ತುಮಕೂರು: ರೋಗಿಗಳ, ಸಮಾಜದ ವಿಶ್ವಾಸವೇ ವೈದ್ಯರ ಬದುಕಿನ ದೊಡ್ಡ ಸಾಧನೆ ಎಂದು ನಿಮ್ಹಾನ್ಸ್ ಸಂಸ್ಥೆಯ ನಿವೃತ್ತ ನಿರ್ದೇಶಕಿ ಡಾ.ಪ್ರತಿಮಾ ಮೂರ್ತಿ ಹೇಳಿದ್ದಾರೆ.
ನಗರದ ಶಿರಾರಸ್ತೆಯ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯ ವತಿಯಿಂದ ಶ್ರೀದೇವಿ ಆಸ್ಪತ್ರೆಯ ಸಭಾಂಗಣದಲ್ಲಿ “4ನೇ ಸ್ನಾತಕೋತ್ತರ ಪದವಿ” ವಿದ್ಯಾರ್ಥಿಗಳಿಗೆ ಪ್ರದಾನ ಸಮಾರಂಭವನ್ನು (2023ನೇ ಬ್ಯಾಚ್ನ) ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ.ಪ್ರತಿಮಾ ಮೂರ್ತಿರವರು ಜ್ಞಾನಕ್ಕೆ ಕೌಶಲ್ಯ ಬೆರೆತಾಗ ಹೆಚ್ಚು ಪರಿಣಾಮಕಾರಿಯಾಗುತ್ತದೆ ಸ್ನಾತಕೋತ್ತರ ಪದವಿ ಪಡೆದ ವೈದ್ಯರು ಇನ್ನೂ ಮುಂದೆ ರೋಗಿಗಳ ಚಿಕಿತ್ಸೆಯ ಸಂಪೂರ್ಣ ಜವಾಬ್ದಾರಿ ಹೊರುವುದರಿಂದ ರೋಗಿಗಳ ಆರೈಕೆಗೆ, ಹೆಚ್ಚಿನ ಬದ್ದತೆ, ಕಾಳಜಿ ತೊರಬೇಕು. ವೈದ್ಯಕೀಯ ಕ್ಷೇತ್ರದಲ್ಲಿ ಜ್ಞಾನ ನಿರಂತರವಾಗಿ ವಿಕಸನಗೊಳ್ಳುತ್ತಿದ್ದು ವೈದ್ಯರು ತಮ್ಮ ಜೀವನದಉದ್ದಕ್ಕೂ ಹೊಸ ವಿಚಾರಗಳನ್ನು ಕಲಿಯುವುದು ಬಹಳ ಮುಖ್ಯ ಎಂದು ಒತ್ತಿ ಹೇಳಿದರು. ವೈದ್ಯರು ರೋಗಕ್ಕೆ ಮಾತ್ರ ಚಿಕಿತ್ಸೆ ನೀಡುವುದಿಲ್ಲ, ಬದಲಾಗಿ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಾರೆ. ಮಾನವೀಯತೆ, ಸಹಾನುಭೂತಿ, ಭಾವನಾತ್ಮಕ ಸ್ಪಂದನೆ ಮುಖ್ಯವಾಗಿದೆ. ವೈದ್ಯಕೀಯ ಶಿಕ್ಷಣದಲ್ಲಿ ಪದವಿ ಗಳಿಸುವುದೇ ಗುರಿಯಲ್ಲ, ಅಂತಿಮ ಸಾಧನೆಯಲ್ಲ. ಈಗಿನ ಡಿಜಿಟಲ್ ಯುಗದಲ್ಲಿ ಇಂಟರ್ನೆಟ್, ಸಾಮಾಜಿಕ ಜಾಲತಾಣದಲ್ಲಿ ಬೇಕಾದಷ್ಟು ಮಾಹಿತಿ ದೊರಕುತ್ತದೆ. ಆ ಎಲ್ಲಾ ಮಾಹಿತಿಗಳು ವಿಶ್ವಾಸಾರ್ಹವಾಗಿರುವುದಿಲ್ಲ. ಆದ್ದರಿಂದ ವೈದ್ಯರು ದೃಢೀಕರಿಸಿದ ಹಾಗೂ ವೈದ್ಯಕೀಯ ಪದ್ದತಿಯನ್ನು ಅನುಸರಿಸಬೇಕು. ವೃತ್ತಿ ಜೀವನದಲ್ಲಿ ಹಣಕಾಸಿನ ಪ್ರತಿಫಲಕ್ಕಿಂತ ರೋಗಿಗಳ ವಿಶ್ವಾಸ, ಪ್ರೀತಿಯನ್ನೇ ವೃತ್ತಿ ಬದುಕಿನ ಸಾಧನೆಯನ್ನಾಗಿ ಪರಿಗಣಿಸಿ ಅದರಲ್ಲಿ ಖುಷಿ, ನೆಮ್ಮದಿ ಕಾಣಬೇಕು. ಸಮಾಜದ ಆರೋಗ್ಯ ಕಾಪಾಡುವ ಹೊಣೆಗಾರಿಕೆ ಇರುವುದರಿಂದ ವೈದ್ಯರು ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಬೇಕು ಎಂದರು. ದೊಡ್ಡ ಕನಸು ಕಾಣಬೇಕು, ಆಕಾಶಕ್ಕೆ ನಿಮ್ಮ ಗುರಿಯಿದ್ದರೆ ಆಗ ಸೂರ್ಯ, ಚಂದ್ರರನ್ನು ತಲುಪಲು ಸಾಧ್ಯವಾಗದಿದ್ದರೂ ಕನಿಷ್ಠ ಒಂದು ನಕ್ಷತ್ರವನ್ನಾದರೂ ಮುಟ್ಟಬಹುದು. ಒಂದು ಮಾರ್ಗದಲ್ಲಿ ಯಶಸ್ಸು ಸಿಗದಿದ್ದರೆ ಪರ್ಯಾಯ ಮಾರ್ಗಗಳನ್ನು ಸಿದ್ದವಾಗಿಟ್ಟುಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿ, ಭಾರತೀಯ ಶಿಕ್ಷಣ ಪರಂಪರೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಹೆಸರು, ಕೀರ್ತಿ ಗಳಿಸಬೇಕು ಎಂಬುದನ್ನು ಪ್ರತಿಯೊಬ್ಬ ಶಿಕ್ಷಕ, ಅಧ್ಯಾಪಕ ಬಯಸುವುದು ಸಹಜ. ವೈದ್ಯರ ಮೇಲೆ ಜನರಿಗೆ ಅಪಾರ ನಂಬಿಕೆ ಇರುತ್ತದೆ. ಅದನ್ನು ಉಳಿಸಿಕೊಳ್ಳಬೇಕು. ಸಮಾಜಕ್ಕೆ ಸೇವೆ ಸಲ್ಲಿಸುವುದು ವೈದ್ಯರ ಕರ್ತವ್ಯ. ಹಣ ಸಂಪಾದನೆ ಅಗತ್ಯವಾದರೂ ಅದು ಸೇವೆಯ ನಂತರದ ಆದ್ಯತೆಯಾಗಿರಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀದೇವಿ ಮೆಡಿಕಲ್ ಕಾಲೇಜಿನ ನಿರ್ದೇಶಕರು ಹಾಗೂ ಟ್ರಸ್ಟ್ನ ಟ್ರಸ್ಟಿ ಡಾ.ರಮಣ್ ಎಂ. ಗುರುಮೂರ್ತಿರವರು ಮಾತನಾಡಿದರು, ಎಂ.ಎಸ್.ಪಾಟೀಲ್, ಡಾ.ಲಾವಣ್ಯ, ಪ್ರಾಂಶುಪಾಲ ಡಾ.ಹರೇಂದ್ರಕುಮಾರ್ ಎಂ.ಎಲ್., ಡಾ.ಮಂಜುನಾಥ್.ಜಿ.ವಿ., ಡಾ.ರೇಖಾಗುರುಮೂರ್ತಿ, ಡಾ.ಹೇಮಂತ್ರಾಜ್ ಉಪಸ್ಥಿತರಿದ್ದರು.
– ಚಂದ್ರಚೂಡ ಕೆ.ಬಿ.
