ಬೆಂಗಳೂರು: ಜನ್ಮ ನೀಡಿದ ತಾಯಿ ಹಾಗೂ ನಾವು ಬದುಕುವ, ಅನ್ನ ನೀಡುವ ಜನ್ಮಭೂಮಿ ಎರಡೂ ನಾವು ಕಾಣದ ಸ್ವರ್ಗಕ್ಕಿಂತ ಮಿಗಿಲು ಎಂದು ಕವಿ, ಚಿಂತಕ ಹಾಗೂ ಶೇಷಾದ್ರಿಪುರಂ ಕಾಲೇಜಿನ ಪ್ರಾಧ್ಯಾಪಕ ಡಾ. ರಾಮಲಿಂಗೇಶ್ವರ್ ಅಭಿಪ್ರಾಯಪಟ್ಟರು.
ನಗರದ ರಾಜಾಜಿನಗರದಲ್ಲಿರುವ ಕೆಎಲ್ಇ ವಿದ್ಯಾಸಂಸ್ಥೆಯ ನಿಜಲಿಂಗಪ್ಪ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ 71ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಮಹಾತ್ಮ ಗಾಂಧೀಜಿ, ಡಾ. ಬಿ.ಆರ್. ಅಂಬೇಡ್ಕರ್, ಬಸವಣ್ಣ ಹಾಗೂ ಬುದ್ಧ ಸೇರಿದಂತೆ ಅನೇಕ ಮಹನೀಯರು ತಮ್ಮ ಬದುಕಿನುದ್ದಕ್ಕೂ ದೇಶದ ಅಭಿವೃದ್ಧಿ ಮತ್ತು ಸಮಾಜದ ಶ್ರೇಯಸ್ಸಿಗಾಗಿ ಶ್ರಮಿಸಿದ್ದಾರೆ. ಅವರ ಸೇವಾ ಮನೋಭಾವ ಹಾಗೂ ಆದರ್ಶಗಳು ಇಂದಿನ ಪೀಳಿಗೆಗೆ ಸ್ಫೂರ್ತಿಯಾಗಬೇಕು ಎಂದರು.
ಕುವೆಂಪು, ಬೇಂದ್ರೆ, ಬಿ.ಎಂ. ಶ್ರೀ, ಹುಯಿಲಗೋಳ ನಾರಾಯಣರಾಯರು, ಸಿದ್ಧಪ್ಪ ಕಂಬಳಿ, ಅನಕೃ ಸೇರಿದಂತೆ ಅನೇಕ ಕನ್ನಡಪರ ಹೋರಾಟಗಾರರ ಪರಿಶ್ರಮದಿಂದ ಕನ್ನಡ ನಾಡು ಇಂದು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದೆ. ಇಂತಹ ಮಹನೀಯರ ತ್ಯಾಗ, ಹೋರಾಟ ಹಾಗೂ ಸೇವೆಯನ್ನು ಸ್ಮರಿಸುವ ಹಬ್ಬವೇ ಕರ್ನಾಟಕ ರಾಜ್ಯೋತ್ಸವ ಎಂದು ತಿಳಿಸಿದರು.

ತಂದೆ, ತಾಯಿ, ಗುರುಹಿರಿಯರ ಮಾರ್ಗದರ್ಶನದಲ್ಲಿ ಪ್ರತಿಯೊಬ್ಬರೂ ನಾಡಿನ ಸೇವೆಗೆ ಮುಂದಾಗಬೇಕು. ಕನ್ನಡ ನಾಡಿನಲ್ಲಿ ವಾಸಿಸುವ ಪ್ರತಿಯೊಬ್ಬರೂ ಕನ್ನಡವನ್ನು ಓದಲು, ಬರೆಯಲು ಹಾಗೂ ಮಾತನಾಡಲು ಕಲಿಯಬೇಕು. ಉದ್ಯಮಗಳು ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು. ಎಲ್ಲರೂ ಕನ್ನಡದಲ್ಲಿಯೇ ಹೆಸರು ಬರೆದು ಸಹಿ ಮಾಡುವ ಮೂಲಕ ಕನ್ನಡ ಭಾಷೆಯ ಬಳಕೆಗೆ ಆದ್ಯತೆ ನೀಡಬೇಕು ಎಂದು ತಮ್ಮ ಹಾಸ್ಯಮಿಶ್ರಿತ ಮಾತುಗಳ ಮೂಲಕ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ಖ್ಯಾತ ಜಾನಪದ ಗಾಯಕ ಡಾ. ಜೋಗಿಲ ಸಿದ್ದರಾಜು ಮಾತನಾಡಿ, ಹರಿದು ಹಂಚಿಹೋಗಿದ್ದ ಕನ್ನಡ ನಾಡನ್ನು ಒಂದುಗೂಡಿಸಿದ ಮಹನೀಯರ ಪರಿಶ್ರಮವನ್ನು ಸ್ಮರಿಸಬೇಕು. ಗ್ರಾಮೀಣ ಪ್ರದೇಶದ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಬೆಳೆದ ತಾನು ಇಂದು 15 ದೇಶಗಳಲ್ಲಿ ಕನ್ನಡದ ಜಾನಪದ ಗೀತೆಗಳನ್ನು ಪರಿಚಯಿಸುವ ಅವಕಾಶ ಪಡೆದಿರುವುದಕ್ಕೆ ವಿದ್ಯೆ, ಬುದ್ಧಿ ನೀಡಿದ ಗುರುಗಳೇ ಕಾರಣ ಎಂದು ಹೇಳಿದರು.

ನಂತರ ‘ಗುರುವೇ ನಿನ್ನಾಟ ಬಲ್ಲವರಾರಾರು’ ಹಾಗೂ ‘ಬಾರಿಸು ಕನ್ನಡ ಡಿಂಡಿಮವ’ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ರಂಜಿಸಿದರು.
ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಸಿ. ಸುರೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಔಷಧ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ರಾಜಮ್ಮ ಸ್ವಾಗತಿಸಿದರು. ಪ್ರಾಧ್ಯಾಪಕಿ ಭುವನೇಶ್ವರಿ ಜಿ. ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಶ್ರೀರಾಮ್ ಪ್ರಾರ್ಥನಾ ಗೀತೆ ಹಾಡಿದರು. ಪ್ರೊ. ವೆಂಕಟೇಶ್ ಹಾಗೂ ಗೌರಿ ಅತಿಥಿಗಳನ್ನು ಪರಿಚಯಿಸಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
