ನವದೆಹಲಿ: ಹೋಲ್ಸೇಲ್ ಹಣದುಬ್ಬರ (WPI inflation) ಮಾರ್ಚ್ ತಿಂಗಳಲ್ಲಿ ಶೇ. 2.05ಕ್ಕೆ ತಗ್ಗಿದ ಬೆನ್ನಲ್ಲೇ ರೀಟೇಲ್ ಹಣದುಬ್ಬರವೂ (Retail Inflation) ಕಡಿಮೆ ಆಗಿರುವ ಮಾಹಿತಿ ತಿಳಿದುಬಂದಿದೆ. ಸರ್ಕಾರ ಇಂದು ಮಂಗಳವಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, 2025ರ ಮಾರ್ಚ್ ತಿಂಗಳಲ್ಲಿ ರೀಟೇಲ್ ಹಣದುಬ್ಬರ ಶೇ. 3.34ಕ್ಕೆ ಇಳಿದಿದೆ. ಆಹಾರ ವಸ್ತುಗಳ ಬೆಲೆ ಇಳಿಕೆಯಿಂದಾಗಿ ಹಣದುಬ್ಬರ ದರ ತುಸು ತಗ್ಗಿದೆ. ಫೆಬ್ರುವರಿ ತಿಂಗಳಲ್ಲೂ ಹಣದುಬ್ಬರ ಶೇ 3.61ರಷ್ಟಿತ್ತು. ಸತತ ಎರಡು ತಿಂಗಳು ಹಣದುಬ್ಬರ ದರವು ಆರ್ಬಿಐನ ಗುರಿಯಾದ ಶೇ. 4ರ ದರದ ಒಳಗೆ ಇದ್ದಂತಾಗಿದೆ.
ಕಳೆದ ವಾರ ನಡೆದ ವಿವಿಧ ಸಮೀಕ್ಷೆಗಳಲ್ಲಿ ಆರ್ಥಿಕ ತಜ್ಞರು ಈ ಮಾರ್ಚ್ನಲ್ಲಿ ಹಣದುಬ್ಬರವು ಶೇ. 3.60ರಷ್ಟಿರಬಹುದು ಎನ್ನುವ ಅನಿಸಿಕೆ ನೀಡಿದ್ದರು. ನಿರೀಕ್ಷೆ ಮೀರಿ ಹಣದುಬ್ಬರ ತಗ್ಗಿದೆ.
ಆಹಾರ ಹಣದುಬ್ಬರ ತಗ್ಗಿದ ಎಫೆಕ್ಟ್
ಗ್ರಾಹಕ ಬೆಲೆ ಸೂಚಿಯ ಗುಂಪಿನಲ್ಲಿ ಆಹಾರ ಹಣದುಬ್ಬರದ ದರ ಗಣನೀಯವಾಗಿ ಕಡಿಮೆ ಆಗಿದೆ. ಫೆಬ್ರುವರಿಯಲ್ಲಿ ಶೇ. 3.75ರಷ್ಟಿದ್ದ ಆಹಾರ ಹಣದುಬ್ಬರ ಮಾರ್ಚ್ನಲ್ಲಿ ಶೇ. 2.69ಕ್ಕೆ ಇಳಿದಿದೆ. ಒಟ್ಟಾರೆ ಹಣದುಬ್ಬರ ಇಳಿಕೆಯಲ್ಲಿ ಅರ್ಧದಷ್ಟು ಪಾಲು ಆಹಾರಕ್ಕೆ ಸಲ್ಲಬೇಕು.
