ತುಮಕೂರು: ಸಂವಿಧಾನದ ಪ್ರಸ್ತುತತೆ ಹಾಗೂ ಮೂಢನಂಬಿಕೆಗಳ ಬಗ್ಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸಲು ನಗರದ ಹೊರವಲಯದ ಭೀಮಸಂದ್ರದ ಗ್ಲೋಬಲ್ ಶಾಹೀನ್ ಮಹಿಳಾ ಕಾಲೇಜಿನಲ್ಲಿ ಈ ತಿಂಗಳ 14ರಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗ್ಲೋಬಲ್ ಗ್ರೂಪ್ನ ವ್ಯವಸ್ಥಾಪಕ ನಿರ್ದೇಶಕ ಅಫ್ಜಲ್ ಷರೀಫ್ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳ ದಿನಾಚರಣೆ ಅಂಗವಾಗಿ ಅಂದು ಬೆಳಗಿನಿಂದ ದಿನವಿಡೀ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿಶೇಷವಾಗಿ ವಿದ್ಯಾರ್ಥಿಗಳಿಗೆ ನಮ್ಮ ಸಂವಿಧಾನದ ಪ್ರಸ್ತುತತೆ, ಶಿಕ್ಷಣದ ಮಹತ್ವ, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.ಜೊತೆಗೆ ವಿದ್ಯಾರ್ಥಿಗಳ ಪೋಷಕರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದ್ದು, ಮೂಢ ನಂಬಿಕೆಯಿಂದ ಆಗುವ ಅನಾಹುತಗಳು, ಅವುಗಳ ಬಗ್ಗೆ ವಿಷಯ ತಜ್ಞರು ಅರಿವು ಮೂಡಿಸುವರು ಎಂದು ಹೇಳಿದರು.
ರಾಜ್ಯ ಉಚ್ಛನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ದಾಸ್, ಜವಹರಲಾಲ್ ನೆಹರೂ ಪ್ಲಾನೆಟೋರಿಯಂನ ಮಾಜಿ ಅಧ್ಯಕ್ಷ ಡಾ.ಎ.ಎಸ್.ಕಿರಣ್ಕುಮಾರ್, ಕಿಮ್ಸ್ ಅಧ್ಯಕ್ಷ ಡಾ.ಟಿ.ಹೆಚ್. ಆಂಜನಪ್ಪ, ಪವಾಡ ಬಯಲು ಖ್ಯಾತಿಯ ಡಾ.ಹುಲಿಕಲ್ ನಟರಾಜ್ ಅತಿಥಿಗಳಾಗಿ ಭಾಗವಹಿಸುವರು.ಈ ಗಣ್ಯರು ತಮ್ಮ ಕ್ಷೇತ್ರ ವ್ಯಾಪ್ತಿಯ ವಿಚಾರಗಳ ಬಗ್ಗೆ ಉಪನ್ಯಾಸ ನೀಡುವರು ಎಂದು ಅಫ್ಜಲ್ ಷರೀಫ್ ಹೇಳಿದರು.
ಸಂಸ್ಥೆ ಕಾರ್ಯದರ್ಶಿ ಡಾ.ಶೇಕ್ ಅಬ್ರಾರ್ ಅಹ್ಮದ್ ಮಾತನಾಡಿ, ನಮ್ಮಲ್ಲಿ ಅನೇಕ ಮೂಢನಂಬಿಕೆಗಳು ಇವೆ. ದೈನಂದಿನ ಬದುಕಿನಲ್ಲಿ ನಾವು ಕಾಣುತ್ತೇವೆ, ಅದರಿಂದ ಮೋಸ ಹೋಗುವ ಅಪಾಯವೂಇದೆ.ಅಂತಹವುಗಳ ರಹಸ್ಯ ಬಯಲು ಮಾಡಿ ಜನರನ್ನು ಜಾಗೃತಿಗೊಳಿಸಲು ಡಾ.ಹುಲಿಕಲ್ ನಟರಾಜ್ ಭಾಗವಹಿಸುವರು.ಸಾರ್ವಜನಿಕರು ಕುಟುಂಬ ಸಮೇತ ಆಗಮಿಸಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಕೋರಿದರು.
ಡಾ. ಹಜರತ್ ಸಾಹೇಬ್ ನಾದಾಜ್ ಮಾತನಾಡಿ, ಸಾಮಾಜಿಕ ನ್ಯಾಯ, ಶಿಕ್ಷಣ, ವಿಜ್ಞಾನದ ನಂಬಿಕೆ, ಸಮಾಜ ಸುಧಾರಣೆ, ಸಂವಿಧಾನದ ಪ್ರಸ್ತುತತೆ ಹಾಗೂ ಮೂಢ ನಂಬಿಕೆ ನಿವಾರಣೆ ಮಾಡುವುದು ಈ ಕಾರ್ಯಕ್ರಮದ ಆಶಯವಾಗಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಆಯೇಷಾಜುಬೇದ್ಕೌಸರ್, ಉಪನ್ಯಾಸಕರಾದ ಜಾವೆದ್ ಬೇಗ್, ಸುಲ್ತಾನಾ ಉಪಸ್ಥಿತರಿದ್ದರು.
– ಚಂದ್ರಚೂಡ ಕೆ.ಬಿ
