ರಾಮನಾಥಪುರ, ನ. 24: ಇಲ್ಲಿನ ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಡಿಸೆಂಬರ್ 15ರಂದು ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಅಭಿಜಿತ್ ಮುಹೂರ್ತದಲ್ಲಿ ಮಹಾ ರಥೋತ್ಸವ ನಡೆಯಲಿದೆ ಎಂದು ದೇವಾಲಯದ ವ್ಯವಸ್ಥಾಪಕ ವೇಣುಗೋಪಾಲ್ ಆಚಾರ್ಯ ತಿಳಿಸಿದರು.
ದೇವಾಲಯದಲ್ಲಿ ಮಹಾಪೂಜೆ ನೆರವೇರಿದ ಬಳಿಕ ಪೂಜೆಯಲ್ಲಿ ಭಾಗವಹಿಸಿದ್ದ ಭಕ್ತರಿಗೆ ರಥೋತ್ಸವದ ಆಹ್ವಾನ ಪತ್ರಿಕೆ ವಿತರಿಸಿ ಮಾತನಾಡಿದ ಅವರು, ಡಿಸೆಂಬರ್ 5ರಿಂದ 8ರವರೆಗೆ ಲಕ್ಷ ದೀಪೋತ್ಸವ ನಡೆಯಲಿದೆ. ಡಿ. 8ರಿಂದ 19ರವರೆಗೆ 12 ದಿನಗಳ ಕಾಲ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಹಾಗೂ ಉತ್ಸವಗಳು ಜರುಗಲಿವೆ ಎಂದು ಹೇಳಿದರು.
ಡಿ. 8ರಂದು ಯಾಗಶಾಲಾ ಪ್ರವೇಶ, ಸ್ವಸ್ತಿವಾಚನ ಪೂರ್ವಕ ಅಂಕುರಾರ್ಪಣೆ ಸೇರಿದಂತೆ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿವೆ. ಡಿ. 9ರಂದು ಹಗಲು ಬೆಳ್ಳಿ ರಥೋತ್ಸವ ಹಾಗೂ ರಾತ್ರಿ ಮಯೂರ ವಾಹನೋತ್ಸವ, ಡಿ. 10ರಂದು ಹಗಲು ಬೆಳ್ಳಿ ರಥೋತ್ಸವ ಹಾಗೂ ರಾತ್ರಿ ಹಂಸ ವಾಹನೋತ್ಸವ, ಡಿ. 11ರಂದು ಹಗಲು ಬೆಳ್ಳಿ ರಥೋತ್ಸವ ಹಾಗೂ ರಾತ್ರಿ ಅಶ್ವ ವಾಹನೋತ್ಸವ, ಡಿ. 12ರಂದು ಹಗಲು ಬೆಳ್ಳಿ ರಥೋತ್ಸವ ಹಾಗೂ ರಾತ್ರಿ ಶೇಷ ವಾಹನೋತ್ಸವ ನಡೆಯಲಿವೆ.
ಡಿ. 13ರಂದು ಹಗಲು ಬೆಳ್ಳಿ ರಥೋತ್ಸವ ಹಾಗೂ ರಾತ್ರಿ ಗಜವಾಹನೋತ್ಸವ, ಡಿ. 14ರಂದು ಗಜನೋತ್ಸವ ಪೂರ್ವಕ ತೈಲಾಭ್ಯಂಜನ ಸೇವೆ, ಪಂಚಮಿ ಉತ್ಸವ, ಬೆಳ್ಳಿ ರಥೋತ್ಸವ ಹಾಗೂ ರಾತ್ರಿ ಬೆಳ್ಳಿ ಪಲ್ಲಕ್ಕಿ ಉತ್ಸವ ಜರುಗಲಿದೆ.
ಡಿ. 15ರಂದು ಮಂಗಳವಾರ ಮಾರ್ಗಶಿರ ಶುದ್ಧ ಷಷ್ಠಿಯಂದು ಮಧ್ಯಾಹ್ನ 12 ಗಂಟೆಗೆ ಅಭಿಜಿತ್ ಮುಹೂರ್ತದಲ್ಲಿ ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ಮಹಾ ರಥೋತ್ಸವ ವಿಜೃಂಭಣೆಯಿಂದ ನಡೆಯಲಿದೆ. ಅಂದು ರಾತ್ರಿ ಬೆಳ್ಳಿ ರಥ, ಶಾಂತೋತ್ಸವ ಹಾಗೂ ಪುಷ್ಪಾಂದೋಳಿಕೋತ್ಸವ ಸೇರಿದಂತೆ ವಿವಿಧ ಉತ್ಸವಗಳು ಜರುಗಲಿವೆ.
ಡಿ. 16ರಂದು ಬೆಳಗ್ಗೆ ತೈಲಾಭ್ಯಂಜನ ಸ್ನಾನ ಹಾಗೂ ರಾತ್ರಿ ವಾಹನೋತ್ಸವ, ಡಿ. 17ರಂದು ಬೆಳಗ್ಗೆ ಅವಭೃತೋತ್ಸವ ಸ್ನಾನ ಹಾಗೂ ರಾತ್ರಿ ತೆಪ್ಪೋತ್ಸವ, ಡಿ. 18ರಂದು ರಾತ್ರಿ ತೆಪ್ಪೋತ್ಸವ ಮತ್ತು ಡಿ. 19ರಂದು ತೆಪ್ಪೋತ್ಸವ ಹಾಗೂ ದವನ ಮಂಟಪೋತ್ಸವ ನಡೆಯಲಿವೆ.
ದೇವಾಲಯದಲ್ಲಿ ನಡೆಯುವ ವಿವಿಧ ಸೇವೆಗಳು ಹಾಗೂ ಮಹಾ ರಥೋತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಉತ್ಸವಗಳನ್ನು ಯಶಸ್ವಿಗೊಳಿಸಬೇಕೆಂದು ವ್ಯವಸ್ಥಾಪಕ ವೇಣುಗೋಪಾಲ್ ಆಚಾರ್ಯ ಮನವಿ ಮಾಡಿದರು.
ಈ ಸಂದರ್ಭದಲ್ಲಿ ದೇವಾಲಯದ ಅರ್ಚಕರಾದ ವೇ. ಸೋಮಶೇಖರ್, ವೇ. ಶ್ರೀನಾಥ್, ಶಿರದನಹಳ್ಳಿ ಶ್ರೀ ಶನೇಶ್ವರಸ್ವಾಮಿ ದೇವಾಲಯದ ವ್ಯವಸ್ಥಾಪಕ ನಾಗರಾಜಸ್ವಾಮಿ, ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳ ಭಕ್ತ ಯುವ ಘಟಕದ ಅಧ್ಯಕ್ಷ ಆರ್.ಕೆ. ಶ್ರೀನಿವಾಸ್, ಲೋಕೇಶ್, ಮಂಜು, ನಾಗೇಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.
