15 ವರ್ಷಗಳ ಹಿಂದೆ ಗಂಗಾವತಿ ತಾಲೂಕಿನ ಒಂದು ಗ್ರಾಮವಾದ ಕಾರಟಗಿಯಿಂದ ಕೆಲವು ತರುಣರು ನನ್ನಲ್ಲಿ ಬಂದರು-ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಕರೆಯಲು. ಸಾಮಾನ್ಯವಾಗಿ ರಾಜ್ಯೋತ್ಸವ ಕಾರ್ಯಕ್ರಮಗಳನ್ನು ತಪ್ಪಿಸಿಕೊಳ್ಳುವ ನಾನು, ಕಾರಟಗಿಯ ಸಂಘದ ಹೆಸರನ್ನು ಕೇಳಿಯೇ ಸುಲಭಕ್ಕೆ ಒಪ್ಪಿಕೊಂಡೆ. ಅದರ ಹೆಸರು: `ಪೂರ್ಣತೇಜಸ್ವಿ ಕನ್ನಡ ಸಂಘ’. ತೆಲುಗರು ಹೆಚ್ಚಾಗಿರುವ ಒಂದು ಹಳ್ಳಿಯಲ್ಲಿ, ದೂರದ ಮೂಡಿಗೆರೆಯಲ್ಲಿ ವಾಸವಾಗಿರುವ ಕನ್ನಡ ಲೇಖಕನೊಬ್ಬನ ಹೆಸರಲ್ಲಿ ತರುಣರು ಸಂಘಟಿತರಾಗಿರುವುದು ಸಾಹಿತ್ಯಲೋಕದ ವಿಶೇಷ ಸಂಬಂಧದಂತೆ ಕಂಡಿತು.
ಇದೇನು ಕಾರಟಗಿಯ ಕತೆಯಲ್ಲ. ತೇಜಸ್ವಿಯವರನ್ನು ರೋಲ್ ಮಾಡೆಲಾಗಿಟ್ಟುಕೊಂಡು ಪ್ರೇರಣೆ ಪಡೆಯುವ ದೊಡ್ಡ ತರುಣರ ಪಡೆಯೊಂದು ಕರ್ನಾಟಕದ ಅನೇಕ ಊರುಗಳಲ್ಲಿದೆ. ಈ ತರುಣರಲ್ಲಿ ಬಹಳಷ್ಟು ಜನ ತೇಜಸ್ವಿಯವರನ್ನು ಜೀವಮಾನದಲ್ಲಿ ಮುಖತಃ ಭೇಟಿಮಾಡುವುದಿಲ್ಲ. ಆದರೆ ಅವರ ಯಾವುದೇ ಬರೆಹ ಪ್ರಕಟವಾದರೆ, ಹುಡುಕಿ ಓದುತ್ತ, ತಮ್ಮ ಆಲೋಚನೆಯನ್ನು ರೂಪಿಸಿಕೊಳ್ಳಲು ಯತ್ನಿಸುತ್ತಾರೆ. ಅಪರೂಪಕ್ಕೆ ಇವರಲ್ಲಿ ಕೆಲವರು ಲೇಖಕರಾಗಿ ಬೆಳೆಯುವುದೂ ಉಂಟು. ತೇಜಸ್ವಿ ಇಂತಹ ಅನೇಕರಿಗೆ ಪರೋಕ್ಷ ಗುರುವಿನಂತಿದ್ದಾರೆ.
ಇನ್ನೊಂದು ಬಗೆಯ ಯುವಕರ ಗುಂಪಿದೆ. ಇದು ತೇಜಸ್ವಿಯವರ ಬರೆಹದೊಂದಿಗೆ ಮಾತ್ರವಲ್ಲ, ಸ್ವತಃ ಅವರ ಜತೆಗೇ ವೈಯಕ್ತಿಕ ಸಂಬಂಧ ಸ್ಥಾಪನೆ ಮಾಡಿಕೊಂಡಿದೆ; ಅವರ ತಿರುಗಾಟ, ಚಳುವಳಿ, ವಿಹಾರ, ವ್ಯವಹಾರಗಳ ಜತೆ ಸಂಬಂಧ ಇರಿಸಿಕೊಂಡಿದೆ. ಈ ಯುವಕರಲ್ಲಿ ಕೆಲವರು ತೇಜಸ್ವಿಯವರ ಬಾಯಿಂದ ಸಹಜವಾಗಿ ಹೊರಡುವ `ಮೂರ್ಖ’ `ಹೋಪ್ಲೆಸ್ಫೆಲೊ’ ಎಂಬೆಲ್ಲ ಹುಸಿಸಿಟ್ಟಿನ ಪ್ರೀತಿತುಂಬಿದ ಬೈಗುಳಗಳನ್ನು ಹಸಾದವೆಂದು ಸ್ವೀಕರಿಸುವವರು.
ಇವರಲ್ಲೂ ಕೆಲವರು ತೇಜಸ್ವಿಯವರ ಪ್ರೇರಣೆಯಿಂದ ಬರೆಹ ಮಾಡುವವರುಂಟು. ಇವರು `ಕರ್ವಾಲೊ’ ಅವರ ವ್ಯಕ್ತಿತ್ವದ ಗುರುತ್ವಾಕರ್ಷಣೆಗೆ ಸಿಲುಕಿ, ಅವರ ಜತೆ ಕಾಡಿನಲ್ಲಿ ತಿರುಗುವ ಪ್ರಭಾಕರನಂತೆ ಅಥವಾ `ಚಿದಂಬರ ರಹಸ್ಯ’ದ ಅಧ್ಯಾಪಕ ಜಯರಾಮನ ಸುತ್ತ ಮುತ್ತಿಕೊಳ್ಳುವ ಕಾಲೇಜು ಹುಡುಗ-ಹುಡುಗಿüಯರಂತೆ ತೋರುತ್ತಾರೆ. ಇದೇ ತರಹ ಲಂಕೇಶರಿಗೆ, ಅವರಿಂದ ಪರೋಕ್ಷ ಪ್ರೇರಣೆ ಪಡೆಯುತ್ತಿದ್ದ ಅಭಿಮಾನಿಗಳ ತಂಡವೂ, ಅವರಿಂದ ಬಯ್ಪ್ರ್ರೀತಿಯನ್ನು ಪಡೆಯುತ್ತಿದ್ದ ಅನುಯಾಯಿಗಳ ತಂಡವೂ ಇತ್ತು. ಕನ್ನಡದಲ್ಲಿ ಯುವಕರ ಜತೆ ಹೀಗೆ ಸಲಿಗೆ ಸಂಬಂಧವನ್ನು ಸ್ಥಾಪಿಸಿಕೊಂಡು, ಅವರನ್ನು ರೂಪಿಸುತ್ತ, ಅವರ ಯೌವನದ ಚೈತನ್ಯದಿಂದ ತಾವೂ ಸ್ಫೂರ್ತಿ ಪಡೆಯುತ್ತಿದ್ದ ಲೇಖಕರಲ್ಲಿ ತೇಜಸ್ವಿ ಮತ್ತು ಲಂಕೇಶರು ಮುಖ್ಯರಾಗಿದ್ದರು.
ಈ ಹಿನ್ನೆಲೆಯಲ್ಲಿ ತೇಜಸ್ವಿಯವರ ಜತೆ ನೇರ ಸಂಬಂಧ ಇಟ್ಟುಕೊಂಡು ಪ್ರೇರಿತರಾದ ಯುವಕರಲ್ಲಿ ಮೂಡಿಗೆರೆಯ ಧನಂಜಯ ಜೀವಾಳ ಅವರೂ ಒಬ್ಬರು. ಅವರ ಪರಿಚಯವು ನನಗಾಗಿದ್ದು ಆಕಸ್ಮಿಕ. ಬ್ಯಾಂಕ್ ಅಧಿಕಾರಿಯಾದ ಅವರು ಮೂಡಿಗೆರೆ ಆಸುಪಾಸಿನ ಪಶ್ಚಿಮಘಟ್ಟಗಳಲ್ಲಿ ಚಾರಣ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾರೆ. ಈಗ ಬಳ್ಳಾರಿ ಜಿಲ್ಲಾ ವಾಸಿಯಾಗಿ ಚಿಕ್ಕಮಗಳೂರಿನ ಸಂಪರ್ಕ ಕಳೆದುಕೊಂಡಿರುವ ನಾನು, ಅವರ ಚಟುವಟಿಕೆಗಳನ್ನೆಲ್ಲ ಗಮನಿಸುತ್ತಿದ್ದೆ. ನನಗೆ ಅವರ ಚಾರಣಗಳಲ್ಲಿ ಭಾಗವಹಿಸುವ ಆಸೆ; ಆದರೆ ಹೋಗಲಾಗದ ಕಷ್ಟ. ಆದರೂ ವರುಷದಲ್ಲಿ ಒಂದು ವಾರಕಾಲ, ನಮ್ಮ ಜಿಲ್ಲೆಯ ಪಶ್ಚಿಮಘಟ್ಟಗಳ ಕಾಡು ಹೊಳೆಗಳ ತಿರುಗಾಡಿಕೊಂಡು ಬರುವ ಅಭ್ಯಾಸವಿಟ್ಟುಕೊಂಡಿರುವ ನಾನು, ಧನಂಜಯ ಅವರಿಗೆ ಚಾರಣ ಕಾರ್ಯಕ್ರಮ ಹಾಕಿಕೊಂಡಾಗಲೆಲ್ಲ ನನಗೂ ತಿಳಿಸಬೇಕೆಂದು ಕೇಳಿಕೊಂಡೆ. ನಮ್ಮ ಸ್ನೇಹಕ್ಕೆ ಇಷ್ಟು ಕಾರಣವಾಗಿ, ಈಗದು ಮುನ್ನುಡಿ ಬರೆಯುವ ತನಕ ತಲುಪಿದೆ.
ಕನ್ನಡದಲ್ಲಿ ಸದ್ಯಕ್ಕೆ ಅಭಿಮಾನಿ ಓದುಗರ ಒಂದು ಬಗೆಯ ಪಂಥವನ್ನು (ಕಲ್ಟ್) ರೂಪಿಸಿಕೊಂಡಿರುವ ಲೇಖಕರಲ್ಲಿ, ಭೈರಪ್ಪ, ರವಿ ಬೆಳಗೆರೆ, ತೇಜಸ್ವಿ ಮತ್ತು ಲಂಕೇಶರು ಪ್ರಮುಖವಾಗಿ ಕಾಣುತ್ತಾರೆ. ಕನ್ನಡದಲ್ಲಿ ಓದುವ ಅಭಿರುಚಿ ಬೆಳೆಯುವ ದೃಷ್ಟಿಯಿಂದ ಇದು ಒಳ್ಳೆಯ ಸಂಗತಿಯೇ. ಸಮಸ್ಯೆಯೆಂದರೆ, ಈ ಅಭಿಮಾನಿ ಓದುಗರು ತಮ್ಮ ಪ್ರಿಯ ಲೇಖಕರಿಗೆ ಹೇಗೆ ಅಡಿಕ್ಟ್ ಆಗಿರುತ್ತಾರೆಂದರೆ, ಅವರಿಗೆ ಇತರ ಲೇಖಕರ ಬರೆಹವೇ ರುಚಿಸುವುದಿಲ್ಲ. ಈ ಲೇಖಕನಿಷ್ಠ ಓದು, ಓದುವ ಅಭಿರುಚಿಯು ಬೇರೆಬೇರೆ ಸ್ತರಗಳಿಗೆ ಹಿಗ್ಗದಂತೆ ತಡೆಯುವ ಗೋಡೆ ಕೂಡ ಆಗಿಬಿಡುತ್ತದೆ.
ಧನಂಜಯ ಅವರ ಬರೆಹದಲ್ಲೂ ತೇಜಸ್ವಿಯವರನ್ನು ಆರಾಧಿಸುವ ಗುಣವಿದೆ; ಅವರು ಸಮಾಜದ ಎಲ್ಲ ಕಾಯಿಲೆಗೂ ಔಷಧಿ ಕೊಡಬಲ್ಲ ವೈದ್ಯ ಎಂಬ ನಂಬಿಕೆಯಿದೆ. ಎಂತಲೇ ಇಡೀ ಬರೆಹದಲ್ಲಿ ತೇಜಸ್ವಿಯವರ ವ್ಯಕ್ತಿತ್ವದ ಸ್ತುತಿ ಹೆಚ್ಚಾಗಿ, ಅವರ ಬರೆಹ ಮತ್ತು ವ್ಯಕ್ತಿತ್ವದ ವಿಮರ್ಶೆ ಕ್ಷೀಣವಾಗಿದೆ. “ಇತ್ತೀಚಿನ ಕಾವೇರಿ ನೀರಿನ ವಿವಾದ, ಮೋರೆ ಮಖಕ್ಕೆ ಮಸಿ ಬಳಿದ ಪ್ರಕರಣದಲ್ಲಿ ನಾಡಿಗೇ ನಾಡೇ ಮುಂದೇನು ಎಂದು ಯೋಚಿಸುತ್ತಿದ್ದಾಗ ಸರಳವಾಗಿ ನೇರವಾಗಿ ಕಡ್ಡಿ ಮುರಿದಂತೆ ಮಾತನಾಡಿದವರೆಂದರೆ, ನಮ್ಮ ತೇಜಸ್ವಿ ಮಾತ್ರ’’-ಇಲ್ಲಿನ ಪದಪದಗಳಲ್ಲಿ ತುಳುಕುತ್ತಿರುವ ಅಭಿಮಾನ ಮತ್ತು ನಾಯಕಾರಾಧನೆಯ ಗುಣವನ್ನು ಗಮನಿಸಬೇಕು.
ತೇಜಸ್ವಿಯವರ ನಿಧನದ ಬಳಿಕ ಅವರನ್ನು ಕುರಿತು ಕನ್ನಡದಲ್ಲಿ ಹಲವಾರು ಲೇಖನ ಮತ್ತು ಪುಸ್ತಕಗಳು ಪ್ರಕಟವಾದವು. ಸಾಹಿತ್ಯ ವಿಮರ್ಶಕರು ತೇಜಸ್ವಿಯವರ ಕೃತಿಗಳನ್ನಿಟ್ಟುಕೊಂಡು ಬರೆಯುವ ಕೃತಿಗಳು ಒಂದು ಮಾದರಿಯವಾದರೆ, ತೇಜಸ್ವಿಯವರ ಜತೆ ವೈಯಕ್ತಿಕವಾಗಿ ಒಡನಾಡ ಮಾಡಿದವರು ಬರೆದಿರುವ ಕೃತಿಗಳು ಇನ್ನೊಂದು ಮಾದರಿಯವು. ತೇಜಸ್ವಿಯವರ ಮಡದಿ ಶ್ರೀಮತಿ ರಾಜೇಶ್ವರಿಯವರು ಬರೆದಿರುವ `ನನ್ನ ತೇಜಸ್ವಿ’ ಮತ್ತು ಧನಂಜಯ ಅವರ ಈ ಪುಸ್ತಕ ಎರಡನೇ ಮಾದರಿಯ ಪುಸ್ತಕಗಳು. ಇವುಗಳ ಮಹತ್ವವೆಂದರೆ, ಇವು ಸಾರ್ವಜನಿಕರಿಗೆ ಪರಿಚಿತವಲ್ಲದ ಲೇಖಕರ ಮುಖಗಳನ್ನು ಕಾಣಿಸುತ್ತವೆ. ಆದರೆ ಅಂತಿಮವಾಗಿ ಆರಾಧನೆಯ ವರ್ತುಲದಿಂದ ಹೊರಬರುವುದಿಲ್ಲವಾಗಿ ಹಾಗೂ ಲೇಖಕರ ಮಿತಿಗಳನ್ನು ನಿಷ್ಠುರವಾಗಿ ವಿಮರ್ಶಿಸಲಾರವಾಗಿ, ಒಂದು ಬಗೆಯ ಅರಕೆಯನ್ನು ಉಳಿಸಿಬಿಡುತ್ತದೆ. ಅಂತಹ ಒಂದು ಅರಕೆ ಈ ಪುಸ್ತಕವನ್ನು ಓದುವಾಗಲೂ ಅನುಭವಕ್ಕೆ ಬರುತ್ತದೆ.
ಆದರೆ ಈ ಅರಕೆಯ ಆಚೆ ಇಲ್ಲಿ ಅನೇಕ ಗುಣಗಳಿವೆ. ಇಡೀ ಪುಸ್ತಕದಲ್ಲಿ ಘಟನೆಗಳು ಕಾಲಕ್ರಮಣಿಕೆಯ ಅನುಸಾರವಾಗಿ ಜೋಡಣೆಗೊಂಡಿರದೆ, ಲಹರಿಯ ರೂಪದಲ್ಲಿ ಬಂದಿವೆ. ಇದು ಕಾಲದ ಬಗ್ಗೆ ವಿಶೇಷ ಚಿಂತನೆ ಮಾಡಿದ್ದ ತೇಜಸ್ವಿಯವರ ಜೀವನಚಿತ್ರವನ್ನು ನಿರೂಪಿಸುವ ಅರ್ಥಪೂರ್ಣವಾದ ವಿಧಾನವೆಂದು ಅನಿಸುತ್ತದೆ. ಹೀಗಾಗಿ ಈ ಪುಸ್ತಕವನ್ನು ಎಲ್ಲಿಂದಲಾದರೂ ಓದಬಹುದು. ಇಲ್ಲಿನ ಬರೆಹವು ನವಿರಾದ ಹಾಸ್ಯದಿಂದ ಕೂಡಿದ್ದು, ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.
ಕೆಲವು ಕಡೆ ಶೈಲಿಯು-ತೇಜಸ್ವಿಯವರ ಕೃತಿಗಳಿಂದ ಸಾಲುಗಳನ್ನು ಕತ್ತರಿಸಿ ತಂದಿಟ್ಟಿರುವಂತೆ- ಪ್ರಭಾವಿತವಾಗಿದೆ. ಆದರೂ ಈ ಪ್ರಭಾವದಿಂದ ಬಿಡಿಸಿಕೊಂಡು ಹುಟ್ಟಿರುವ, ಮನಸ್ಸನ್ನು ಹಿಡಿದು ನಿಲ್ಲಿಸುವ ಎಷ್ಟೋ ಆಕರ್ಷಕವಾದ ಭಾಗಗಳು ಇಲ್ಲಿವೆ. ಅವುಗಳಲ್ಲಿ ಮೂಡಿಗೆರೆಯಲ್ಲಿ ಕಣ್ಣುಕಟ್ಟಿಕೊಂಡು ಬೈಕ್ ಓಡಿಸುವ ಪ್ರಸಂಗದಲ್ಲಿ ತೇಜಸ್ವಿಯವರು ಮಾಡಿದ ಪ್ರತಿಕ್ರಿಯೆಯ ನಿರೂಪಣೆ ಒಂದು; ತೇಜಸ್ವಿಯವರ ಟೆಲಿಫೋನಿನ ರಿಸೀವರ್ ಮೌತ್ ಪೀಸಿನೊಳಗೆ ಅಡಿಗೆ ಪುಡಿ ಸಿಕ್ಕಿಕೊಂಡಿದ್ದ ಪ್ರಕರಣದ ನಿರೂಪಣೆಯು ಇನ್ನೊಂದು. ಇಲ್ಲಿನ ಸಂಭಾಷಣೆಗಳು ಸಹ ಬಹಳ ಜೀವಂತವಾಗಿವೆ.
ಧನಂಜಯ ಅವರ ಬರೆಹದ ಒಂದು ಭಾಗವನ್ನು ಇಲ್ಲಿ ಉಲ್ಲೇಖಿಸಬಹುದು: “ `ನೋಡಯ್ಯ ಧನಂಜಯ, ಈ ಫೋಟೊಗಳು ಹೇಗೆ ಪ್ರಿಂಟ್ ಆಗಿವೆ ಅಂತ’ ಎಂದು ಆಲ್ಬಂ ಕೈಗಿಟ್ಟರು. ಇವರ ಅದ್ಭುತ ಹಕ್ಕಿ ಫೋಟೊಗಾರಿಕೆಗೆ ಸರಿಯಾಗಿ ಮೆಟಾಲಿಕ್ ಪ್ರಿಂಟ್ ಮಾಡಿಸಿದ್ದರು. ಪುಟ ತೆರೆದರೆ ಹಕ್ಕಿಗಳು ಎಲ್ಲಿ ಹಾರಿಹೋಗುತ್ತವೋ ಎನ್ನುವಷ್ಟರ ಮಟ್ಟಿಗೆ ನೈಜವಾಗಿ ಕಾಣುತ್ತಿದ್ದವು. ಅರ್ಧಗಂಟೆಗೂ ಮಿಕ್ಕಿ ಫೋಟೊಗಳನ್ನು ನೋಡಿ ವಿಸ್ಮಿತರಾದೆವು. ಪ್ರತಿಭೆ, ಅನುಭವ, ಬುದ್ಧಿವಂತಿಕೆಯ ಜೊತೆ ತಂತ್ರಜ್ಞಾನ ಸೇರಿದರೆ ಎಂತಹ ಕಲಾಕೃತಿ ಹುಟ್ಟುತ್ತದೆ ಎಂದು ಅಚ್ಚರಿಯಾಯಿತು’’. ಇಲ್ಲಿರುವ `ಅದ್ಭುತ’ `ವಿಸ್ಮಯ’ `ಅಚ್ಚರಿ’ ಎಂಬ ಶಬ್ದಗಳನ್ನು ಗಮನಿಸಬೇಕು. ಇವು ತೇಜಸ್ವಿ ಒಂದು ತಲೆಮಾರಿನ ತರುಣರಲ್ಲಿ ಹುಟ್ಟುಹಾಕಿದ ಮುಖ್ಯವಾದ ಮನೋಧರ್ಮದ ಸಂಕೇತದಂತಿವೆ. “ರಸ್ತೆ ತಿರುವಿನಲ್ಲಿ ಯಾವುದೋ ವಾಹನ ಇಂಜಿಲ್ ಆಯಿಲ್ ಸುರಿದು ರಸ್ತೆಯೆಲ್ಲ ಗೋಕುಲಾಷ್ಟಮಿಯ ಅಡಿಕೆ ಕಂಬವಾಗಿತ್ತು’’ ಎಂಬ ಈ ಸಾಲು, ಸೂಕ್ಷ್ಮ ನೋಡುವಿಕೆಯಿಂದ ಹುಟ್ಟಿದ್ದು. ಲಂಕೇಶ್ ಅವರು ನಾವು ಬದುಕುತ್ತಿರುವ ಸಾಮಾಜಿಕ ರಾಜಕೀಯ ಪರಿಸರದ ಮೇಲೆ ಚಿಂತನೆ ಮಾಡುವ ಮನೋಭಾವವನ್ನು ಹುಟ್ಟಿಸಿದರೆ, ತೇಜಸ್ವಿಯವರು ಸಮಾಜವನ್ನೂ ಒಳಗೊಂಡಂತೆ ಒಟ್ಟಾರೆ ಜೈವಿಕವಾದ ಪರಿಸರವನ್ನು ಸೂಕ್ಷ್ಮವಾಗಿ ಗಮನಿಸುವ, ಪ್ರಶ್ನಿಸುವ ಮತ್ತು ಅಚ್ಚರಿ ಪಡುವ ಮನೋಭಾವವನ್ನು ಹುಟ್ಟುಹಾಕಿದರು.
ಧನಂಜಯ ಅವರು ಗಂಭೀರವಾದ ಚಿಂತನೆಯನ್ನು ಒಳಗೊಳ್ಳುವ ಶೈಲಿಯಲ್ಲಿಯೂ ಬರೆಯಬಲ್ಲರು: ಇದಕ್ಕೆ ನಿದರ್ಶನವಾಗಿ “ದೇಶೀ ಜ್ಞಾನದ ಅಮೂಲ್ಯತೆಯನ್ನು ಸ್ತ್ರೀ ಶಕ್ತಿಯ ಘನತೆಯನ್ನು ಪ್ರಕೃತಿಯ ಸಂಕೀರ್ಣತೆಯನ್ನು ತೇಜಸ್ವಿಯಷ್ಟು ಅರ್ಥಪೂರ್ಣವಾಗಿ ಅನಾವರಣಗೊಳಿಸಿದವರು ಕನ್ನಡದ ಮಟ್ಟಿಗೆ ಸದ್ಯಕ್ಕೆ ಬೇರಾರೂ ಕಾಣುತ್ತಿಲ್ಲ. ಸ್ವಂತ ಪರಿಶ್ರಮದಿಂದ ಹಾಗೂ ಪ್ರತಿಭೆಯಿಂದ ಕಾಲದೇಶಗಳನ್ನೂ ಮೀರಿ ಮೇಲೆಬಂದ ತೇಜಸ್ವಿಯವರು, ಸಮಾಜದ ವಿವಿಧ ಸ್ತರದ ಜನರೊಡನೆ ಅಸಾಧಾರಣ ಸಂಬಂಧ, ಸಂಪರ್ಕ ಹಾಗೂ ಸಂವಹವನ್ನು ನಾವ್ಯಾರೂ ಕಲ್ಪನೆಯಲ್ಲೂ ಅಂದುಕೊಳ್ಳದ ರೀತಿಯಲ್ಲಿ ಸಾಧಿಸಿದ್ದರು’’ ಎಂಬ ವಿಶ್ಲೇಷಣೆಯನ್ನು ನೋಡಬಹುದು. ಇಲ್ಲಿನ ಮುಖ್ಯ ಸಂಗತಿಯೆಯೆಂದರೆ, ಬರೆಹದ ಜತೆಗೇ ಜೋಡಣೆಯಾಗಿರುವ ಕ್ರಿಯಾಶೀಲತೆ.
ಧನಂಜಯರಂತಹ ಯುವಕರು ಕೇವಲ ತೇಜಸ್ವಿಯವರನ್ನು ಪ್ರೀತಿಸುವ ಮತ್ತು ಆರಾಧಿಸುವ ಹಂತಕ್ಕೆ ನಿಂತಿಲ್ಲ. ತಾವು ತೇಜಸ್ವಿಯವರಿಂದ ಪಡೆದ ಚಿಂತನೆಯನ್ನು ಕ್ರಿಯಾಶೀಲಗೊಳಿಸುವುದಕ್ಕೂ ಮುಂದಾಗುತ್ತಾರೆ. ಇದಕ್ಕೆ ಧನಂಜಯ ಮತ್ತು ಅವರ ಗೆಳೆಯರು ಮೂಡಿಗೆರೆ ಸೀಮೆಯಲ್ಲಿ ಮಾಡಿದ ಕೆಲಸಗಳ ಬಗ್ಗೆ ಇಲ್ಲಿರುವ ಮಾಹಿತಿಯೇ ಸಾಕ್ಷಿಯಾಗಿದೆ.
ಆದರೆ ಈ ಯುವಕರ ಚಟುವಟಿಕೆಗಳು, ಪರಿಸರ ರಕ್ಷಣೆ, ಭ್ರಷ್ಟಾಚಾರ ವಿರೋಧ ಮುಂತಾದ ನಗರದ ಶಿಕ್ಷಿತ ಮಧ್ಯಮವರ್ಗದ ಸೀಮಿತ ಕ್ರಿಯಾಶೀಲತೆಯ ಆಚೆಗೆ ಎಷ್ಟು ವಿಸ್ತರಿಸಿಕೊಳ್ಳುತ್ತವೆ? ತೇಜಸ್ವಿಯವರಿಂದ ಹೀಗೆ ಪ್ರೇರಣೆ ಪಡೆದವರಲ್ಲಿ ಯುವಕರೇ ಹೆಚ್ಚು. ಯುವತಿಯರು ಕಡಿಮೆಯೇಕೆ? ಮುಂತಾದ ಪ್ರಶ್ನೆಗಳು ಕಾಡುವುದುಂಟು. ಇಂತಹ ಸಣ್ಣಪುಟ್ಟ ಪ್ರಶ್ನೆಗಳಾಚೆ, ತಾವು ಜೀವಿಸುವ ಪರಿಸರದೊಂದಿಗೆ ಜೀವಂತವಾಗಿ ಮಿಡಿಯುವ ಸೃಜನಶೀಲ ಮನಸ್ಸಿನ ಜಾತ್ಯತೀತ ಪ್ರಜ್ಞೆಯ ಯುವಕ ತಲೆಮಾರೊಂದನ್ನು ತಮ್ಮ ಬರೆಹ ಮತ್ತು ವ್ಯಕ್ತಿತ್ವದಿಂದ ರೂಪುಗೊಳ್ಳುವಂತೆ ತೇಜಸ್ವಿಯವರು ಮಾಡಿದರು ಎನ್ನುವುದು ದೊಡ್ಡ ಸಂಗತಿಯಾಗಿದೆ.
ನಾಡು ಕಂಡ ಅಪೂರ್ವ ಲೇಖಕ ಮತ್ತು ವಿಶಿಷ್ಟ ವ್ಯಕ್ತಿ ತೇಜಸ್ವಿ. ಅವರ ಅಚಾನಕ್ ಸಾವಿನಿಂದ ಕವಿದಿರುವ ದುಗುಡ ಮತ್ತು ಅವರ ಮೇಲಿನ ಅಭಿಮಾನಗಳು ಇನ್ನೂ ಆರ್ದ್ರವಾಗಿರುವಾಗಲೇ, ಅವರನ್ನು ಕುರಿತು ಅವರಿಂದ ಲೋಕದೃಷ್ಟಿಯನ್ನು ಕಟ್ಟಿಕೊಂಡಿರುವ ಯುವಕರೊಬ್ಬರು ಬರೆದಿರುವ ಈ ಪುಸ್ತಕ ಓದಿ ನನಗಂತೂ ಸಂತೋಷವಾಗಿದೆ. ಲೇಖಕರೊಬ್ಬರ ಮೊದಲ ಬರೆಹವೇ ಇದು ಎಂದು ಅಚ್ಚರಿಪಡುವಷ್ಟು ಇಲ್ಲಿ ಪ್ರಬುದ್ಧತೆಯಿದೆ; ಜೀವಂತಿಕೆಯಿದೆ; ಬರೆಹದ ಮೇಲೆ ಹಿಡಿತವಿದೆ. ಈ ಕೃತಿಯನ್ನು ಓದುಗರು ನನ್ನಂತೆಯೇ ಓದಿ ಸಂತೋಷ ಪಡುವರು ಎಂಬ ನಂಬಿಕೆ ನನಗಿದೆ.
– ರಹಮತ್ ತರೀಕೆರೆ
