ಕೊರಟಗೆರೆ: ಗ್ರಾಮೀಣ ಭಾಗದ ಮಹಿಳೆಯರಿಗೆ ಸ್ಥಳೀಯವಾಗಿಯೇ ಉದ್ಯೋಗಾವಕಾಶ ಕಲ್ಪಿಸಿ, ಆರ್ಥಿಕ ಸ್ವಾವಲಂಬನೆಗೆ ಉತ್ತೇಜನ ನೀಡುವ ಉದ್ದೇಶದಿಂದ ತಾಲ್ಲೂಕಿನ ಗೌರಗಾನಹಳ್ಳಿ ಕ್ರಾಸ್ನಲ್ಲಿ ನೂತನವಾಗಿ ಆರ್ಎ ಫ್ಯಾಶನ್ ಗಾರ್ಮೆಂಟ್ಸ್ ಘಟಕ ಸ್ಥಾಪಿಸಲು ಸಿದ್ಧತೆ ಕೈಗೊಳ್ಳಲಾಗಿದೆ.
ಡಾ. ಜಿ. ಪರಮೇಶ್ವರ್ ಅವರ ಆಶೀರ್ವಾದದೊಂದಿಗೆ ಪಣ್ಣೇನಹಳ್ಳಿಯ ಸಹೋದರರಾದ ಗಂಗರಾಜು ಪಿ.ಸಿ., ಅರುಣ್ ಕುಮಾರ್ ಹಾಗೂ ಶಿವು ಅವರು ಜಂಟಿಯಾಗಿ ಈ ಉದ್ಯಮ ಆರಂಭಿಸಲು ಮುಂದಾಗಿದ್ದಾರೆ. ಘಟಕದ ನಿರ್ಮಾಣ ಕಾರ್ಯಕ್ಕೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಯೋಜನೆಗೆ ಚಾಲನೆ ನೀಡಲಾಗಿದೆ.

2027ರ ಮಾರ್ಚ್ ತಿಂಗಳಲ್ಲಿ ಘಟಕವನ್ನು ಕಾರ್ಯಾರಂಭಗೊಳಿಸುವ ಗುರಿ ಹೊಂದಿದ್ದು, ಕಟ್ಟಡ ನಿರ್ಮಾಣ ಸೇರಿದಂತೆ ಅಗತ್ಯ ಪೂರ್ವಸಿದ್ಧತಾ ಕಾರ್ಯಗಳನ್ನು ಹಂತ ಹಂತವಾಗಿ ಕೈಗೊಳ್ಳಲಾಗುತ್ತಿದೆ.
ಗ್ರಾಮೀಣ ಭಾಗದ ಅನೇಕ ಮಹಿಳೆಯರು ಉದ್ಯೋಗಕ್ಕಾಗಿ ಪಟ್ಟಣ ಹಾಗೂ ನಗರ ಪ್ರದೇಶಗಳಿಗೆ ತೆರಳಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದು, ಪ್ರಯಾಣದ ಸಮಯ, ವೆಚ್ಚ ಸೇರಿದಂತೆ ಹಲವು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯವಾಗಿಯೇ ಉದ್ಯೋಗಾವಕಾಶ ಸೃಷ್ಟಿಸಿ, ಮಹಿಳೆಯರಿಗೆ ತಮ್ಮ ಊರಿನ ಸಮೀಪದಲ್ಲೇ ದುಡಿಮೆಯ ಅವಕಾಶ ಕಲ್ಪಿಸುವುದು ಈ ಉದ್ಯಮದ ಪ್ರಮುಖ ಆಶಯವಾಗಿದೆ.
ಈ ಕುರಿತು ಮಾತನಾಡಿದ ಗಂಗರಾಜು ಪಿ.ಸಿ. ಅವರು, ಗ್ರಾಮೀಣ ಭಾಗದ ಹೆಣ್ಣುಮಕ್ಕಳಿಗೆ ತಮ್ಮ ಊರಿನ ಸಮೀಪದಲ್ಲಿಯೇ ಉದ್ಯೋಗ ದೊರೆಯಬೇಕು. ಅವರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಕುಟುಂಬದ ಆದಾಯಕ್ಕೆ ನೆರವಾಗುವಂತಾಗಬೇಕು ಎಂಬುದು ನಮ್ಮ ಆಶಯ. ಈ ಉದ್ದೇಶದಿಂದ ಆರ್ಎ ಫ್ಯಾಶನ್ ಗಾರ್ಮೆಂಟ್ಸ್ ಆರಂಭಿಸಲು ನಿರ್ಧರಿಸಿದ್ದು, 2027ರ ಮಾರ್ಚ್ ವೇಳೆಗೆ ಘಟಕವನ್ನು ಕಾರ್ಯಾರಂಭಗೊಳಿಸಲು ಅಗತ್ಯ ಸಿದ್ಧತೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಇಂತಹ ಉದ್ಯಮಗಳು ಆರಂಭವಾಗುವುದರಿಂದ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗುವುದರ ಜೊತೆಗೆ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೂ ಉತ್ತೇಜನ ದೊರೆಯಲಿದೆ. ಪಣ್ಣೇನಹಳ್ಳಿ ಸಹೋದರರ ಈ ಪ್ರಯತ್ನ ಗ್ರಾಮೀಣ ಮಹಿಳೆಯರಿಗೆ ಹೊಸ ಭರವಸೆ ಮೂಡಿಸಿದ್ದು, ಸ್ಥಳೀಯ ಉದ್ಯೋಗ ಸೃಷ್ಟಿಯ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
ವರದಿ : ಶ್ರೀನಿವಾಸ್, ಕೊರಟಗೆರೆ
