ಕೊರಟಗೆರೆ: ಒಕ್ಕಲಿಗ ಸಮುದಾಯದ ಹಲವು ವರ್ಷಗಳ ಕನಸಾದ ಸಮುದಾಯ ಭವನ ನಿರ್ಮಾಣಕ್ಕೆ ಪಟ್ಟಣದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಯಿತು. ಶ್ರೀ ನಂಜಾವಧೂತ ಸ್ವಾಮೀಜಿ, ಶ್ರೀ ನಿಶ್ಚಲಾನಂದ ಸ್ವಾಮೀಜಿ ಹಾಗೂ ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ಸೇರಿದಂತೆ ಗಣ್ಯರು ಗುದ್ದಲಿ ಪೂಜೆ ಮತ್ತು ಗಂಗಾಪೂಜೆ ನೆರವೇರಿಸಿ ಕಾಮಗಾರಿಗೆ ಶುಭ ಹಾರೈಸಿದರು.

ಸಮುದಾಯ ಭವನ ನಿರ್ಮಾಣಕ್ಕೆ ಪಿ.ಎನ್.ಕೆ. ಕೃಷ್ಣಮೂರ್ತಿ ಅವರು ₹51 ಲಕ್ಷ ದೇಣಿಗೆ ನೀಡಿದ್ದು, ಎಂ.ಎನ್.ಜೆ. ಮಂಜುನಾಥ್ ಅವರು ₹50 ಲಕ್ಷ ನೆರವು ಘೋಷಿಸಿದ್ದಾರೆ. ಶಾಸಕ ಸುರೇಶ್ ಗೌಡ ₹25 ಲಕ್ಷ, ಶ್ರೀನಿವಾಸ್ ₹1 ಲಕ್ಷ ಹಾಗೂ ಕೆ.ಎಲ್.ಎಂ. ಮಂಜುನಾಥ್ ₹50 ಸಾವಿರ ನೆರವು ನೀಡಿದ್ದಾರೆ.

ಎಂ.ಎನ್.ಜೆ. ಮಂಜುನಾಥ್ ಅವರು ಮುಂಗಡವಾಗಿ ₹5 ಲಕ್ಷ ನಗದು ಹಾಗೂ ₹5 ಲಕ್ಷ ಚೆಕ್ ನೀಡಿದ್ದು, ಭವನ ನಿರ್ಮಾಣಕ್ಕೆ ಅಗತ್ಯವಿರುವ ಜಲ್ಲಿ ಮತ್ತು ಎಂ-ಸ್ಯಾಂಡ್ ಅನ್ನು ತಮ್ಮ ಕ್ರಷರ್ನಿಂದ ಉಚಿತವಾಗಿ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.

ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ಸಮಾಜಮುಖಿ ಕಾರ್ಯಗಳಿಗೆ ದಾನಿಗಳ ಸಹಕಾರ ಮಾದರಿಯಾಗಿದೆ. ಸಮುದಾಯದ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಬೇಕು ಎಂದರು.
ಶ್ರೀ ಕ್ಷೇತ್ರ ಪಟ್ಟನಾಯಕನಹಳ್ಳಿ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಮಹಾಸ್ವಾಮೀಜಿ ಮಾತನಾಡಿ, ಎಂ.ಎನ್.ಜೆ. ಮಂಜುನಾಥ್ ಹಾಗೂ ಪಿ.ಎನ್.ಕೆ. ಕೃಷ್ಣಮೂರ್ತಿ ಸೇರಿದಂತೆ ಹಲವು ದಾನಿಗಳು ಸಮುದಾಯ ಭವನ ನಿರ್ಮಾಣಕ್ಕೆ ದೊಡ್ಡ ಮಟ್ಟದ ನೆರವು ನೀಡಿರುವುದು ಶ್ಲಾಘನೀಯ ಎಂದರು.
ಯುವ ಮುಖಂಡ ಎಂ.ಎನ್.ಜೆ. ಮಂಜುನಾಥ್ ಮಾತನಾಡಿ, ಕೆಂಪೇಗೌಡ ಜಯಂತಿಯಂದು ಸಮುದಾಯ ಭವನಕ್ಕೆ ₹50 ಲಕ್ಷ ನೆರವು ನೀಡುವುದಾಗಿ ಭರವಸೆ ನೀಡಿದ್ದೆ. ಅದರಂತೆ ಮುಂಗಡವಾಗಿ ₹10 ಲಕ್ಷ ನೀಡಿದ್ದು, ನಿರ್ಮಾಣ ಕಾರ್ಯಕ್ಕೆ ಅಗತ್ಯ ಸಾಮಗ್ರಿಗಳನ್ನು ಉಚಿತವಾಗಿ ಒದಗಿಸುವುದಾಗಿ ತಿಳಿಸಿದರು. ಭವನ ನಿರ್ಮಾಣ ಯಶಸ್ವಿಯಾಗಲು ಎಲ್ಲರೂ ಸಹಕರಿಸಬೇಕು ಎಂದು ಕರೆ ನೀಡಿದರು.
ಭವನವು ಮುಂದಿನ ದಿನಗಳಲ್ಲಿ ಸಮುದಾಯದ ಸಭೆ-ಸಮಾರಂಭಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ಅನುಕೂಲವಾಗಲಿದೆ.
ಕಾರ್ಯಕ್ರಮದಲ್ಲಿ ಪಿ.ಎನ್.ಕೆ. ಕೃಷ್ಣಮೂರ್ತಿ, ಶಾಸಕ ಸುರೇಶ್ ಗೌಡ, ಯಲಚವಾಡಿ ನಾಗರಾಜು, ಒಕ್ಕಲಿಗ ಹನುಮಂತರಾಯಪ್ಪ, ಪ್ರಸನ್ನ ಕುಮಾರ್, ಕಾಮರಾಜು, ವಿ.ಎನ್. ರಂಗರಸಯ್ಯ, ಎಲ್.ವಿ. ಪ್ರಕಾಶ್ ಸೇರಿದಂತೆ ಹಲವು ಮುಖಂಡರು ಹಾಗೂ ಸಮುದಾಯದವರು ಭಾಗವಹಿಸಿದ್ದರು.
– ನರಸಿಂಹಯ್ಯ ಹೊಸಕೋಟೆ.
