ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
“ ನಾನೇನ್ರೀ ಮಾಡೋಕ್ಹೋಗ್ಲಿ, ಇದ್ದೆ ಅಷ್ಟೆ!”
ತೇಜಸ್ವಿಯವರಿಗೆ ಪಂಪ ಪ್ರಶಸ್ತಿ ಬಂದ ಸಂದರ್ಭ. ತೇಜಸ್ವಿಯವರ ಅಭಿಮಾನಿಯೂ, ನನ್ನ ತಾಯಿಯ ಬಹು ವರ್ಷಗಳ ಸ್ನೇಹಿತರೂ ಆದ ಶ್ರೀಮತಿ ಮೋಟಮ್ಮ, ತೇಜಸ್ವಿಯವರನ್ನು ಅಭಿನಂದಿಸಲು ಹೋಗೋಣವೆಂದರು. ಮೋಟಮ್ಮ, ನನ್ನ ತಾಯಿ ಕಮಲಾಕ್ಷಮ್ಮ, ಬಿ.ಸಿ. ಪಾಟೀಲ್ ಮತ್ತು ನಾನು ತೇಜಸ್ವಿಯವರ ಮನೆಗೆ ಹೋದೆವು. ರಾತ್ರಿ ಸುಮಾರು ಏಳೂವರೆ ಆಗಿತ್ತು. ತೇಜಸ್ವಿ ದಂಪತಿಗಳು ಆದರದಿಂದ ಬರಮಾಡಿಕೊಂಡರು.
“ಏನ್ರೀ ಮೋಟಮ್ಮ ನಿಮ್ಮ ಸ್ತ್ರೀ ಶಕ್ತಿ ದೆಸೆಯಿಂದ ಒಂದಷ್ಟು ಜನ ಹಳ್ಳಿಹೆಣ್ಣುಮಕ್ಕಳು ಹಣಕಾಸಿನ ಸ್ವಾವಲಂಬನೆಗೆ ಬಂದರು ಕಣ್ರೀ. ಮೂರುಕಾಸಿಗೂ ಗಂಡನ ಬಳಿ ಕೈಯ್ಯೊಡ್ಡುತ್ತಿದ್ದವ್ರನ್ನು ಮಾನಾಮರ್ಯಾದೆಯಿಂದ ಬದುಕುವ ಹಾಗೆ ಮಾಡಿದ್ರಿ ಕಣ್ರೀ, ಅದೊಂದು ವಿಷ಼ಯದಲ್ಲಿ ನಿಮಗೆ ಹ್ಯಾಟ್ಸಾಫ್ ಮಾರಾಯ್ರೇ.”
ನನ್ನ ಕಡೆ ತಿರುಗಿ, “ಇವನೆಲ್ಲಿ ಸಿಕ್ಕಿದ! ಇವನ ಕಾರ್ನಲ್ಲಿ ಬಂದ್ರಾ? ನಿಮಗೆಲ್ಲೋ ಗ್ರಹಚಾರ ಕೆಟ್ಟಿದೆ ಎಂದು ಕಾಣುತ್ತೆ. ಹೇಗೆ ಓಡಿಸ್ತಾನೆ ನೋಡಿದ್ರಾ? ಸ್ಟಿಯರಿಂಗ್ ಹಿಡಿದ ಮಾರನೆ ದಿನಾನೇ ಮನೆಮಂದಿನೆಲ್ಲಾ ಕೂರಿಸ್ಕೊಂಡು ಸಕಲೇಶಪುರದ ಹೈವೇನಲ್ಲಿ ಹಾಸನಕ್ಕೆ ಹೋಗಿದ್ನಂತೆ, ಹಲ್ಕಟ್. ಮೊನ್ನೆ ಕುಪ್ಳಿಗೆ ಹೋಗೋವಾಗ ಏನಯ್ಯಾ ಹೀಗೆ ಸುಂಯ್ ಸುಂಯ್ ಎಂದು ಹಾವಿನ ತರ ಬಿಡ್ತಿದೀಯಲ್ಲ ಜೋಪಾನ ಕಣಯ್ಯ ಎಂದ್ರೆ ಕೇಳ್ತಾನೇನ್ರೀ. ಯಾವೋನೋ ಮಾರಾಯ ನಿನಗೆ ಡ್ರೈವಿಂಗ್ ಹೇಳಿಕೊಟ್ಟೋರು ಎಂದ್ರೆ, ಡ್ರೈವಿಂಗ್ ಸ್ಕೂಲ್ಗೆ ಹೋಗೋಕೆ ಟೈಮ್ ಅಡ್ಜೆಸ್ಟ್ ಆಗಲಿಲ್ಲವಂತೆ. ಇವನು ಕೇಳಿದ ಟೈಮ್ಗೆ ಸ್ಕೂಲ್ನವರು ಒಪ್ಪಲಿಲ್ಲವಂತೆ. ಯಾರನ್ನೋ ಕೇಳಿದ್ನಂತೆ ಗೇರಂದ್ರೆ ಯಾವುದು, ಗೇರ್ ಯಾಕೆ ಚೇಂಜ್ ಮಾಡಬೇಕು, ಬ್ರೇಕೆಲ್ಲಿರುತ್ತೆ, ಕ್ಲಚ್ ಯಾವಾಗ ಒತ್ತಬೇಕು ಅಂತ. ಅವರೇನೋ ಹೇಳಿಕೊಟ್ರಂತೆ. ಅವತ್ತಿಂದ ಇವನೂ ಒಬ್ಬ ಡ್ರೈವರ್. ಡಿಎಲ್ ಉಂಟೋ ಇಲ್ವೋ ಮಾರಾಯ ಎಂದದಕ್ಕೆ, ಹೋದ ವಾರ ಮಾಡಿಸ್ಕೋಂಡಿದ್ದೀನಿ ಎಂದ. ಇವನ್ಜೊತೆ ಕೂತ್ಕೊಂಡು ಬಂದಿದ್ದೀರಲ್ಲ, ನಿಮ್ಮ ಧೈರ್ಯಕ್ಕೆ ಆಗ್ಬಹುದು ಕಣ್ರೀ. ಹೋಗ್ತಾ ಜೋಪಾನವಾಗಿ ರ್ಕೊಂಡ್ಹೋಗೋ ಮಾರಾಯ “ಎಂದು ನನ್ನನ್ನು ಗದರಿಸಿದರು.
“ಅಲ್ಲಾ ಮೋಟಮ್ಮ ಈ ಸರ್ಕಾರಕ್ಕೆ ಮಾನಾ ಮರ್ಯಾದೆ ಇಲ್ಲವೇನ್ರೀ, ರಸ್ತೆಗಳು ಈ ರೀತಿ ಗುಂಡಿಬಿದ್ದು ಹೆಣ ಬಾಯಿಬಿಟ್ಟುಕೊಂಡಂತೆ ಆಕಾಶ ನೋಡ್ತಿದ್ದಾವಲ್ರೀ, ಅಧಿಕಾರಿಗಳು, ರಾಜಕಾರಣಿಗಳು ಕಣ್ಣು ಮುಚ್ಚಿಕೊಂಡು ತಿರುಗಾಡುತ್ತಿದ್ದಾರೋ ಹೇಗೆ?”
“ ಏನ್ರೀ ಕಮಲಾಕ್ಷಮ್ಮ ಹೇಗೆ ನಡೀತಿದೆ, ನಿಮ್ಮ ಸಮಾಜಸೇವೆ?, ಇರ್ಯಾರ್ರೀ ಹೊಸಬರು ಬಂದಿದ್ದಾರೆ? “ ಎಂದು ಬಿ.ಸಿ. ಪಾಟೀಲರ ಕಡೆಗೆ ತಿರುಗಿದರು. ತೇಜಸ್ವಿಯವರ ಕಟ್ಟಾ ಅಭಿಮಾನಿಯಾಗಿದ್ದ ಪಾಟೀಲರು ತೇಜಸ್ವಿಯವರ ಸಾಮೀಪ್ಯದಿಂದ ಟ್ರಾನ್ಸ್ಗೆ ಒಳಗಾದವರಂತೆ ಕುಳಿತಿದ್ದರು. ಸಾಹಿತ್ಯಲೋಕದ ಆರಾಧ್ಯದೈವವೇ ಎದುರಿಗಿದ್ದುದರಿಂದ
ಏನು ಮಾತನಾಡಬೇಕು? ಏನು ಮಾತನಾಡಿದರೆ ಸರಿ, ಎಷ್ಟು ಮಾತನಾಡಿದರೆ ತಪ್ಪು ಎಂದುಕೊಂಡು ಕುಳಿತಿದ್ದರು.
ಪಾಟೀಲರು “ಸರ್, ನಾನು ಮೈಸೂರಿನಲ್ಲಿ ನಿಮ್ಮನ್ನು ನೋಡಿದ್ದೇನೆ. ನಾನಲ್ಲಿ ಎಂ.ಎ. ಮಾಡುತ್ತ್ತದ್ದಾಗ ನಿಮ್ಮ ತಂದೆ ವೈಸ್ ಚಾನ್ಸಲರ್ ಆಗಿದ್ದರು. ಆಗ ನೀವೇನು ಮಾಡ್ತಿದ್ರಿ?” ಎಂದು ಪ್ರಶ್ನೆಯನ್ನು ಅದೇ ಆತಂಕದಿಂದ ಎಸೆದರು. ಸ್ವಲ್ಪ ಹೊತ್ತು ಮೌನವಾಗಿ ಪಾಟೀಲರನ್ನೇ ದಿಟ್ಟಿಸಿ ನೋಡಿದ ತೇಜಸ್ವಿ,
“ ನಾನೇನ್ರೀ ಮಾಡೋಕ್ಹೋಗ್ಲಿ, ಇದ್ದೆ ಅಷ್ಟೆ!”ಎಂದರು.

“ಯಾವುದೇ ಆರ್ಥಿಕ ಶಿಸ್ತಿಲ್ಲದೇ ಕಾರ್ಯರೂಪಕ್ಕೆ ಬರುವ ಯೋಜನೆಗಳು ಸಹಾಯದ ರೂಪದಲ್ಲಿರುವುದೇ ನಮ್ಮ ಜನರನ್ನು ಸೋಮಾರಿಗಳನ್ನಾಗಿಸಿ ಕೊನೆ ಮೊದಲಿಲ್ಲದ ಸಾಲದ ಸಮುದ್ರದಲ್ಲಿ ಮುಳುಗಿಸಿದೆ. ತಾನೂ ಸಾಲವನ್ನೇ ಹಾಸಿ ಹೊದ್ದು, ಹೆಂಡತಿ ಮಕ್ಕಳಿಗೂ ಸಾಲದ ಸುಪ್ಪತ್ತಿಗೆಯನ್ನೇ ರೆಡಿಮಾಡಿ ಸತ್ತು ಸುಣ್ಣವಾಗುವ ರೈತನ ದಾರುಣ ಸ್ಥಿತಿಗೆ ಸರ್ಕಾರವೇ ನೇರವಾಗಿ ಹೊಣೆಗಾರ’’ ಎನ್ನುತ್ತಾರೆ ತೇಜಸ್ವಿ.
ತನ್ನ ಪಾಡಿಗೆ ತಾನು ದುಡಿದು ಬದುಕುವ ರೈತನನ್ನು ಅನಗತ್ಯವಾಗಿ ತನ್ನ ಹಂಗಿಗೆ ಕೆಡವಿಕೊಂಡು ದೇಶದ ಆರ್ಥಿಕತೆಯನ್ನೇ ಹದಗೆಡಿಸಿ ಅದರ ಮೂಲಕ ತನ್ನ ನೀತಿಹೀನ, ವಿವೇಕರಹಿತ ರಾಜಕೀಯ ಅಧಿಕಾರದ ಒಳಹುನ್ನಾರಗಳನ್ನು ಕಾರ್ಯರೂಪಕ್ಕೆ ತರಲು ಹವಣಿಸುವ ರಾಜಕಾರಣಿಗಳೇ ಈ ದೇಶದ ಸರಿಪಡಿಸಲಾಗದ ದುಸ್ಥಿತಿಗೆ ಕಾರಣ. ಕಾಲವೇ ಎಲ್ಲವನ್ನೂ ಮರೆಸುತ್ತಾ, ಮೆರೆಸುತ್ತಾ ರಿಪೇರಿ ಮಾಡುತ್ತಾ ಹೋಗುವಾಗ ಒಮ್ಮೆ ಆಯ್ಕೆಯಾಗಿ ಸುಮ್ಮನೇ ಕುಳಿತರೆ ಸಾಕು. ಪ್ರತೀ ತಿಂಗಳ ಭತ್ಯೆಯ ಜೊತೆ ಐದು ವರ್ಷ ತಾನಾಗೇ ಪೂರ್ಣಗೊಳ್ಳುತ್ತದೆ.
ನಮ್ಮ ಕೈಯ್ಯಲ್ಲಿರೋದೇ ಒಂದು ಓಟು. ಆ ಒಂದೇ ಓಟಿನಿಂದ ಏನಾದರೂ ಕ್ರಾಂತಿ ಮಾಡ್ತೀವಿ ಎಂದುಕೊಂಡು ಹೋರಾಟ, ಬದಲಾವಣೆ ಅನ್ನುತ್ತಾ ತಿರುಗಿದ್ರೋ, ನಮ್ಮ ನಿಮ್ಮ ಮನೆಗಳ ಸ್ಥಿತಿ ಬಿಗಡಾಯಿಸತೊಡಗುತ್ತೆ. ಯಾವ ಕ್ರಾಂತಿಯೂ ಬೇಡವಾಗಿರುವ, ಬೇಕಾಗಿದ್ದರೂ ಸಂಭವಿಸದಂತೆ ಮಾಡುವ ವಿಷಣ್ಣ ಸ್ಥಿತಿಯನ್ನು ನಾವೇ ನಿರ್ಮಾಣ ಮಾಡಿಕೊಂಡುಬಿಟ್ಟಿದ್ದೇವೆ. ಆದರೂ ದೂರದಲ್ಲೆಲ್ಲೋ ಆಶಾಕಿರಣ ಕಾಣುತ್ತಿದೆ. ನಮ್ಮ ಹಣೇಬರಹವಾದ ಆ ಒಂದೇ ಒಂದು ಓಟಿನಿಂದಲೇ ಏನಾದರೂ ಬದಲಾವಣೆ ಸಾಧ್ಯ ಕಣ್ರಯ್ಯಾ ಎನ್ನುತಿದ್ದರು ತೇಜಸ್ವಿ.
ಇನ್ನು ನಮ್ಮ ಜನಪ್ರತಿನಿಧಿಗಳಿಗೆ ಹೇಳಲೇಬೇಕಾದ ಕೆಲ ವಿಚಾರಗಳಿವೆ. ನಾವು ಇವರಿಗೆ ಬರೀ ಸನ್ಮಾನ, ಅಡಿಗಲ್ಲು ಹಾಕುವುದು, ಏನನ್ನಾದರೂ ಬಿಡುಗಡೆ ಮಾಡುವ ಕೆಲಸ ಬಿಟ್ಟರೆ ಬೇರೇನನ್ನೂ ಕೊಟ್ಟಂತಿಲ್ಲ. ಬೆಂಗಳೂರಿಗೆ ಅಥವ ದೆಹಲಿಗೆ ಹೋಗಿಬಂದದ್ದೇ ಇವರ ಸಾಧನೆಯಾಗಬಾರದು. ಇವರ ಪ್ರವಾಸಗಳಿಂದ ಈ ಸಮಾಜದ ಕಟ್ಟಕಡೆಯ ಮನುಷ್ಯನಿಗೆ ಯಾವ ರೀತಿಯ ಉಪಯೋಗವಾಗಿದೆ ಎಂಬುದನ್ನು ನಮ್ಮ ಪ್ರತಿನಿಧಿಗಳು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳಲಿ. ಸಂವಿಧಾನ ಅವರಿಗೂ ಅನೇಕ ಕೆಲಸಗಳನ್ನು ಗೊತ್ತು ಮಾಡಿದೆ. ಆ ಕೆಲಸಗಳನ್ನು ಮಾಡಲು ನಾವು ಅವರಿಗೆ ಅವಕಾಶ ನೀಡಬೇಕಷ್ಟೆ. ಹಾಗೆಯೇ ಅದನ್ನು ಅವರು `ನಮಗೆ ಕೆಲಸ ಮಾಡಲು ಬಿಡ್ರಪ್ಪಾ’ ಎಂದು ಖಂಡತುಂಡವಾಗಿ ಹೇಳಬೇಕು ಸಹಾ.
ಗುರುತರ ಜವಾಬ್ದಾರಿಯಿರುವ ಅವರು ತಾವು ಮಾತ್ರ ಮಾಡಲು ಸಾಧ್ಯವಿರುವ ಕೆಲಸಕ್ಕೆ ಸಮಯ ಮೀಸಲಿಟ್ಟುಕೊಳ್ಳಬೇಕು, ಸಾರ್ವಜನಿಕ ಸಂಪನ್ಮೂಲ ಉಪಯೋಗಕ್ಕೆ ಬಾರದ ಕೆಲಸಗಳಿಗಾಗಿ ಪೋಲಾಗಬಾರದು. ಹೊಗಳಿಕೆ ಹಾಕುವ ವಂದಿ ಮಾಗಧರುಗಳನ್ನು ದೂರವಿಟ್ಟು, ಜನ ತಮ್ಮ ಮೇಲಿಟ್ಟರುವ ಭರವಸೆಯನ್ನು ನೆನಪಿಟ್ಟುಕೊಂಡು, ವೈಯಕ್ತಿಕ ಸ್ಥಾನಮಾನದ ಗೌರವ-ಘನತೆಯನ್ನು ಕಾಪಾಡಿಕೊಳ್ಳಬಹುದು.
ಜನಪ್ರತಿನಿಧಿಗಳು ಜನಸಮುದಾಯದ ಸೇವಕರೇ ಹೊರತು ಜನರ ಮಾಲೀಕರಲ್ಲ. ರಾಜಕಾರಣ ಈಗ ಸೇವೆಯಾಗಿ ಉಳಿದಿಲ್ಲ, ಲಾಭ ಅರಸುವ ವ್ಯವಹಾರವಾಗಿದೆ ಎಂಬ ಆಪಾದನೆಯನ್ನು ತೊಡೆದು ಹಾಕುವ ಜವಾಬ್ದಾರಿ ಅವರ ಮೇಲಿದೆ.
ಮುಂದುವರೆಯುತ್ತದೆ…
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946

