ಚನ್ನರಾಯಪಟ್ಟಣ: ಭಾರತೀಯ ಧಾರ್ಮಿಕ ಆಚರಣೆಗಳು ಮತ್ತು ಪ್ರಾಚೀನ ಸಂಪ್ರದಾಯಗಳು ಕೇವಲ ಮೂಢನಂಬಿಕೆಗಳಲ್ಲ. ಅವುಗಳ ಹಿಂದೆ ಆಳವಾದ ವೈಜ್ಞಾನಿಕ ಚಿಂತನೆ ಹಾಗೂ ಆರೋಗ್ಯಕರ ಜೀವನಶೈಲಿಯ ಸಂದೇಶ ಅಡಗಿದೆ ಎಂದು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಹರ್ಜಿತ್ ಸಿಂಗ್ ಗ್ರೆವಾಲ್ ಅಭಿಪ್ರಾಯಪಟ್ಟರು.
ತಾಲೂಕಿನ ಶ್ರವಣಬೆಳಗೊಳದ ಧವಲತೀರ್ಥಂನಲ್ಲಿರುವ ಶ್ರೀ ಗೊಮ್ಮಟೇಶ್ವರ ವಿದ್ಯಾಪೀಠದ ಬಾಲಕರ ವಿದ್ಯಾರ್ಥಿನಿಲಯದ ನೂತನ ಕಟ್ಟಡ ನಿರ್ಮಾಣಕ್ಕೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ದೇವಾಲಯಗಳಲ್ಲಿ ಗಂಟೆ ಬಾರಿಸುವುದರಿಂದ ಹಿಡಿದು ಯಜ್ಞ-ಯಾಗಾದಿಗಳು ಹಾಗೂ ಯೋಗಾಭ್ಯಾಸದವರೆಗೆ ಭಾರತೀಯ ಪರಂಪರೆಯ ಪ್ರತಿಯೊಂದು ಆಚರಣೆಯ ಹಿಂದೆಯೂ ವಿಶೇಷ ಅರ್ಥ ಮತ್ತು ವೈಜ್ಞಾನಿಕ ಚಿಂತನೆ ಇದೆ. ಅಗ್ನಿ ಮತ್ತು ಮಂತ್ರೋಚ್ಚಾರಣೆಯಿಂದ ಉಂಟಾಗುವ ಕಂಪನಗಳ ಪ್ರಕೃತಿಯ ಮೇಲಿನ ಪ್ರಭಾವವನ್ನು ಪ್ರಾಚೀನ ಋಷಿಮುನಿಗಳು ಅರಿತಿದ್ದರು. ಇಂತಹ ಪರಂಪರೆಯ ವೈಶಿಷ್ಟ್ಯವನ್ನು ಇಂದಿನ ಯುವಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದರು.

ಜೈನ ಧರ್ಮದ ತತ್ವಗಳು ಮತ್ತು ಆಚರಣೆಗಳು ಶಿಸ್ತಿನ ಜೀವನಕ್ಕೆ ಮಾರ್ಗದರ್ಶನ ನೀಡುತ್ತವೆ. ಸೂರ್ಯಾಸ್ತದ ನಂತರ ಭೋಜನ ಮಾಡದಿರುವ ಸಂಪ್ರದಾಯ ಆರೋಗ್ಯಕರ ಜೀವನಶೈಲಿಗೆ ಪೂರಕವಾಗಿದೆ. ಮಕ್ಕಳು ಮತ್ತು ಯುವಕರು ಇಂತಹ ಉತ್ತಮ ಸಂಸ್ಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದೇಶದ ಪ್ರಗತಿಗೆ ಶಿಸ್ತು ಅತ್ಯಂತ ಮುಖ್ಯವಾಗಿದೆ ಎಂದು ತಿಳಿಸಿದರು.
ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಪ್ರಕೃತಿಯನ್ನು ಉಳಿಸಿ ಮುಂದಿನ ಪೀಳಿಗೆಗೆ ಆರೋಗ್ಯಕರ ಪರಿಸರವನ್ನು ಕೊಡುಗೆಯಾಗಿ ನೀಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಸಿಖ್ ಮತ್ತು ಜೈನ ಧರ್ಮಗಳ ನಡುವೆ ಬಹುಕಾಲದಿಂದ ಉತ್ತಮ ಬಾಂಧವ್ಯ ಹಾಗೂ ಐತಿಹಾಸಿಕ ಸಂಬಂಧವಿದೆ. ಸುಮಾರು 2300 ವರ್ಷಗಳ ಸುದೀರ್ಘ ಇತಿಹಾಸ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಹೊಂದಿರುವ ಶ್ರವಣಬೆಳಗೊಳ ಪುಣ್ಯಕ್ಷೇತ್ರವು ವಿಶೇಷ ಮಹತ್ವ ಪಡೆದಿದೆ. ಆಚಾರ್ಯ ಭದ್ರಬಾಹು ಸ್ವಾಮಿಗಳ ಮಾರ್ಗದರ್ಶನದಲ್ಲಿ ಚಂದ್ರಗುಪ್ತ ಮೌರ್ಯರು ಈ ಕ್ಷೇತ್ರಕ್ಕೆ ಆಗಮಿಸಿ ಜೈನ ಧರ್ಮದ ದೀಕ್ಷೆ ಸ್ವೀಕರಿಸಿದ ಐತಿಹಾಸಿಕ ಹಿನ್ನೆಲೆ ಈ ನೆಲದ ಹಿರಿಮೆಯನ್ನು ಹೆಚ್ಚಿಸಿದೆ ಎಂದರು.
ವಿದ್ಯಾದಾನವು ಸಮಾಜಕ್ಕೆ ನೀಡಬಹುದಾದ ಅತ್ಯಂತ ಶ್ರೇಷ್ಠ ಕೊಡುಗೆಯಾಗಿದೆ. ಉತ್ತಮ ಗುರುಗಳು ಮತ್ತು ಶಿಕ್ಷಕರು ದೊರೆತಾಗ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗಲು ಸಾಧ್ಯ. ಮಠಗಳು ಕೇವಲ ಧಾರ್ಮಿಕ ಕೇಂದ್ರಗಳಲ್ಲ, ಶಿಕ್ಷಣ, ಸಂಸ್ಕಾರ, ಶಿಸ್ತು ಹಾಗೂ ರಾಷ್ಟ್ರೀಯ ಮೌಲ್ಯಗಳನ್ನು ಕಲಿಸುವ ಪ್ರಮುಖ ಕೇಂದ್ರಗಳಾಗಿವೆ. ಇಂತಹ ಸಂಸ್ಥೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಸಮಾಜದ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.

ಭಾರತ ವಿಶ್ವಗುರುವಾಗಿ ಹೊರಹೊಮ್ಮಬೇಕಾದರೆ ಪ್ರಾಚೀನ ಸಂಸ್ಕೃತಿ, ಪರಂಪರೆ, ನೈತಿಕ ಮೌಲ್ಯಗಳು ಮತ್ತು ಶಿಸ್ತನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು. ಆಧುನಿಕ ಶಿಕ್ಷಣದ ಜತೆಗೆ ಸಂಸ್ಕಾರಯುತ ಧಾರ್ಮಿಕ ಶಿಕ್ಷಣಕ್ಕೂ ಆದ್ಯತೆ ನೀಡಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಪುಂಡಲೀಕ ಅನವಲ್, ಹಾಸನ ಜಿಲ್ಲಾ ಅಧಿಕಾರಿ ಗುಡ್ಡಪ್ಪ ಜಿಂಗಲಪ್ಪ, ಆಲೂರು ತಹಸೀಲ್ದಾರ್ ಮಲ್ಲಿಕಾರ್ಜುನ್, ಸಂದೀಪ್ ಮಲಾನ, ಆರ್ಎಸ್ಎಸ್ ಮುಖಂಡ ಗೋಪಾಲಕೃಷ್ಣ, ವಿನೋದ್ ಬಾಕ್ಲಿವಾಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
– ಮಂಜುನಾಥ್ ಐ.ಕೆ.
