚಾರ್ಯ ಕಾಲೇಜಿನಲ್ಲಿ ‘ಆಚಾರ್ಯ ನಾಡು-ನುಡಿ ಕನ್ನಡ ಹಬ್ಬ 2026’ರ ಅಂಗವಾಗಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ‘ಕನ್ನಡದ ರಾಜಮನೆತನಗಳು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು. ಜೊತೆಗೆ ವಿದ್ಯಾರ್ಥಿಗಳಿಂದ ವಿವಿಧ ತಿಂಡಿ-ತಿನಿಸುಗಳ ಕ್ಯಾಂಟೀನ್ ಕಾರ್ಯಕ್ರಮವೂ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದಯ ವರದಿ ಪತ್ರಿಕೆಯ ಸಂಪಾದಕ ಶ್ರೀ ವೆಂಕಟೇಶ್ ಉದ್ಘಾಟಿಸಿ ಮಾತನಾಡಿ, ಕನ್ನಡ ನಮ್ಮ ಅಸ್ಮಿತೆ, ಸಂಸ್ಕಾರ ಮತ್ತು ಸಂಸ್ಕೃತಿಯ ಪ್ರತೀಕ. ಕನ್ನಡ ಬಡವರ ಜೀವನದ ಆಧಾರವೂ ಹೌದು. ಕನ್ನಡದ ಉಳಿವು ಮತ್ತು ಬೆಳವಣಿಗೆಗಾಗಿ ನಾವೆಲ್ಲರೂ ಶ್ರಮಿಸಬೇಕಿದೆ ಎಂದರು.
ಬೆಂಗಳೂರಿನಂತಹ ರಾಜಧಾನಿಯಲ್ಲಿ ಕನ್ನಡದ ಬಳಕೆ ಕಡಿಮೆಯಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಆಟೋ ಚಾಲಕರು, ಹೂ ಮಾರಾಟಗಾರರು ಹಾಗೂ ಸಣ್ಣಪುಟ್ಟ ಕಸುಬು ಮಾಡುವವರೇ ನಿಜವಾದ ಕನ್ನಡದ ರಕ್ಷಕರಾಗಿದ್ದಾರೆ. ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಆಚಾರ್ಯ ಕಾಲೇಜು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಮತ್ತೋರ್ವ ಅತಿಥಿ ಮಾತೃಕೃಪ ಎಜುಕೇಶನ್ ಟ್ರಸ್ಟ್ನ ಕಾರ್ಯದರ್ಶಿ ಕುಮಾರ ಎಸ್.ಡಿ. ಮಾತನಾಡಿ, ಕನ್ನಡದ ಉಳಿವು ಮತ್ತು ಬೆಳವಣಿಗೆ ಯುವಶಕ್ತಿಯಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹಾಗೂ ಯುವಕರು ಕನ್ನಡದ ಬಳಕೆಗೆ ಹೆಚ್ಚಿನ ಆದ್ಯತೆ ನೀಡಿ, ಭಾಷೆಯ ಉಳಿವಿಗೆ ಕಟಿಬದ್ಧರಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಆದರ್ಶ ಎಚ್.ಆರ್., ಉಪನ್ಯಾಸಕಿ ಕುಮಾರಿ ರಂಜಿತಾ, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
