ಬೇಲೂರು- 12 ನೇ ಶತಮಾನದಲ್ಲಿ ಬಸವಾಧಿ ಪ್ರಥಮರ ಸಮಾಕಾಲಿನರಾದ ಅಕ್ಕಮಹಾದೇವಿ ಕನ್ನಡ ಸಾಹಿತ್ಯಕ್ಕೆ ತಮ್ಮದೆಯಾದ ಕೊಡುಗೆ ನೀಡಿದ್ದಾರೆ. ಅವರ ವಚನ ಸಾಹಿತ್ಯದಲ್ಲಿ ಜನಪರ ಮತ್ತು ಸಾಮಾಜಿಕ ಚಿಂತನೆಗಳು ಅಡಗಿದೆ. ಅಕ್ಕಮಹಾದೇವಿ ಸ್ತ್ರೀ ಕುಲದ ಅಸ್ಮಿತೆ ಎಂದು ಬೇಲೂರು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಬ್ಬಾಳು ಹಾಲಪ್ಪ ಹೇಳಿದರು.
ಪಟ್ಟಣದ ಲಯನ್ಸ್ ಭವನದ ಸಭಾಂಗಣದಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತ, ಕದಳಿ ಮಹಿಳಾ ವೇದಿಕೆ ಹಾಗೂ ಯುವ ಘಟಕ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅಕ್ಕಮಹಾದೇವಿಯ ಪ್ರತಿ ವಚನಗಳಲ್ಲಿ ವೈಚಾರಿಕತೆ, ಆತ್ಮಪ್ರತ್ಯಯದ ಮೂಲಕ ಸಾಮಾಜಿಕ ಪ್ರಭುತ್ವದಲ್ಲಿ ಅಡಗಿದ ಅನಿಷ್ಟಗಳಿಗೆ ದಿಟ್ಟ ಉತ್ತರ ನೀಡಿದ್ದಾರೆ, ಕಲ್ಯಾಣ ಪಟ್ಟಣದ ಅನುಭವ ಮಂಟಪಕ್ಕೆ ಅಕ್ಕಮಹಾದೇವಿ ಬಂದ ಸಂದರ್ಭದಲ್ಲಿ ಅಲ್ಲಮಪ್ರಭು ಮತ್ತು ಅಕ್ಕಮಹಾದೇವಿ ನಡುವಿನ ಸಂಭಾಷಣೆ ಮನುಕುಲಕ್ಕೆ ಮಾದರಿಯಾಗಿದೆ ಎಂದ ಅವರು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಕಳೆದ ಒಂದು ವರ್ಷದಿಂದ ೧೨ ಕ್ಕೂ ಹೆಚ್ಚಿನ ಕಾರ್ಯಕ್ರಮಗಳನ್ನು ನಡೆಸಿದ್ದು, ಅಕ್ಕಮಹಾದೇವಿ, ಬಸವಣ್ಣನವರು ಮತ್ತು ಸೇರಿದಂತೆ ಹತ್ತಾರು ಸಮಾರಂಭಗಳನ್ನು ಯುವಜನತೆಗೆ ತಿಳಿಸುವ ಉದ್ದೇಶದಿಂದ ಶಾಲಾ-ಕಾಲೇಜಿನಲ್ಲಿ ನಡೆಸಲಾಗುತ್ತಿದೆ. ಶರಣ ಸಾಹಿತ್ಯ ಪರಿಷತ್ತು ಒಂದು ಜಾತಿ,ಧರ್ಮಕ್ಕೆ ಸೀಮಿತವಾಗಿಲ್ಲ, ಸರ್ವರೂ ಕೂಡ ಸದಸ್ಯತ್ವ ಪಡೆಯಬೇಕು ಎಂದು ಕರೆ ನೀಡಿದರು.
ಉಪಾನ್ಯಾಸ ನೀಡಿದ ಶಿಕ್ಷಕಿ ಮತ್ತು ಸಾಹಿತಿ ಮಧುಮಾಲತಿ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹೆಣ್ಣಿನಧ್ವನಿಯನ್ನು ಮೊದಲು ಧ್ವನಿಎತ್ತಿದ ಅಕ್ಕಮಹಾದೇವಿ, ಈಕೆ ವಚನಕಾರ್ತಿ, ಸ್ತ್ರೀಪರ ನಡೆದ ಬಂಡಾಯ ಹೋರಾಟದ ಆದ್ಯಪವರ್ತಕಿಯಾಗಿದ್ದಾರೆ. ಅವರ ಪ್ರತಿಯೊಂದು ವಚನ ಸಾಹಿತ್ಯ ಅಜ್ಞಾನದಿಂದ ಸುಜ್ಞಾನದ ಕಡೆಗೆ ಕೊಂಡೊಯ್ಯುವ ಕೈದೀವಿಗಳಾಗಿವೆ. ಚನ್ನಮಲ್ಲಿಕಾರ್ಜನ ಎಂಬ ಅಂಕಿನಾಮದಿಂದ ಆತ್ಮ ಪರಮಾತ್ಮ ಸಂಸಾರ ಬಂಧನ ಬಿಡುಗಡೆ ಮುಂತಾದವುಗಳ ಪರಿಮಿತಿಯಲ್ಲಿ ಪರಿಭ್ರಮಿಸುವ ಅಕ್ಕನ ಹೋರಾಟ ಇಡೀ ಜಗತ್ತಿನ ಮಾದರಿಯಾಗಿದೆ. ಬೇಲೂರು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಇತ್ತೀಚಿನ ದಿನದಲ್ಲಿ ಶರಣರ ಬಗ್ಗೆ ಅರ್ಥಪೂರ್ಣ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಅರೇಹಳ್ಳಿ ಗೀತಾಶಿವರಾಜ್ ಅವರ ಸಾಧನೆ ಗುರುತಿಸಿ ಅಭಿನಂದನೆ ಸಲ್ಲಿಸಲಾಯಿತು.ಕಾರ್ಯಕ್ರಮದಲ್ಲಿ ತಾಲ್ಲೂಕು ಜಾನಪರ ಪರಿಷತ್ತು ಅಧ್ಯಕ್ಷ ವೈ.ಎಸ್.ಸಿದ್ದೇಗೌಡ, ಕಸಾಪ ಅಧ್ಯಕ್ಷ ಮಾ.ನ.ಮಂಜೇಗೌಡ, ತಾಲ್ಲೂಕು ವೀರಶೈವ ಲಿಂಗಾಯಿತ ಮಹಾಸಭಾ ತಾ, ಘಟಕದ ಅಧ್ಯಕ್ಷ ಎ.ಎಸ್.ಬಸವರಾಜು, ಲಯನ್ಸ್ ಭವನ ಟ್ರಸ್ಟ್ ಅಧ್ಯಕ್ಷ ದೊಡ್ಡಮನೆ ಪ್ರಭಾಕರ್, ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಚಂದ್ರಮೌಳಿ, ಸಾಹಿತಿ ಇಂದರಮ್ಮ, ಕದಳಿ ವೇದಿಕೆ ಅಧ್ಯಕ್ಷೆ ಶಶಿರೇಖಾ, ಕಾರ್ಯದರ್ಶಿ ರಾಜಕುಮಾರ್, ಖಜಾಂಚಿ ಧನಂಜಯ್, ಹಳೇಬೀಡು ಹೊಬಳಿ ಅಧ್ಯಕ್ಷೆ ವಿನುತಧನಂಜಯ್, ಅದ್ದೂರಿ ಚೇತನ್, ಹಳೇಬೀಡು ಚೇತನ್, ವೈ.ಬಿ.ಸುರೇಶ್ ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದರು.
