ಗದಗ: ರಾಜ್ಯ ಸರ್ಕಾರದ ಯುವನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆ ಪಡೆಯುತ್ತಿರುವ ಫಲಾನುಭವಿಗಳು ಮೊದಲ ಕಂತಿನ ಹಣ ಪಾವತಿಯಾದ ನಂತರ ಪ್ರತಿ ತಿಂಗಳ 25ರೊಳಗಾಗಿ ಸೇವಾ ಒನ್ ಪೋರ್ಟಲ್ನಲ್ಲಿ ಕಡ್ಡಾಯವಾಗಿ ಸ್ವಯಂ ಘೋಷಣೆ ಸಲ್ಲಿಸಬೇಕು. ಘೋಷಣೆ ಸಲ್ಲಿಸಿದ ಬಳಿಕ ಅದರ ಸ್ವೀಕೃತಿಯನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2023, 2024, 2025 ಹಾಗೂ 2026ನೇ ಸಾಲಿನಲ್ಲಿ ಯಾವುದೇ ವೃತ್ತಿಪರ ಕೋರ್ಸ್, ಪದವಿ, ಡಿಪ್ಲೊಮಾ ಅಥವಾ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿ, ಸರ್ಕಾರಿ ಅಥವಾ ಖಾಸಗಿ ಉದ್ಯೋಗ ಹೊಂದಿರದ, ಸ್ವಯಂ ಉದ್ಯೋಗದಲ್ಲಿ ತೊಡಗಿರದ ಹಾಗೂ ಉನ್ನತ ವ್ಯಾಸಂಗ ಮುಂದುವರಿಸದ ನಿರುದ್ಯೋಗಿಗಳು ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಅರ್ಜಿದಾರರು ಕನಿಷ್ಠ ಆರು ವರ್ಷ ಕರ್ನಾಟಕದಲ್ಲಿ ವಾಸವಿರಬೇಕು ಹಾಗೂ ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆ ಹೊಂದಿರಬೇಕು.
ಅರ್ಹ ಪದವೀಧರರಿಗೆ ಫಲಿತಾಂಶ ಪ್ರಕಟವಾದ 180 ದಿನಗಳ ನಂತರ ಪ್ರತಿ ತಿಂಗಳು ₹3,000 ಹಾಗೂ ಡಿಪ್ಲೊಮಾ ಪೂರ್ಣಗೊಳಿಸಿದವರಿಗೆ ₹1,500 ನಿರುದ್ಯೋಗ ಭತ್ಯೆಯನ್ನು ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಪಾವತಿಸಲಾಗುತ್ತದೆ.
### 9,466 ಫಲಾನುಭವಿಗಳಿಗೆ ₹29.48 ಕೋಟಿ ಪಾವತಿ
ಗದಗ ಜಿಲ್ಲೆಯಲ್ಲಿ 2023ರ ಡಿಸೆಂಬರ್ 26ರಿಂದ 2026ರ ನವೆಂಬರ್ 23ರವರೆಗೆ ಒಟ್ಟು 10,441 ಅರ್ಜಿಗಳು ಸ್ವೀಕೃತವಾಗಿವೆ. 2026ರ ಅಕ್ಟೋಬರ್ ಅಂತ್ಯದವರೆಗೆ 9,466 ಫಲಾನುಭವಿಗಳಿಗೆ ಡಿಬಿಟಿ ಮೂಲಕ ಒಟ್ಟು ₹29,48,53,500 ಮೊತ್ತವನ್ನು ಪಾವತಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಯೋಜನೆಗೆ ಅರ್ಜಿ ಸಲ್ಲಿಸಿರುವವರು ಸೇವಾ ಒನ್ ಪೋರ್ಟಲ್ನಲ್ಲಿ ತಮ್ಮ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಿಕೊಳ್ಳಬೇಕು. ರಹವಾಸಿ ಪರಿಶೀಲನೆ ಬಾಕಿ ಇರುವವರು ಅಗತ್ಯ ಮೂಲ ದಾಖಲೆಗಳೊಂದಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಹತ್ತಿರದ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳ ಮೂಲಕ ಸೇವಾ ಒನ್ ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಬಹುದು. ಉದ್ಯೋಗಾವಕಾಶಗಳ ಮಾಹಿತಿ ಪಡೆಯಲು ಕರ್ನಾಟಕ ಸರ್ಕಾರದ ಯುವ ಉದ್ಯೋಗ ಸೇತು ಪೋರ್ಟಲ್ನಲ್ಲಿ ನೋಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಡಳಿತ ಭವನದ ಎರಡನೇ ಮಹಡಿಯ ಕೊಠಡಿ ಸಂಖ್ಯೆ 215ರಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಅಥವಾ 08372-220609 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ತಿಳಿಸಿದ್ದಾರೆ.
