ರಾಮನಾಥಪುರ: ರಾಜಗುರುತಿಲಕ, ತ್ರಿವಿಧ ದಾಸೋಹಿ, ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರು ಸಮಾಜ ಸುಧಾರಕರು, ದಾರ್ಶನಿಕರು ಹಾಗೂ ಸಂಗೀತ, ಸಾಹಿತ್ಯ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ ಮಹಾನ್ ಸಂತರು. ಅವರ ಹೆಸರಿನಲ್ಲಿ ವಿತರಿಸಲಾಗುತ್ತಿರುವ ವಚನ ಪುಸ್ತಕಗಳಲ್ಲಿನ ವಚನಗಳನ್ನು ವಿದ್ಯಾರ್ಥಿಗಳು ಕಂಠಪಾಠ ಮಾಡಿಕೊಂಡು, ಅವುಗಳಲ್ಲಿನ ಮೌಲ್ಯಯುತ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಎಂ.ಆರ್. ದೇವರಾಜು ಕರೆ ನೀಡಿದರು.
ರಾಮನಾಥಪುರದ ಶ್ರೀ ಬಸವೇಶ್ವರ ವೃತ್ತದಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ವಚನ ಪುಸ್ತಕ ಹಾಗೂ ನೋಟ್ ಪುಸ್ತಕಗಳನ್ನು ವಿತರಿಸಿ ಅವರು ಮಾತನಾಡಿದರು.
2003-04ನೇ ಸಾಲಿನಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿದ್ದ ಎಂ.ಎನ್. ಕುಮಾರಸ್ವಾಮಿ ಅವರು ಶಾಲೆಯ ಅಭಿವೃದ್ಧಿಗೆ ಹಲವು ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಶಾಲೆಯ ಮುಂಭಾಗದ ಕಾಂಪೌಂಡ್ ನಿರ್ಮಾಣಕ್ಕೆ ₹28,500, ತಂದೆ-ತಾಯಿಯವರ ಹೆಸರಿನಲ್ಲಿ ಪಿಲ್ಲರ್ ಮತ್ತು ಆರ್ಚ್ ನಿರ್ಮಾಣಕ್ಕೆ ₹12,500, ಶೌಚಾಲಯ ನಿರ್ಮಾಣಕ್ಕೆ ₹10 ಸಾವಿರ ಸೇರಿದಂತೆ ಧ್ವಜಾರೋಹಣ ಕಟ್ಟಡ, ಶುದ್ಧ ಕುಡಿಯುವ ನೀರಿನ ಫಿಲ್ಟರ್, ಬರವಣಿಗೆ ಬೋರ್ಡ್ ಹಾಗೂ ಕಂಪ್ಯೂಟರ್ ವ್ಯವಸ್ಥೆ ಕಲ್ಪಿಸಲು ₹50 ಸಾವಿರಕ್ಕೂ ಅಧಿಕ ಮೊತ್ತವನ್ನು ವಿನಿಯೋಗಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಳೆದ 22 ವರ್ಷಗಳಿಂದ ಪ್ರತಿವರ್ಷ ನೂರಾರು ಬಡ ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಿಸುತ್ತಿದ್ದು, ವಚನ ಪುಸ್ತಕಗಳನ್ನು ನೀಡಿ, ಶಿವಶರಣರ ಗೋಷ್ಠಿ, ಗಾಯನ ಕಾರ್ಯಕ್ರಮ ಹಾಗೂ ಬಹುಮಾನಗಳ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಶಿಕ್ಷಕ ಮಹೇಶ್, ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳ ಭಕ್ತ ಬಳಗದ ಜಿಲ್ಲಾಧ್ಯಕ್ಷ ಎಂ.ಎನ್. ಕುಮಾರಸ್ವಾಮಿ, ಯುವ ಘಟಕದ ಜಿಲ್ಲಾಧ್ಯಕ್ಷ ಆರ್.ಕೆ. ಶ್ರೀನಿವಾಸ್, ಸಹಶಿಕ್ಷಕಿ ಶ್ರುತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
