ಚನ್ನರಾಯಪಟ್ಟಣ: ತಾಲೂಕಿನ ಶ್ರವಣಬೆಳಗೊಳ ಹೋಬಳಿ ಕೇಂದ್ರದಲ್ಲಿ ಸೆಸ್ಕಾಂ ಇಲಾಖೆಯ ದಾಖಲಾತಿಗಳ ಸಂಗ್ರಹ ಕೊಠಡಿಯ ನೂತನ ಕಟ್ಟಡವನ್ನು ಶಾಸಕ ಸಿ.ಎನ್. ಬಾಲಕೃಷ್ಣ ಅವರು ಉದ್ಘಾಟಿಸಿ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಸುಮಾರು 37 ಲಕ್ಷ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದ್ದು, ಇಲಾಖೆಯ ದಾಖಲಾತಿಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಲು ಇದರಿಂದ ಅನುಕೂಲವಾಗಲಿದೆ ಎಂದರು.

ಶ್ರವಣಬೆಳಗೊಳ ಹೋಬಳಿ ಕೇಂದ್ರದಲ್ಲಿ ಏಳು ಮಂದಿ ಪವರ್ಮ್ಯಾನ್ಗಳ ಕೊರತೆ ಇದೆ. ಇದರಿಂದ ವಿದ್ಯುತ್ ಸೇವೆ ನಿರ್ವಹಣೆಯಲ್ಲಿ ತೊಂದರೆಯಾಗುತ್ತಿದೆ. ಈ ಸಮಸ್ಯೆಯನ್ನು ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಿ, ಕೂಡಲೇ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಅಲ್ಲದೆ, ಶ್ರವಣಬೆಳಗೊಳ ಹೋಬಳಿಯಲ್ಲಿ ನಿರಂತರ ಜ್ಯೋತಿ ಯೋಜನೆ ಜಾರಿಗೆ ತರಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಶ್ರವಣಬೆಳಗೊಳ ಪಟ್ಟಣದಲ್ಲಿ 24×7 ವಿದ್ಯುತ್ ಸೇವೆಯ ಅಗತ್ಯವಿದ್ದು, ಈ ಸೌಲಭ್ಯ ಕಲ್ಪಿಸುವಂತೆಯೂ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸೆಸ್ಕಾಂ ಶ್ರವಣಬೆಳಗೊಳ ಶಾಖೆಯ ಸಹಾಯಕ ಎಂಜಿನಿಯರ್ ಮಹಾದೇವ್, ಕಿರಿಯ ಎಂಜಿನಿಯರ್ ಶ್ರೀಧರ್, ಸಂತೋಷ್, ಹಿರಿಯ ಸಹಾಯಕ ತಮ್ಮಣ್ಣಗೌಡ, ಸಹಾಯಕರಾದ ನಾಗರಾಜು, ಬಸವರಾಜ್, ದಿನೇಶ್, ಸುಪ್ರೀತ್ ಕುಮಾರ್, ಸುಮಿತ್ರಾ ಸೇರಿದಂತೆ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಜೆಡಿಎಸ್ ಮುಖಂಡರಾದ ಕಬ್ಬಾಳ್ ರಮೇಶ್, ಪ್ರವೀಣ್, ಎಸ್.ಆರ್. ಲೋಕೇಶ್, ಜಗದೀಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.
– ಮಂಜುನಾಥ್ ಐ.ಕೆ.
