ಹಿಂದೂ ಪಂಚಾಂಗದ ಪ್ರಕಾರ ಅನುಸರಿಸುವ ಚೈತ್ರದಿಂದ ಫಾಲ್ಗುಣದ ವರೆಗಿನ ದ್ವಾದಶ ಮಾಸಗಳಲ್ಲಿ ವಸಂತ ಋತುವಿನೊಂದಿಗೆ ಆರಂಭವಾಗುವ ಹಬ್ಬವೇ ಯುಗಾದಿ. ಭಾರತೀಯ ಸಂಪ್ರದಾಯದ ಪ್ರಕಾರ ಈ ದಿನವನ್ನು ಹೊಸವರ್ಷವೆಂದು ಕರೆಯಲಾಗುತ್ತದೆ.
ಮಾಗಿಯ ಚಳಿ ಮುಗಿದು ಹೋಳಿಯ ರಂಗಿನ ತೆರೆಯೆಳೆದು ಭೂರಮೆಯು ನವ ನವೀನ ಚಿಗುರೆಲೆಗಳಿಂದ , ಬಗೆ ಬಗೆಯ ಮನಮೋಹಕ ಹೂಗಳಿಂದ ಅಲಂಕೃತಗೊಂಡು, ಭೃಂಗಗಳ ಮಧುರ ಝೇಂಕಾರದ ನಾದದೊಂದಿಗೆ ಬೆರೆತು ಹೊಸತನದ ನವೋಲ್ಲಾಸ ಚಿಮ್ಮಿಸುವ “ಯುಗಾದಿ” ಹಬ್ಬದ ಮೂಲಕ ಇಡೀ ವರ್ಷದ ಆಗುಹೋಗುಗಳಿಗೆ ನಾಂದಿ ಹಾಡುತ್ತಾಳೆ.
ಬದುಕಿನ ಕಷ್ಟ ಸುಖಗಳ ದ್ಯೋತಕವಾಗಿ, ನೋವು ನಲಿವುಗಳ ಪ್ರಾತಿನಿಧಿಕವಾಗಿರುವ ಯುಗಾದಿಯಂದು ಸೇವಿಸುವ ಬೇವು-ಬೆಲ್ಲದ ಮಿಶ್ರಣವು ಮುಂಬರುವ ವೈಶಾಖದ ದಿನಗಳಲ್ಲಿ ಮೈ ಶಾಖ ಹೆಚ್ಚಳಕ್ಕೆ ಕಾರಣವಾಗುವ ವಿಪರೀತ ಸೆಕೆಯನ್ನು, ಅಗಾಧವಾದ ಧಗೆಯನ್ನು ತಡೆಯುವ ಶಕ್ತಿ ಚೈತನ್ಯ, ಪ್ರತಿರೋಧಕ ಗುಣವನ್ನು ವೃದ್ಧಿಸುತ್ತದೆ. ರೈತಾಪಿ ಬಂಧುಗಳಿಗೆ ಬರುವ ಮುಂಗಾರಿನ ಕೃಷಿ ಚಟುವಟಿಕೆಗಳ ಆರಂಭಕ್ಕೆ ಮುನ್ನುಡಿ ಬರೆಯುವ ಈ ಹಬ್ಬದ ಸಂಭ್ರಮವು ನಾಡಿನೆಲ್ಲೆಡೆ ವಿಶೇಷ ವಿಧಿ ವಿಧಾನಗಳಿಂದ ಆಚರಿಸಲ್ಪಡುತ್ತದೆ. ಅದರಲ್ಲೂ ನನ್ನ ಬಾಲ್ಯದ ದಿನಗಳಿಂದಲೂ ಪ್ರತಿ ವರ್ಷದ ಯುಗಾದಿ ಸಂದರ್ಭದಲ್ಲಿ ನನ್ನೂರಿನಲ್ಲಿ ಅತ್ಯಂತ ಆಕರ್ಷಕವಾಗಿ ಅರ್ಥಪೂರ್ಣವಾಗಿ ನಡೆಯುವ “ಹೊನ್ನಾರಿನ ವೈಭವ”ವನ್ನು ಕುರಿತಂತೆ ತಮ್ಮೊಂದಿಗೆ ಹಂಚಿಕೊಳ್ಳಲು ತುಂಬಾ ಖುಷಿಯಾಗುತ್ತದೆ.
ನನ್ನೂರು ಹೊಡೇನೂರು ಕೃಷಿ ಕಸುಬನ್ನು ಪ್ರಧಾನವಾಗಿಸಿಕೊಂಡ ನೂರಾರು ಕುಟುಂಬಗಳಿರುವ ಅನ್ನದಾತರ ಊರು. ಊರಿನ ಹೆಸರಿನ ವ್ಯುತ್ಪತ್ತಿಯ ಬಗ್ಗೆ ಹೇಳುವುದಾದರೆ, ಹಿಂದಿನ ಮೂರ್ನಾಲ್ಕು ತಲೆಮಾರಿನವರು ಜೀವಿಸುವ ಸಂದರ್ಭದಲ್ಲಿ ನನ್ನೂರಿನಲ್ಲಿ ನೂರಾರು ಎಕರೆ ಜಮೀನಿನ ಒಡೆತನವಿರುವ ಗೌಡರ ಕುಟುಂಬವಿದ್ದುದಾಗಿಯೂ, ಆ ದೊಡ್ಡ ಕುಟುಂಬದ ಆಶ್ರಯದಲ್ಲಿ ಕೃಷಿ ಚಟುವಟಿಕೆ ಸೇರಿದಂತೆ ಹತ್ತು ಹಲವು ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು ತಮ್ಮ ಜೀವನೋಪಾಯವನ್ನು ಕಂಡುಕೊಂಡ ಇತರೆ ಸಂಸಾರಗಳು ಆ ಕುಟುಂಬದ ಯಜಮಾನನ್ನು ಪ್ರೀತಿಯಿಂದ ‘ಒಡೆಯ’ ಎಂದು ಕರೆಯುತ್ತಿದ್ದರಂತೆ. ಅದಕ್ಕಾಗಿ ಆ ಊರಿನ ಜನರು ಮತ್ತು ಸುತ್ತ ಮುತ್ತಲಿನ ಊರಿನವರು ‘ಒಡೆಯನ ಊರು’ ಎಂದು ಕರೆಯುತ್ತಿದ್ದುದಾಗಿಯೂ ಮುಂದೆ ಅದು ಆಡುಮಾತಿನಲ್ಲಿ ಒಡೆಯನೂರು, ಒಡೇನೂರು ಎಂಬ ರೂಪಾಂತರದೊಂದಿಗೆ ಹೊಡೇನೂರು ಆಗಿರಬಹುದೆಂದು ನಂಬಲಾಗಿದೆ.
ಇದೇ ಹೊಡೇನೂರಿನಲ್ಲಿ ನನ್ನ ಬಾಲ್ಯದ ದಿನಗಳಿಂದಲೂ ಯುಗಾದಿ ಹಬ್ಬದ ಸಂಭ್ರಮವನ್ನು ಕಣ್ಣಾರೆ ಕಂಡು ಆನಂದಿಸುತ್ತಾ ಬೆಳೆದಿರುವ ನನಗೆ ಆಗಿನಿಂದ ಈಗಿನವರೆಗೂ ಈ ಹಬ್ಬದ ಆಚರಣೆಯು ತುಂಬಾ ಮಹತ್ವದ ಸಾರ್ವಜನಿಕ ಮತ್ತು ಕೃಷಿಕ ಸಮುದಾಯದ ಹಬ್ಬವಾಗಿ ಉಳಿದುಕೊಂಡಿದೆ.

ಹಬ್ಬದ ಮುನ್ನ ಒಂದೆರಡು ದಿನಗಳಲ್ಲಿ ಊರಿನ ಪ್ರಮುಖ ಹಿರಿಯರು ಶ್ರೀ ಬಸವೇಶ್ವರ ದೇವಾಲಯದಲ್ಲಿ ಎಲ್ಲಾ ಕುಟುಂಬಗಳ ಮುಖ್ಯಸ್ಥರನ್ನು ಕರೆಯಿಸಿ ಸಭೆ ನಡೆಸಿ ಯುಗಾದಿ ಸಂದರ್ಭದ “ಹೊನ್ನಾರು ಉತ್ಸವ” ದ ರೂಪುರೇಷೆಯನ್ನು ಚರ್ಚೆ ನಡೆಸಿ ಸಿದ್ಧಪಡಿಸಿಕೊಂಡು ಜವಾಬ್ದಾರಿಗಳನ್ನು ಹಂಚಿಕೊಳ್ಳುತ್ತಾರೆ. ಹಬ್ಬದ ದಿನದಂದು ಪ್ರತಿಯೊಂದು ಕುಟುಂಬಗಳೂ ಧಾರ್ಮಿಕ ಪೂಜೆಯ ಖರ್ಚಿಗಾಗಿ, ಅತ್ಯುತ್ತಮ ಹೊನ್ನಾರು ಅಲಂಕಾರಕ್ಕಾಗಿ ಕೊಡುವ ಮೂರು ಬಹುಮಾನಗಳು, ಹೂವು ಹಣ್ಣು ಪ್ರಸಾದಗಳಿಗಾಗಿ ಇಂತಿಷ್ಟು ಹಣವನ್ನು ನೀಡಲು ನಿಗದಿಪಡಿಸಿಕೊಂಡು ಸಂಗ್ರಹಿಸುತ್ತಾರೆ.
ಹಬ್ಬದ ದಿನದಂದು ಮುಂಜಾನೆಯೇ ಬೇಗನೆ ಎದ್ದು ಸ್ನಾನಾದಿ ಕಾರ್ಯಗಳನ್ನು ಮುಗಿಸಿ ಶುಚಿರ್ಭೂತರಾಗುವ ಹೆಣ್ಣು ಮಕ್ಕಳು ಮನೆಯ ಮುಂದೆ ರಂಗುರಂಗಿನ ರಂಗೋಲಿಯ ಚಿತ್ತಾರವನ್ನು ಬಿಡಿಸಿ, ಬಾಗಿಲಿಗೆ ಮಾವಿನ ತಳಿರು ತೋರಣದೊಂದಿಗೆ, ಬಣ್ಣ ಬಣ್ಣದ ಹೂವುಗಳು ಮತ್ತು ಬೇವಿನ ಎಲೆಗಳನ್ನು ಕಟ್ಟಿ ಸಿಂಗರಿಸುತ್ತಾರೆ. ಆನಂತರ ಮಕ್ಕಳಿಗೆ ಹೊಸ ಬಟ್ಟೆಗಳನ್ನು ತೊಡಿಸಿ, ಹಬ್ಬದ ವಿಶೇಷ ಅಡುಗೆಯ ತಯಾರಿಯಲ್ಲಿ ಮಗ್ನರಾಗುವ ಹೆಂಗಸರು ಪೂಜಾದಿ ಕೆಲಸಗಳಿಗೂ ಅಣಿ ಮಾಡಿಕೊಳ್ಳುತ್ತಾರೆ. ಮನೆಯ ಗಂಡು ಮಕ್ಕಳು ದನಕರುಗಳ ಮೈ ತೊಳೆದು ಅವುಗಳ ಕೊಂಬುಗಳಿಗೆ ವಿವಿಧ ಬಣ್ಣಗಳ ಪಟ್ಟೆಗಳನ್ನು ಬಳಿದು, ದೇಹವನ್ನು ಚಿತ್ರಗಳಿಂದ ಸಿಂಗರಿಸುತ್ತಾರೆ. ವಿಶೇಷವಾಗಿ ಹಿರಿಯರಿಗೆ ಬಟ್ಟೆ, ನೈವೇದ್ಯ ಇಡುವ ಪದ್ಧತಿ ಇರುವಂತಹ ಕುಟುಂಬಗಳಲ್ಲಿ ತುಂಬಾ ಭಕ್ತಿ ಶ್ರದ್ಧೆಯಿಂದ ಹಬ್ಬವನ್ನು ಆಚರಿಸುತ್ತಾರೆ. ಏರು ಹೊತ್ತಿನ ನಂತರ ಬಂಧು ಮಿತ್ರರ ಜೊತೆಗೆ ಬೇವು ಬೆಲ್ಲದ ಮಿಶ್ರಣವನ್ನು ಹಂಚಿ ಪರಸ್ಪರ ಹೊಸ ವರ್ಷದ ಶುಭಾಶಯ ವಿನಿಮಯ ಮಾಡಿಕೊಂಡು, ಹೋಳಿಗೆಯನ್ನು ಒಳಗೊಂಡಂತೆ ಬಗೆಬಗೆಯ ವಿಶೇಷ ಖಾದ್ಯಗಳ ಭೋಜನವನ್ನು ಸಂಭ್ರಮದಿಂದ ಸ್ವೀಕರಿಸಲಾಗುತ್ತದೆ.
ಸಂಜೆಯ ಹೊತ್ತಿಗೆ ಊರಿನ ಬಸವೇಶ್ವರ ದೇವಾಲಯದಲ್ಲಿ ಹೊನ್ನಾರುಗಳ ಮೆರವಣಿಗೆಗೆ ಭರ್ಜರಿ ಸಿದ್ಧತೆ ನಡೆಯುತ್ತದೆ. ಬಹುತೇಕ ರೈತಾಪಿ ಕುಟುಂಬಗಳೇ ಇರುವುದರಿಂದ ಪ್ರತಿ ಮನೆಯಿಂದ ಭೂಮಿಯನ್ನು ಉಳುಮೆ ಮಾಡುವ ನೇಗಿಲು, ನೊಗ ಮತ್ತು ಜೋಡೆತ್ತುಗಳನ್ನು ವಿಶೇಷವಾಗಿ ಸಿಂಗರಿಸುತ್ತಾರೆ. ಕೆಲವರು ಎತ್ತುಗಳ ಮೈಮೇಲೆ ಚಿತ್ತಾರವಿರುವ ವಸ್ತ್ರಗಳನ್ನು ಹೊದಿಸಿ, ಕೊಂಬುಗಳಿಗೆ ರಂಗುರಂಗಿನ ಟೇಪ್ ಗಳನ್ನು ಕಟ್ಟಿ ವಿಶೇಷ ಮೆರುಗು ತುಂಬುತ್ತಾರೆ. ದೊಡ್ಡ ಕಣಗಲೆ, ಕಕ್ಕೆ ಹೂವು, ಬೂರುಗದ ಹೂವು, ಸೀಮೆ ಚುಜ್ಜಲಿ ಹೂಗಳ ಹಾರಗಳಿಂದ ಅಲಂಕಾರ ಮಾಡುವ ಪರಿಯು ತುಂಬಾ ಆಕರ್ಷಣೀಯವಾಗಿರುತ್ತದೆ. ಜೋರಾದ ತಮಟೆಯ ಸದ್ದಿನ ಹಿನ್ನೆಲೆಯಲ್ಲಿ ಅಲಂಕೃತವಾದ ನೂರಾರು ಹೊನ್ನಾರುಗಳು ದೇವಾಲಯದ ಸುತ್ತಲೂ ಸಾಲಾಗಿ ನಿಂತು ಮಹಾ ಮಂಗಳಾರತಿಗಾಗಿ ಕಾಯುವ ಘಳಿಗೆಯು ಹಬ್ಬದ ಕ್ಲೈಮ್ಯಾಕ್ಸ್ ನಂತೆ ಭಾಸವಾಗುತ್ತದೆ. ಊರಿನ ಜನರು ಮಾತ್ರವಲ್ಲದೆ ನೆರೆ ಹೊರೆಯ ಗ್ರಾಮಸ್ಥರು, ಮಕ್ಕಳು, ಮಹಿಳೆಯರೊಡನೆ ಬಂಧು ಮಿತ್ರರು ಹಬ್ಬದ ಸವಿಯೂಟವನ್ನು ಸೇವಿಸಿದ ನಂತರ ಹೊನ್ನಾರು ವೈಭವವನ್ನು ಕಣ್ತುಂಬಿಕೊಳ್ಳಲು ಕಿಕ್ಕಿರಿದು ಸೇರುವುದನ್ನು ನೋಡಲು ಬಹಳ ಸಂತೋಷಕರವಾಗಿರುತ್ತದೆ.

ಊರಿನ ಪೂಜಾರಿ ಕುಟುಂಬದವರು ಬಸವೇಶ್ವರ ಪ್ರತಿಮಗೆ ಪೂಜಾ ಸೇವೆ ಮುಗಿಸಿ ಮಹಾಮಂಗಳಾರತಿ ಬೆಳಗುವ ವೇಳೆಗೆ ಹರಕೆ ಹೊತ್ತ ಹಿರಿಯರು ಇಡುಗಾಯಿ ಒಡೆದ ತಕ್ಷಣ ಹೊನ್ನಾರುಗಳನ್ನು ನಡೆಸುವ ಯುವಕರು, ಹಿರಿಯರು ತಮ್ಮ ಕೈಯಲ್ಲಿ ಚಾಟಿ ಆಡಿಸುತ್ತಾ ದೇವಾಲಯದ ಸುತ್ತಲೂ ಮೂರು ಬಾರಿ ಪ್ರದಕ್ಷಿಣೆ ಹಾಕಿಸುತ್ತಾರೆ. ಆನಂತರ ದೇಗುಲದ ಪೂಜಾರಿಕೆ ಹೊಲದಲ್ಲಿ ” ಹೋ….” ಎಂಬ ಹರ್ಷೋದ್ಗಾರದ ಕೂಗಿನೊಂದಿಗೆ ಹತ್ತಾರು ಸುತ್ತುಗಳ ಉಳುಮೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಆ ಹೊನ್ನಾರುಗಳ ನೂಕು ನುಗ್ಗಲು ನೋಡುವುದೇ ಸೊಗಸು. ದೇಗುಲದ ಸುತ್ತಲೂ ಇರುವ ದೊಡ್ಡ ಮರಗಳು, ತಾರಸಿ ಮನೆಗಳ ಮೇಲೆ ಕುಳಿತು ದೃಶ್ಯ ವೈಭವವನ್ನು ಬೆರಗಿನಿಂದ ವೀಕ್ಷಿಸಿ ಆನಂದಿಸುತ್ತಾರೆ. ಅತ್ಯುತ್ತಮ ಅಲಂಕಾರ ಮಾಡಿದ ಎತ್ತುಗಳ ಹೊನ್ನಾರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡಿ ಸನ್ಮಾನಿಸುತ್ತಾರೆ. ಅವೇ ಹೊನ್ನಾರುಗಳು ಅವರವರ ಜಮೀನುಗಳಿಗೆ ಹೋಗಿ ಮುಂಬರುವ ಮುಂಗಾರಿನ ಕೃಷಿ ಚಟುವಟಿಕೆಗಳಿಗೆ ಒಳ್ಳೆಯದಾಗಲೆಂದು ಭೂತಾಯಿಯಲ್ಲಿ ಪ್ರಾರ್ಥಿಸುತ್ತಾ ಕೆಲವು ಸುತ್ತುಗಳ ಉಳುಮೆ ಮಾಡುತ್ತಾರೆ. ವಿಶೇಷ ಎಂದರೆ ಬಹುತೇಕ ಯುಗಾದಿ ಹಬ್ಬದ ದಿನ ಅಥವಾ ಆ ವಾರದಲ್ಲಿ ಮೋಡ ಕವಿದು ಸ್ವಲ್ಪವಾದರೂ ಮಳೆಯಾಗುವ ರೂಢಿಯಿದೆ. ಹಾಗಾಗಿ ಹೊನ್ನಾರಿನ ಮೂಲಕ ಉಳುಮೆ ಕಾರ್ಯಕ್ಕೆ ಅನುಕೂಲವಾಗುತ್ತದೆ.
ಹೊಸ ವರ್ಷದ ಆರಂಭದ ದಿನವಾದ್ದರಿಂದ ಹೊನ್ನಾರು ಮೆರವಣಿಗೆ ಮುಗಿಸಿ ವಾಪಾಸು ಬರುವಷ್ಟರಲ್ಲಿ ಬಾನಂಗಳದಿ ಬಿದಿಗೆ ಚಂದ್ರಮನು ಬೆಳ್ಳಿಯ ತುಣುಕಿನಂತೆ ಮಿನುಗುತ್ತಿರುತ್ತಾನೆ. ಈ ಚಂದ್ರನ ಅಕ್ಕ ಪಕ್ಕದ ತುದಿಗಳು ಸಮವಾಗಿದ್ದರೆ ನಾಡಿನಲ್ಲಿ ಆಯ ವ್ಯಯಗಳು, ಕಷ್ಟ ಸುಖಗಳು, ಮಳೆ ಬೆಳೆಗಳು ಸಮವಾಗಿರುತ್ತವೆ ಎಂದು ಗ್ರಾಮದ ಹಿರಿಯರು ಲೆಕ್ಕ ಹಾಕುತ್ತಾರೆ. ಹಾಗೆಯೇ ಎಡ ತುದಿ ಮೇಲಿದ್ದರೆ ಒಂದು ಲೆಕ್ಕ, ಬಲ ತುದಿ ಮೇಲಿದ್ದರೆ ಮತ್ತೊಂದು ಲೆಕ್ಕದಂತೆ ಆ ವರ್ಷದ ಮಳೆ ಬೆಳೆ, ಆಹಾರ ವಿಹಾರ, ಅತಿವೃಷ್ಟಿ ಅನಾವೃಷ್ಠಿಯ ಸಾಧ್ಯತೆಯ ಬಗೆಗೆ ಭವಿಷ್ಯ ಹೇಳುವುದನ್ನು ಹಿರಿಯರು ರೂಢಿ ಮಾಡಿಕೊಂಡಿದ್ದಾರೆ. ಅಂದಿನ ಬಿದಿಗೆ ಚಂದ್ರನು ಒಂದು ರೀತಿಯಲ್ಲಿ ಹೊಸ ವರ್ಷದ ಆಗುಹೋಗುಗಳ ಸೂಚಕವಾಗಿರುತ್ತಾನೆ.

ಕಾಲದ ಓಟದೊಳಗಿನ ಬದಲಾವಣೆಗಳಿಗೆ ಒಗ್ಗಿಕೊಂಡಿರುವ ಎಲ್ಲರಂತೆ ರೈತಾಪಿ ಕುಟುಂಬಗಳು ಸಹ ಸಾಂಪ್ರದಾಯಿಕ ಜೋಡೆತ್ತು, ನೇಗಿಲು , ನೊಗಗಳನ್ನು ಬಳಸಿ ಕೃಷಿ ಕಾರ್ಯಗಳನ್ನು ನಿರ್ವಹಿಸುವಲ್ಲಿನ ಪರಿಸ್ಥಿತಿ, ಮನಸ್ಥಿತಿ ಬದಲಾಗಿದ್ದು, ಟ್ರ್ಯಾಕ್ಟರ್ ನಂತಹ ಅತ್ಯಾಧುನಿಕ ಕೃಷಿ ಉಪಕರಣಗಳನ್ನು ಬಳಸುತ್ತಿರುವುದರಿಂದ ಎತ್ತು ದನಕರುಗಳ ಸಾಕಾಣಿಕೆ , ಬೇಸಾಯದ ಕೆಲಸಗಳಲ್ಲಿನ ಬಳಕೆ ಕಡಿಮೆ ಆಗಿದ್ದು, ಯುಗಾದಿಯ ಹೊನ್ನಾರು ವೈಭವವು ಮಹತ್ವ ಕಳೆದುಕೊಳ್ಳುತ್ತಿದೆ. ವರ್ಷವಿಡೀ ದುಡಿದು ದಣಿಯುವ ರೈತರು ಮತ್ತು ಜೋಡೆತ್ತುಗಳಿಗೆ ವಿರಾಮ ಮತ್ತು ಉತ್ಸವದ ಮೂಲಕ ಹರುಷವನ್ನು ಪಡೆಯುವ ಅವಕಾಶದ ಸ್ವರೂಪವು ಬದಲಾಗಿದೆ. ಈಗೇನಿದ್ದರೂ ಬೆರಳೆಣಿಕೆಯಷ್ಟು ಹೊನ್ನಾರುಗಳು ಯುಗಾದಿಯ ಉತ್ಸವದಲ್ಲಿ ಪಾಲ್ಗೊಳ್ಳುತ್ತಿವೆ. ಹಿಂದಿನ ದಶಕದ ಸಂಭ್ರಮವಿಲ್ಲ, ಆಗಿನ ಹಿರಿಯರ ಮಾತಿಗಿದ್ದ ಮೌಲ್ಯ ಈಗಿಲ್ಲ, ಯುವಜನಾಂಗಕ್ಕೆ ಕೃಷಿ ಕಾಯಕದ ಮೇಲೆ ಆಸಕ್ತಿ ಕಡಿಮೆಯಾಗಿದ್ದು ಊರ ಹಬ್ಬ, ಜಾತ್ರೆ ಮಹೋತ್ಸವಗಳ ಮೇಲೆ ಗೌರವ, ಕಾಳಜಿ ಕಡಿಮೆಯಾಗುತ್ತಿರುವುದರಿಂದ ನಮ್ಮೂರ ಹೊನ್ನಾರು ವೈಭವದ ಕಳೆಯೂ ಕುಂದುತ್ತಿದೆ. ಬಹುಶಃ ಬಹುತೇಕ ಹಳ್ಳಿಗಳಲ್ಲಿಯೂ ಈ ಹೊನ್ನಾರು ಮೆರವಣಿಗೆಯ ಪರಿ ಬದಲಾದಂತಿದೆ. ಇಂತಹ ಎಷ್ಟೋ ಸತ್ಸಂಪ್ರದಾಯಗಳು ಆಧುನಿಕ ಬದುಕಿನ ಶೈಲಿಯ ಅಬ್ಬರದಲ್ಲಿ ಕಡೆಗಣನೆಯಾಗಿವೆ ಎಂಬುದಂತೂ ಸುಳ್ಳಲ್ಲ.
~ಹೊ.ರಾ.ಪರಮೇಶ್ ಹೊಡೇನೂರು
#7022765372

