ಶ್ಲೋಕ – 40
ನ ತದಸ್ತಿ ಪೃಥಿವ್ಯಾಂ ವಾ ದಿವಿ ದೇವೇಷು ವಾ ಪುನಃ ।
ಸತ್ತ್ವಂ ಪ್ರಕೃತಿಜೈರ್ಮುಕ್ತಂ ಯದೇಭಿಃ ಸ್ಯಾತ್ ತ್ರಿಭಿರ್ಗುಣೈಃ ॥೪೦॥
ನ ತತ್ ಅಸ್ತಿ ಪೃಥಿವ್ಯಾಂ ವಾ ದಿವಿ ದೇವೇಷು ವಾ ಪುನಃ ।
ಸತ್ತ್ವಂ ಪ್ರಕೃತಿಜೈಃ ಮುಕ್ತಂ ಯತ್ ಏಭಿಃ ಸ್ಯಾತ್ ತ್ರಿಭಿಃ ಗುಣೈಃ –– ಭೂಮಿಯಲ್ಲಾಗಲಿ, ಸ್ವರ್ಗದಲ್ಲಿನ ದೇವತೆಗಳಲ್ಲಾಗಲಿ, ಪ್ರಕೃತಿಯಿಂದುಟಾದ ಈ ಮೂರು ಗುಣಗಳಿಂದ ಬಿಡುಗಡೆಗೊಂಡ ಜೀವಜಾತವೆಂಬುದಿಲ್ಲ.
ತ್ರೈಗುಣ್ಯದ ಬಗ್ಗೆ ವಿವರವಾದ ಚಿತ್ರಣವನ್ನು ಕೊಟ್ಟ ನಂತರ ಕೃಷ್ಣ ಜೀವ ಸ್ವಭಾವದ ವಿವರಣೆಯನ್ನು ಕೊಡುತ್ತಾನೆ. ಈ ಭೂಮಿಯಲ್ಲಾಗಲಿ, ಅಥವಾ ಸತ್ಯಲೋಕದ ತನಕ ಯಾವುದೇ ದೇವತಾ ಲೋಕವಿರಲಿ, ಸಮಸ್ತ ಜೀವಜಾತಗಳು ಈ ಪ್ರಕೃತಿಯಿಂದ ನಿರ್ಮಿತವಾದ ತ್ರಿಗುಣಗಳ ಅಧೀನ. ಪ್ರತಿಯೊಂದು ಜೀವವೂ ಕೂಡ ಈ ಮೂರು ಸ್ವಭಾವಕ್ಕೆ ಒಳಪಟ್ಟಿದೆ ಮತ್ತು ಪ್ರತಿಯೊಂದು ಜೀವ ಈ ಮೂರು ಗುಣಗಳ ಕಲಬೆರಕೆ. ನೂರಕ್ಕೆ ನೂರು ಸಾತ್ವಿಕ/ರಾಜಸ/ತಾಮಸ ಯಾರೂ ಇಲ್ಲ. ಇಡೀ ಜಗತ್ತು ಮೂರರ ಮಿಶ್ರಣ.
ಜೀವ ಸ್ವಭಾವವನ್ನು ನೇರವಾಗಿ ಸಾತ್ವಿಕ-ರಾಜಸ-ತಾಮಸ ಎಂದು ಮೂರು ವಿಭಾಗ ಮಾಡಲು ಬರುವುದಿಲ್ಲ. ಇದಕ್ಕಾಗಿ ಇದನ್ನು ಚಾತುರ್ವರ್ಣ್ಯವಾಗಿ ಕೃಷ್ಣ ವಿಗಡಿಸಿ ಹೇಳಿದ. ಹಿಂದೆ ವಿವರಿಸಿದಂತೆ ಚಾತುರ್ವರ್ಣ್ಯ ‘ಜಾತಿವಿಭಾಗ’ ಅಲ್ಲ. ಇದು ವರ್ಣ ವಿಭಾಗ. ಭಗವದ್ಗೀತೆಯಾಗಲಿ , ವೇದವಾಗಲಿ ಜಾತಿ ವಿಭಾಗವನ್ನು ಒತ್ತುಕೊಟ್ಟು ಹೇಳುವುದಿಲ್ಲ. ಜಾತಿವಿಭಾಗ ಕೆಲವು ಧರ್ಮ ಶಾಸ್ತ್ರಗಳಲ್ಲಿ ಬಂದಿದೆ ಹೊರತು ವೇದ ಮತ್ತು ಭಗವದ್ಗೀತೆಯಲ್ಲಿ ಬಂದಿಲ್ಲ. ಜಾತಿ ಅನ್ನುವುದು ಸಮಾಜ ವ್ಯವಸ್ಥೆಗಾಗಿ ಮಾಡಿಕೊಂಡ ವಿಭಾಗ. ಆದರೆ ವರ್ಣ ಮನಃಶಾಸ್ತ್ರೀಯವಾಗಿ ಜೀವಸ್ವಭಾವವನ್ನು ಅರಿತು ಹೇಳುವಂತಾದ್ದು.
ಸ್ಥೂಲವಾಗಿ ಹೇಳಬೇಕೆಂದರೆ ದೇವತೆಗಳು-ಸಾತ್ವಿಕರು, ಮಾನವರು-ರಾಜಸರು ಮತ್ತು ದೈತ್ಯರು-ತಾಮಸರು. ಆದರೆ ಈ ವಿಭಾಗ ಇಲ್ಲಿಗೆ ಕೊನೆಗೊಳ್ಳುವುದಿಲ್ಲ. ಈ ಪ್ರತಿಯೊಂದು ವರ್ಗದಲ್ಲಿ ಮತ್ತೆ ಮೂರು ವಿಭಾಗವಿದೆ. ಉದಾಹರಣೆಗೆ ತಾಮಸ-ಸಾತ್ವಿಕರು. ಮನುಷ್ಯರಲ್ಲಿ ನರಾಧಮರು ತಾಮಸ-ಸಾತ್ವಿಕರು. ದೈತ್ಯ ಪರಿವಾರದವರು ತಾಮಸ-ರಾಜಸರು; ಅವರನ್ನು ನಿಯಂತ್ರಿಸುವ ಕಾಲನೇಮಿಯಂತಹ ದೈತ್ಯರು ತಾಮಸ-ತಾಮಸರು.
ಮಾನವರಲ್ಲಿ ರಾಜಸ-ತಾಮಸರು ನರಾಧಮರು. ರಾಜಸ-ರಾಜಸರು ಎಂದರೆ ನಿತ್ಯ ಸಂಸಾರಿಗಳು. ಅವರು ಎಂದೂ ತಮಸ್ಸಿಗಾಗಲಿ, ಮೋಕ್ಷಕ್ಕಾಗಲಿ ಹೋಗುವುದಿಲ್ಲ. ಸದಾ ಈ ಸಂಸಾರ ಚಕ್ರದಲ್ಲಿ ಸುತ್ತುತ್ತಿರುತ್ತಾರೆ. ಇನ್ನು ಮೂರನೆಯವರಾದ ರಾಜಸ-ಸಾತ್ವಿಕರು ಮೋಕ್ಷ ಯೋಗ್ಯರು. ಚಾತುರ್ವರ್ಣ್ಯ ಎನ್ನುವುದು ಈ ಮೂರನೆ ಗುಂಪಿಗೆ ಮಾತ್ರ ಸೀಮಿತವಾದದ್ದು. ಆದ್ದರಿಂದ ಮೋಕ್ಷ ಯೋಗ್ಯರಾದ ರಾಜಸ-ಸಾತ್ವಿಕರಲ್ಲಿ ನಾಲ್ಕು ವಿಧ. ಮೋಕ್ಷಯೋಗ್ಯ-ಬ್ರಾಹ್ಮಣ, ಮೋಕ್ಷಯೋಗ್ಯ- ಕ್ಷತ್ರಿಯ, ಮೋಕ್ಷಯೋಗ್ಯ-ವೈಶ್ಯ, ಮತ್ತು ಮೋಕ್ಷಯೋಗ್ಯ-ಶೂದ್ರ. ಇದು ಜೀವ ಸ್ವಭಾವದ ಮೇಲೆ ಇರುವ ನಾಲ್ಕು ವಿಭಾಗ. ಇಲ್ಲಿ ಮೇಲು-ಕೀಳು ಎನ್ನುವ ಭೇದವಿಲ್ಲ. ಎಲ್ಲರೂ ಮೋಕ್ಷ ಯೋಗ್ಯರು. ಸತ್ವ ರಜಸ್ಸು ಮತ್ತು ತಮಸ್ಸಿನ ಅನುಪಾತದಂತೆ ಮತ್ತೆ ಅನೇಕ ವಿಧವನ್ನು ಚಾತುರ್ವರ್ಣ್ಯದೊಳಗೆ ಕಾಣಬಹುದು.
(೧)ಪರಮಹಂಸರು(೯೦-ಅಂಶ ಸಾತ್ವಿಕ): ಇವರು ತಮ್ಮನ್ನು ತಾವು ಪೂರ್ಣವಾಗಿ ಭಗವಂತನಲ್ಲಿ ನೆಲೆಗೊಳಿಸಿಕೊಂಡವರು. ಇವರಲ್ಲಿ ರಾಜಸ ಮತ್ತು ತಾಮಸದ ಅಂಶ ಕೇವಲ ೧೦.
(೨)ಹಂಸರು(೮೫-ಅಂಶ ಸಾತ್ವಿಕ): ಹಂಸರು ಪರಮಹಂಸರ ನಂತರದವರು. ಇವರಲ್ಲಿ ರಾಜಸ ಮತ್ತು ತಾಮಸದ ಪ್ರಮಾಣ ೧೫-ಅಂಶ.
(೩)ಬಹೂದಕರು(೮೦-ಅಂಶ ಸಾತ್ವಿಕ): ಇವರಿಗೆ ಒಂದು ಸ್ಥಿರವಾದ ನೆಲೆ ಇಲ್ಲ. ದಿನಕ್ಕೊಂದು ಕಡೆ ಇವರ ವಾಸ. ಇವರಲ್ಲಿ ಸಾತ್ವಿಕ ಅಂಶ ೮೦ ಮತ್ತು ರಾಜಸ-ತಾಮಸ ಅಂಶ-೨೦
(೪)ಕುಟೀಚಕರು(೭೫-ಅಂಶ ಸಾತ್ವಿಕ): ಇವರು ಬಹೂದಕರಂತೆ. ಆದರೆ ಇವರು ಒಂದು ಕಡೆ ಒಂದು ಮನೆಯಲ್ಲಿ ವಾಸಿಸುವವರು. ಇವರಲ್ಲಿ ರಾಜಸ ಮತ್ತು ತಾಮಸದ ಅಂಶ-೨೫.
(೫)ವಾನಪ್ರಸ್ಥರು(೭೦-ಅಂಶ ಸಾತ್ವಿಕ): ಮನೆಯಲ್ಲಿ ಗೃಹಸ್ಥರಾಗಿದ್ದು, ನಂತರ ತಮ್ಮ ಮಕ್ಕಳು ಪ್ರಾಯಪ್ರಬುದ್ಧರಾದ ಮೇಲೆ ಕಾಡಿಗೆ ಹೋಗಿ ಸಾಧನೆ ಮಾಡುವವರು. ಇವರಲ್ಲಿ ೩೦ ಅಂಶ ರಾಜಸ-ತಾಮಸವಿದ್ದರೆ ಉಳಿದ ೭೦-ಅಂಶ ಸಾತ್ವಿಕ. ಇವರಿಗೆ ಅಗ್ನಿ ಕರ್ಮವಿದೆ, ಸ್ತ್ರೀ-ಸಂಗವಿಲ್ಲ.
(೬)ಬ್ರಹ್ಮಚಾರಿಗಳು(೬೫-ಅಂಶ ಸಾತ್ವಿಕ): ಇವರಲ್ಲಿ ಶೇಕಡಾ ೩೫ ಅಂಶ ರಾಜಸ ಮತ್ತು ತಾಮಸ. ಇವರಿಗೆ ಸ್ತ್ರೀ-ಸಂಗ ನಿಷಿದ್ಧ.
(೭)ಗೃಹಸ್ಥರು : ಇವರಲ್ಲಿ ಸಾತ್ವಿಕ ಅಂಶ ೬೦, ಉಳಿದ ೪೦- ರಾಜಸ ಮತ್ತು-ತಾಮಸ ಅಂಶ. ಇವರು ಸಾಂಸಾರಿಕ ಜೀವನ ನೆಡೆಸಬಹುದು. ಈ ಮೇಲಿನ ೭ ವಿಧ ಬ್ರಾಹ್ಮಣ ವರ್ಗಕ್ಕೆ ಸಂಬಂಧಪಟ್ಟಿದ್ದು. ಒಟ್ಟಿನಲ್ಲಿ ಹೇಳಬೇಕೆಂದರೆ ಕನಿಷ್ಠ ೬೦-ಪ್ರಮಾಣ ಸಾತ್ವಿಕ-ಅಂಶ ಇರುವ ಮೋಕ್ಷಯೋಗ್ಯ ಮಾನವ ಬ್ರಾಹ್ಮಣ ಎನಿಸುತ್ತಾನೆ.
(೮)ಕ್ಷತ್ರಿಯರು(೫೫:೩೫:೧೦): ಇವರಲ್ಲಿ ಸಾತ್ವಿಕ ಅಂಶ-೫೫ ಮತ್ತು ರಾಜಸ ಅಂಶ ೩೫. ಇವರಿಗೆ ಆಡಳಿತದಲ್ಲಿ ಆಸಕ್ತಿ. ತಮ್ಮ ತೋಳ್ಬಲದಿಂದ ಸಮಾಜದ ರಕ್ಷಣೆ ಮಾಡುವುದು ಇವರ ಕರ್ತವ್ಯ.
(೯)ವೈಶ್ಯರು (೪೦:೪೦:೨೦): ಇವರಲ್ಲಿ ಸಾತ್ವಿಕ ಮತ್ತು ರಾಜಸ ಅಂಶ ಸಮನಾಗಿದೆ(೪೦). ಇವರಿಗೆ ಕೃಷಿ, ಹೈನುಗಾರಿಕೆ, ವ್ಯಾಪಾರದಲ್ಲಿ ಆಸಕ್ತಿ.
(೧೦)ಶೂದ್ರರು(೩೫:೩೫:೩೦): ಇವರು ಇಡೀ ಸಮಾಜದ ಅಡಿಪಾಯ. ಇವರು ಸೇವಾ ಮನೋವೃತ್ತಿ ಇರುವವರು.
ಹೀಗೆ ಸ್ವರೂಪ ಸ್ವಭಾವದಂತೆ ವರ್ಣ ವಿಂಗಡಣೆ. ಇಲ್ಲಿ ಹೇಳಿದ ಎಲ್ಲ ಪ್ರಮುಖ ೪ ವರ್ಣದವರು ಮೋಕ್ಷ ಯೋಗ್ಯರು.
ಇವರಲ್ಲಿ ಮೇಲು ಕೀಳು ಎನ್ನುವುದಿಲ್ಲ. ಇದು ಕೇವಲ ಭಾರತಕ್ಕೆ ಮೀಸಲಾದ ವಿಂಗಡಣೆ ಅಲ್ಲ. ಈ ರೀತಿಯ ಸ್ವಭಾವ ವಿಂಗಡಣೆ ಪ್ರಪಂಚದ ಎಲ್ಲ ಮೂಲೆಗೂ ಅನ್ವಯ. ಭಾರತದ ತತ್ವಶಾಸ್ತ್ರ ಇದನ್ನು ಗುರುತಿಸಿ ನಮಗೆ ನೀಡಿದೆ ಅಷ್ಟೆ. ಇದನ್ನು ಅರ್ಥ ಮಾಡಿಕೊಳ್ಳಲು ಒಂದು ಉದಾಹರಣೆಯನ್ನು ನೋಡುವುದಾದರೆ: ಒಂದು ಮನೆಯಲ್ಲಿ ನಾಲ್ಕು ಜನ ಅಣ್ಣ-ತಮ್ಮಂದಿರರಿದ್ದಾರೆ. ಅವರಲ್ಲಿ ಹಿರಿಯ ಮಗ ಎಲ್ಲ ಮನೆಮಂದಿಗೆ ಪಾಠ-ಪ್ರವಚನ ಮಾಡಿಕೊಂಡು, ವೇದಾಧ್ಯಯನ ಮಾಡಿಕೊಂಡಿದ್ದರೆ-ಆತ ಬ್ರಾಹ್ಮಣ ವರ್ಣ. ಎರಡನೆಯವ ಮನೆಯ ಯಜಮಾನಿಕೆ ನೋಡಿಕೊಂಡರೆ ಆತ-ಕ್ಷತ್ರಿಯ. ಮೂರನೆಯವ ತೋಟ, ಬೇಸಾಯ ಇತ್ಯಾದಿಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರೆ ಆತ-ವೈಶ್ಯ. ನಾಲ್ಕನೆಯವ ತನ್ನ ಅಣ್ಣಂದಿರರಿಗೆ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದರೆ ಆತ-ಶೂದ್ರ. ಇದು ಮನಃಶಾಸ್ತ್ರೀಯವಾದ ವರ್ಣ ಪದ್ಧತಿ. ಬ್ರಹ್ಮ-ಅಣತಿ ಬ್ರಾಹ್ಮಣಃ. ದೊಡ್ದದ್ದನ್ನು ತಿಳಿಯುವವನು, ಜ್ಞಾನ ಸಾಧಕ-ಬ್ರಾಹ್ಮಣ. ಕ್ಷತ್ರ-ತ್ರಾಣಃ –ಕ್ಷತ್ರಿಯಃ. ಯಾರಿಗಾದರೂ ಅಪಾಯವಾದಾಗ ರಕ್ಷಣೆಗೆ ಮುನ್ನುಗ್ಗುವವ ಕ್ಷತ್ರಿಯ. ವಿಶ್ ಎಂದರೆ ಸಮಾಜ. ಸಮಾಜಕ್ಕೆ ಬೇಕಾದ ಆಹಾರ ಸಲಕರಣೆ ಪೂರೈಸುವವ ವೈಶ್ಯ. ನಾನಾ ಜನಸ್ಯ ಶುಶ್ರೂಷಃ-ಶೂದ್ರಃ. ಮನುಷ್ಯನ ಮೂಲಭೂತ ಧರ್ಮವಾದ ‘ಸೇವೆ’ಯಲ್ಲಿ ನಿರತನಾದವನು ಶೂದ್ರ. ಕೃಷ್ಣ ಈ ಕುರಿತು ಕೊಡುವ ಅಪೂರ್ವ ವಿಶ್ಲೇಷಣೆಯನ್ನು ಮುಂದಿನ ಶ್ಲೋಕಗಳಲ್ಲಿ ನೋಡೋಣ.
