ಚನ್ನರಾಯಪಟ್ಟಣ: ಪಟ್ಟಣದ ಗಾಂಧಿ ವೃತದಲ್ಲಿರುವ ಶ್ರೀ ರಾಯರ ರಂಗ ಮಂದಿರದಲ್ಲಿ ಕಾರ್ತಿಕ ಮಾಸದ ಪವಿತ್ರ ದಿನವಾದ ಗುರುವಾರದ ಶುಭ ದಿನದಂದು ತಾಲೂಕು ಆಡಳಿತದಿಂದ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಯುವ ಪತ್ರಕರ್ತರು ಹಾಗೂ ಸಾಮಾಜಿಕ ಚಿಂತಕರಾದ ಶ್ರೀ ಐ.ಕೆ. ಮಂಜುನಾಥ್ ಅವರಿಗೆ ಶ್ರೀ ರಂಗ ಮಂದಿರದ ವತಿಯಿಂದ ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಾಲೂಕು ಪಂಚಾಯತಿ ಇ ಓ ಗಳಾದ ಶ್ರೀ ಜಿ ಆರ್ ಹರೀಶ್ ರವರು ಮಾತನಾಡಿ ಶ್ರೀ ರಾಯರ ರಂಗ ಮಂದಿರದ ಸೇವಾ ಕಾರ್ಯಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಕುರಿತು ಮಾತನಾಡಿದರು. ಶ್ರೀ ರಾಯರ ರಂಗ ಮಂದಿರವು ಧರ್ಮ, ಆಧ್ಯಾತ್ಮ ಹಾಗೂ ಸಮಾಜಮುಖಿ ಚಿಂತನೆಗಳ ಸಂಗಮವಾಗಿ ಮೂಡಿಬಂದಿದೆ ಎಂದು ಪ್ರಶಂಸಿಸಿದರು.

*ಅಧ್ಯಾತ್ಮಿಕ ಮತ್ತು ಸಾಮಾಜಿಕ ಲೋಕದ ಸಂಗಮ:*
ಶ್ರೀ ರಾಯರ ರಂಗ ಮಂದಿರವು ಸದಾ ಕಾಲ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳ ಮೂಲಕ ಭಕ್ತರಲ್ಲಿ ಭಕ್ತಿಭಾವವನ್ನು ಜಾಗೃತಗೊಳಿಸುತ್ತಿದೆ. ಕಾರ್ತಿಕ ಮಾಸದ ವಿಶೇಷ ಗುರುಪೂಜಾ ಸಮಾರಂಭದ ಅಂಗವಾಗಿ, ಜ್ಞಾನದ ಜ್ಯೋತಿಯನ್ನು ಬೆಳಗುವ ಪವಿತ್ರ ಕಾರ್ತಿಕ ಮಾಸದ ಗುರುವಾರದಂದು ಶ್ರೀ ರಾಯರ ರಂಗ ಮಂದಿರದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ವಿಶೇಷ ಅಲಂಕಾರ ಮಾಡಲಾಯಿತು ಹಾಗೂ ಗುರುರಾಯರಿಗೆ ಪೂಜೆಯನ್ನು ಮಾಡಲಾಯಿತು. ಮಂತ್ರಾಲಯದ ಸಾನ್ನಿಧ್ಯ ಪ್ರಭುಗಳು ಆಗಮಿಸಿ ಮೂಲ ರಾಮದೇವರನ್ನು ಪೂಜಿಸಿದ ಪವಿತ್ರ ಭಕ್ತಿಭಾವದ ಸನ್ನಿಧಿಯಲ್ಲಿ ಈ ಸನ್ಮಾನ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಪತ್ರಿಕೋದ್ಯಮದ ಮೂಲಕ ರಾಯರ ಸೇವೆಯನ್ನು ನಿರಂತರವಾಗಿ ಮಾಡುತ್ತಾ ಬಂದಿರುವ ಹಾಗೂ ರಾಯರ ರಂಗ ಮಂದಿರದ ಪ್ರತಿಯೊಂದು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸದಾ ಬೆನ್ನೆಲುಬಾಗಿ ನಿಂತು ಸರ್ವವಿಧದ ಸಹಕಾರ ನೀಡುತ್ತ ಬಂದಿರುವ ಶ್ರೀ ಐ.ಕೆ.ಮಂಜುನಾಥ್ ಅವರ ನಿಸ್ವಾರ್ಥ ಸೇವೆ ಮತ್ತು ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ಈ ಗೌರವಾರ್ಪಣೆ ಮಾಡಲಾಗಿದೆ.

ಕಾರ್ಯಕ್ರಮದಲ್ಲಿ ಮಂತ್ರಾಲಯದ ಶ್ರೀ ಗುರುರಾಘವೇಂದ್ರ ಸ್ವಾಮಿಗಳು ಹಾಗೂ ಮೂಲ ರಾಮದೇವರ ಕೃಪಾಶೀರ್ವಾದವು ಶ್ರೀ ಐ.ಕೆ. ಮಂಜುನಾಥ್ ಅವರಿಗೆ ಮತ್ತು ಅವರ ಕುಟುಂಬಕ್ಕೆ ಸದಾ ಇರಲಿ ಎಂದು ಪ್ರಾರ್ಥಿಸಲಾಯಿತು. ಈ ವಿಶೇಷ ಅಭಿನಂದನಾ ಸಮಾರಂಭವು ಊರಿನ ಪ್ರಮುಖ ಗಣ್ಯರು, ಭಕ್ತಾದಿಗಳು ಹಾಗೂ ಸಾರ್ವಜನಿಕರ ಉಪಸ್ಥಿತಿಯಲ್ಲಿ ಅತ್ಯಂತ ಸಂಭ್ರಮದಿಂದ ಜರುಗಿತು. ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಣಾಧಿಕಾರಿಗಳಾದ ಜಿ ಆರ್ ಹರೀಶ್, ಶ್ರೀಮತಿ ಸವಿತಾ ಹರೀಶ್, ಶ್ರೀ ರಾಯರ ರಂಗಮಂದಿರದ ಮುಖ್ಯಸ್ಥರಾದ ಎಂ ಕೆ ಪ್ರಕಾಶ್ ಭಾರದ್ವಾಜ್, ಶ್ರೀಮತಿ ಕೆ ಆರ್ ಅನಿತಾ ಪ್ರಕಾಶ್, ಶ್ರೀಮತಿ ಸರಿತಾ ಮಂಜುನಾಥ್ ಸೇರಿದಂತೆ ಇತರರು ಹಾಜರಿದ್ದರು.
