ಕೆ.ಆರ್.ಪೇಟೆ: ತಾಲ್ಲೂಕಿನ ಪ್ರಾಥಮಿಕ ಭೂ ಅಭಿವೃದ್ಧಿ (ಪಿಎಲ್ಡಿ) ಬ್ಯಾಂಕ್ ಆಡಳಿತ ಮಂಡಳಿಯ ನೂತನ ಪ್ರಭಾರ ಅಧ್ಯಕ್ಷರಾಗಿ ಲಕ್ಷ್ಮೀಪುರ ಚಂದ್ರೇಗೌಡ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ ಎಂದು ಬ್ಯಾಂಕ್ ವ್ಯವಸ್ಥಾಪಕ ಎಂ. ಆನಂದ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದಿನ ಅಧ್ಯಕ್ಷ ಎ.ಆರ್. ರಾಜಾನಾಯಕ್ ಅವರು ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಸಹಕಾರ ಇಲಾಖೆಯ ನಿಯಮಾನುಸಾರ ಲಕ್ಷ್ಮೀಪುರ ಚಂದ್ರೇಗೌಡ ಅವರನ್ನು ಪ್ರಭಾರ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದ್ದು, ಅವರು ಅಧಿಕಾರ ಸ್ವೀಕರಿಸಿದ್ದಾರೆ.

ಅಧಿಕಾರ ಸ್ವೀಕರಿಸಿ ಮಾತನಾಡಿದ ಚಂದ್ರೇಗೌಡ, ತಮ್ಮನ್ನು ಸರ್ವಾನುಮತದಿಂದ ಆಯ್ಕೆ ಮಾಡಿದ ಬ್ಯಾಂಕಿನ ಎಲ್ಲಾ ನಿರ್ದೇಶಕರು ಹಾಗೂ ಷೇರುದಾರ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ತಮಗೆ ದೊರೆತಿರುವ ಜವಾಬ್ದಾರಿಯ ಅವಧಿಯಲ್ಲಿ ಹಿರಿಯ ನಿರ್ದೇಶಕರ ಮಾರ್ಗದರ್ಶನದಲ್ಲಿ ಬ್ಯಾಂಕಿನ ಷೇರುದಾರ ಸದಸ್ಯರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು.
ರೈತರು ಹಾಗೂ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಕುರಿ, ಕೋಳಿ ಮತ್ತು ಮೇಕೆ ಸಾಕಾಣಿಕೆ ಸೇರಿದಂತೆ ವಿವಿಧ ಉಪಕಸುಬುಗಳಿಗೆ ತ್ವರಿತವಾಗಿ ಸಾಲ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಅಭಿನಂದನೆ: ನೂತನ ಪ್ರಭಾರ ಅಧ್ಯಕ್ಷರಾಗಿ ಆಯ್ಕೆಯಾದ ಲಕ್ಷ್ಮೀಪುರ ಚಂದ್ರೇಗೌಡ ಅವರನ್ನು ಬ್ಯಾಂಕಿನ ನಿರ್ದೇಶಕರು ಹಾಗೂ ಮುಖಂಡರು ಹಾರ ಹಾಕಿ, ಸಿಹಿ ತಿನ್ನಿಸುವ ಮೂಲಕ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್, ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್, ಸಮಾಜಸೇವಕ ಆರ್.ಟಿ.ಒ. ಮಲ್ಲಿಕಾರ್ಜುನ್, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಹಾಗೂ ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಡಿ.ಎಂ. ಮಹೇಂದ್ರ, ಜಿಲ್ಲಾ ಸಹಕಾರಿ ಮುದ್ರಣಾಲಯದ ಸಹಕಾರ ಸಂಘದ ಅಧ್ಯಕ್ಷೆ ಪಿ.ಜೆ. ಮಂಜುಳಾ, ನಿಕಟಪೂರ್ವ ಅಧ್ಯಕ್ಷ ಎ.ಆರ್. ರಾಜಾನಾಯಕ್, ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಕಬ್ಬಲಗೆರೆಪುರ ಪುಟ್ಟಸ್ವಾಮಿಗೌಡ, ಅರಳಕುಪ್ಪೆ ಎ.ಸಿ. ಮೋಹನ್, ಅಣ್ಣೇಚಾಕನಹಳ್ಳಿ ನಾಗರಾಜೇಗೌಡ, ಶೀಳನೆರೆ ರಾಮೇಗೌಡ, ಮಾಳಗೂರು ಎಲ್.ಐ.ಸಿ. ಜಗದೀಶ್, ಬಣ್ಣೇನಹಳ್ಳಿ ಬಿ.ಎನ್. ಧನಂಜಯ್, ಎಂ.ಆರ್. ರಮೇಶ್, ಅರೆಬೊಪ್ಪನಹಳ್ಳಿ ಸುನಿಲ್, ಭಾರತೀಪುರ ಸುರೇಶ್, ಮಂಜುಳಾ ಕೃಷ್ಣೇಗೌಡ, ಎಸ್.ಎನ್. ಕವಿತ ಚಂದ್ರೇಗೌಡ, ಬಂಡಿಹೊಳೆ ನಾಗೇಶ್, ಹೊನ್ನೇನಹಳ್ಳಿ ಕೃಷ್ಣೇಗೌಡ ಸೇರಿದಂತೆ ಬ್ಯಾಂಕಿನ ನಿರ್ದೇಶಕರು ಹಾಗೂ ಮುಖಂಡರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
