ಬೆಂಗಳೂರು: ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ (ರಿ.) ವತಿಯಿಂದ ಡಿಸೆಂಬರ್ 27, 2026ರ ಭಾನುವಾರ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ರಾಜ್ಯಮಟ್ಟದ 8ನೇ ಮಹಿಳಾ ಸಾಹಿತ್ಯ ಮತ್ತು ಸಂಸ್ಕೃತಿ ಸಮ್ಮೇಳನ ಆಯೋಜಿಸಲಾಗಿದೆ.
ಸಮ್ಮೇಳನದ ಅಧ್ಯಕ್ಷರಾಗಿ ಖ್ಯಾತ ಶಿಕ್ಷಣ ತಜ್ಞೆ, ಪ್ರಗತಿಪರ ಲೇಖಕಿ, ಮಹಿಳಾ ಪರ ಹೋರಾಟಗಾರ್ತಿ, ರಂಗಕರ್ಮಿ, ಜಿ.ಆರ್. ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕಿ ಹಾಗೂ ನ್ಯಾಷನಲ್ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಡಾ. ಗೀತಾ ರಾಮಾನುಜಂ ಅವರನ್ನು ಆಯ್ಕೆ ಮಾಡಲಾಗಿದೆ.
ಸಮ್ಮೇಳನದ ಅಂಗವಾಗಿ 12 ಮಂದಿ ಕವಿಗಳಿಂದ ಕವಿಗೋಷ್ಠಿ, ವಿಚಾರ ಸಂಕಿರಣ, ಗುಂಪು ನೃತ್ಯ ಪ್ರದರ್ಶನ ಹಾಗೂ ಗುಂಪು ಗೀತಗಾಯನ ಸೇರಿದಂತೆ ವಿವಿಧ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಇದೇ ಸಂದರ್ಭದಲ್ಲಿ ಸಾಹಿತ್ಯ, ಸಂಸ್ಕೃತಿ ಹಾಗೂ ಸಮಾಜಸೇವಾ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಗುರುತಿಸಿ ವಿವಿಧ ಪ್ರಶಸ್ತಿ ಮತ್ತು ದತ್ತಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಲೋಹಿಯಾ ಪ್ರಶಸ್ತಿ, ಲಯನ್ ವೆಂಕಟಸುಬ್ಬಯ್ಯ ಪ್ರಶಸ್ತಿ, ಡಾ. ಕೆ.ಪಿ. ಶೈಲಜಾ ಪ್ರಶಸ್ತಿ, ದೊಡ್ಡಬಳ್ಳಾಪುರ ಎನ್. ರೇಣುಕಾ–ನಾಗಪ್ರಿಯ ದತ್ತಿ ಪ್ರಶಸ್ತಿ, ಡಾ. ಕೆ. ರಮಾನಂದ ಕಾದಂಬರಿ ದತ್ತಿ ಪ್ರಶಸ್ತಿ ಹಾಗೂ ಮಂಡ್ಯದ ಬಿ.ಆರ್. ಉಮಾ ಮತ್ತು ಮಲ್ಲೇಶ್ವರಂನ ಲೀಲಾ ವಾಸುದೇವ್ ಮಹಿಳಾ ಸಾಹಿತ್ಯ ಮತ್ತು ಸಂಸ್ಕೃತಿ ಸೇವಾ ಪ್ರಶಸ್ತಿಗಳನ್ನು ಒಳಗೊಂಡಂತೆ ಒಟ್ಟು 12 ಮಂದಿಗೆ ಪ್ರಶಸ್ತಿ ನೀಡಲು ಉದ್ದೇಶಿಸಲಾಗಿದೆ.
ಅಲ್ಲದೆ, 2025ನೇ ಸಾಲಿನ ಪುಸ್ತಕ ಬಹುಮಾನಕ್ಕಾಗಿ ಕಥೆ, ಕವನ, ಕಾದಂಬರಿ, ಜಾನಪದ ಮತ್ತು ಪ್ರಬಂಧ ಪ್ರಕಾರಗಳಲ್ಲಿ ತಲಾ ಎರಡು ಪುಸ್ತಕಗಳಂತೆ ಕೃತಿಗಳನ್ನು ಆಹ್ವಾನಿಸಲಾಗಿದೆ. ಈ ವಿಭಾಗದಲ್ಲಿ ಒಟ್ಟು 10 ಮಂದಿಗೆ ಪುಸ್ತಕ ಬಹುಮಾನ ನೀಡಲಾಗುವುದು.
ಸಾಹಿತ್ಯ, ಶಿಕ್ಷಣ, ಕಲೆ, ಸಂಸ್ಕೃತಿ ಹಾಗೂ ಸಮಾಜಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಿಜವಾದ ಸಾಧನೆ ಮಾಡಿರುವ ಅರ್ಹ ಸಾಧಕರ ಹೆಸರುಗಳನ್ನು ಅವರ ಭಾವಚಿತ್ರ ಮತ್ತು ಕಿರು ಪರಿಚಯದೊಂದಿಗೆ ಶಿಫಾರಸು ಮಾಡುವಂತೆ ಟ್ರಸ್ಟ್ ಮನವಿ ಮಾಡಿದೆ.
ಶಿಫಾರಸು ಹಾಗೂ ಪುಸ್ತಕಗಳನ್ನು ಕಳುಹಿಸಲು ನವೆಂಬರ್ 30, 2026 ಕೊನೆಯ ದಿನಾಂಕವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಡಾ. ಎಸ್. ರಾಮಲಿಂಗೇಶ್ವರ (ಸಿಸಿರಾ), ಕನ್ನಡ ಉಪನ್ಯಾಸಕರು, ಶೇಷಾದ್ರಿಪುರಂ ಮೈನ್ ಪಿಯು ಕಾಲೇಜು, ಬೆಂಗಳೂರು–560020 ಅವರನ್ನು ಸಂಪರ್ಕಿಸಬಹುದು. ವಾಟ್ಸ್ಆ್ಯಪ್ ಸಂಖ್ಯೆ: 9448880985.
