1ಮತೀಯ ದ್ವೇಷ ಬಿತ್ತಲು ಸುಳ್ಳು ಹೇಳುವ ಮಟ್ಟಕ್ಕೆ ಪ್ರಧಾನಿ ಮೋದಿ ಇಳಿಯಬಾರದಿತ್ತು: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಬಾರದು’’ ಎಂದು ಬಾಬಾಸಾಹೇಬ್ ಅಂಬೇಡ್ಕರ್ ಹೇಳಿದ್ದಾರೆ ಎನ್ನುವ ಹಸಿ ಹಸಿ ಸುಳ್ಳನ್ನು ದೇಶದ ಪ್ರಧಾನಿಯಾಗಿರುವ ಮೋದಿಯವರು ಹೇಳಿರುವುದು ಅತ್ಯಂತ ವಿಷಾದನೀಯವಾದುದು. ಮತೀಯ ದ್ವೇಷ ಹುಟ್ಟಿಸಬೇಕೆಂಬ ಏಕೈಕ ದುರುದ್ದೇಶದಿಂದ ಈ ರೀತಿಯ ಸುಳ್ಳುಗಳನ್ನು ಹೇಳುವ ಮಟ್ಟಕ್ಕೆ ದೇಶದ ಪ್ರಧಾನಿ ಇಳಿಯಬಾರದಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಿಡಿಕಾರಿದ್ದಾರೆ.ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾಷಣ ಮತ್ತು ಬರವಣಿಗೆಗಳ ಹನ್ನೆರಡು ಸಂಪುಟಗಳನ್ನು ಮಹಾರಾಷ್ಟ್ರ ಸರ್ಕಾರ ವರ್ಷಗಳ ಹಿಂದೆಯೇ ಪ್ರಕಟಮಾಡಿದೆ. ಅವುಗಳ ಕನ್ನಡ ಅನುವಾದವನ್ನು ನಮ್ಮ ಸರ್ಕಾರವೇ ಮುದ್ರಿಸಿದೆ. ಅಲ್ಲೆಲ್ಲಾದರೂ ಧರ್ಮಾಧಾರಿತ ಮೀಸಲಾತಿ ಬೇಡ ಇಲ್ಲವೇ ಬೇಕು ಎನ್ನುವ ಅಂಬೇಡ್ಕರ್ ಅವರ ಅಭಿಪ್ರಾಯದ ಉಲ್ಲೇಖ ಇದ್ದರೆ ಅದನ್ನು ಪ್ರಧಾನಿ ಮೋದಿಯವರು ದೇಶದ ಜನರ ಮುಂದಿಡಬೇಕು, ಇಲ್ಲವಾದರೆ ಇಂತಹದ್ದೊಂದು ಸುಳ್ಳನ್ನು ಹೇಳಿರುವುದಕ್ಕಾಗಿ ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
*****
2.ಜಾತಿಗಣತಿ ವಿಚಾರವಾಗಿ ವಿರೋಧ ಪಕ್ಷಗಳಿಂದ ಗೊಂದಲ ಸೃಷ್ಟಿ, ಅದಕ್ಕೆಲ್ಲಾ ತಕ್ಕ ಉತ್ತರ : ಡಿ.ಕೆ. ಶಿವಕುಮಾರ್

ಬೆಂಗಳೂರು: ಜಾತಿ ಗಣತಿ ವಿಚಾರವಾಗಿ ಕೆಲವು ಮಾಧ್ಯಮಗಳಲ್ಲಿ ಹಾಗೂ ವಿರೋಧ ಪಕ್ಷದವರು ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಅದಕ್ಕೆ ನಾವು ಸೂಕ್ತ ಉತ್ತರ ನೀಡುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಜಾತಿಗಣತಿ ವರದಿಯ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕುಮಾರಪಾರ್ಕ್ ನಲ್ಲಿರುವ ಸರ್ಕಾರಿ ನಿವಾಸದಲ್ಲಿ ಮಂಗಳವಾರ ಒಕ್ಕಲಿಗ ಸಚಿವರು, ಶಾಸಕರು, ರಾಜ್ಯಸಭೆ ಸದಸ್ಯರು ಹಾಗೂ ಮುಖಂಡರ ಜತೆ ಸಮಾಲೋಚನೆ ನಡೆಸಿದರು. ಸಭೆ ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು
ಕರ್ನಾಟಕ ರಾಜ್ಯದ 11ನೇ ಹಿಂದುಳಿದ ವರ್ಗಗಳ ಆಯೋಗದ ಜಾತಿಗಣತಿ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಿದೆ. ಈ ವರದಿ ಬಗ್ಗೆ ಚರ್ಚೆ ನಡೆಸಲು ಇದೇ 17ರಂದು ವಿಶೇಷ ಸಚಿವ ಸಂಪುಟ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.
*****
3.ಮುಷ್ಕರ ನಿರತ ಲಾರಿ ಮಾಲೀಕರ ಜೊತೆಗಿನ ಸಿಎಂ ಸಂಧಾನ ಮಾತುಕತೆ ವಿಫಲ! ನಾಳೆಯಿಂದ ಪ್ರತಿಭಟನೆ ತೀವ್ರ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಅವರ ಗೃಹ ಕಚೇರಿ ಕಾವೇರಿಯಲ್ಲಿ ಮುಷ್ಕರ ನಿರತ ಲಾರಿ ಮಾಲೀಕರ ಸಂಘದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು. ಆದರೆ ಡೀಸೆಲ್ ಮೇಲಿನ ಸುಂಕ ಇಳಿಸಲು ಒಪ್ಪದ ಹಿನ್ನೆಲೆಯಲ್ಲಿ ಸಭೆ ವಿಫಲವಾಯಿತು.
ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ಈ ಬಾರಿ ಬಜೆಟ್ನಲ್ಲಿ ಡಿಸೇಲ್ ಮೇಲಿನ ಸುಂಕ ರೂ.2 ಹೆಚ್ಚಳ ಮಾಡಲಾಗಿದೆ. ಆದರೆ ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಡಿಸೇಲ್ ದರ ನಮ್ಮ ರಾಜ್ಯದಲ್ಲಿ ಕಡಿಮೆಯಿದೆ. ಸಾರ್ವಜನಿಕರ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಮುಷ್ಕರವನ್ನು ಕೈಬಿಡುವಂತೆ ಮನವಿ ಮಾಡಿದರು.
****
4.Waqf ಕಾಯ್ದೆ ಜಾರಿಗೂ ಜಗ್ಗದ ಮಂಡಳಿ: ವೆಲ್ಲೂರಿನಲ್ಲಿ 150 ಕುಟುಂಬಕ್ಕೆ ಜಾಗ ಖಾಲಿ ಮಾಡಿ, ಇಲ್ಲವೆ ದರ್ಗಾಕ್ಕೆ ತೆರಿಗೆ ಕಟ್ಟಿ, ನೋಟೀಸ್!

ವಕ್ಫ್ ಕಾಯ್ದೆಯ ಕುರಿತು ದೇಶದ ಹಲವು ಭಾಗಗಳಲ್ಲಿ ಕೋಲಾಹಲ ಎದ್ದಿರುವ ನಡುವೆಯೇ, ಇತ್ತೀಚೆಗೆ ತಮಿಳುನಾಡಿನ ತಿರುಚೆಂದುರೈ ಗ್ರಾಮದಲ್ಲಿ ವಿವಾದ ಉಂಟಾಗಿದ್ದು, ವೆಲ್ಲೂರು ಜಿಲ್ಲೆಯ ಕಟ್ಟುಕೊಳ್ಳೈ ಗ್ರಾಮದ ನಿವಾಸಿಗಳು ಕೂಡ ಆಘಾತಕ್ಕೊಳಗಾಗಿದ್ದಾರೆ. ಗ್ರಾಮಸ್ಥರಿಗೆ ಭೂಮಿಯು ವಕ್ಫ್ ಆಸ್ತಿ ಎಂದು ಘೋಷಿಸುವ ಅಧಿಕೃತ ನೋಟಿಸ್ ನೀಡಲಾಗಿದೆ. ಮಾಹಿತಿಯ ಪ್ರಕಾರ, ಫೆಬ್ರವರಿಯಲ್ಲಿ ಸೈಯದ್ ಅಲಿ ಸುಲ್ತಾನ್ ಶಾ ದರ್ಗಾ ಹೆಸರಿನಲ್ಲಿ ಈ ನೋಟಿಸ್ ನೀಡಲಾಗಿತ್ತು. ವಿವಾದಿತ ಭೂಮಿ ದರ್ಗಾಗೆ ಸೇರಿದ್ದು ಮತ್ತು ವಕ್ಫ್ ಮಂಡಳಿಯ ಒಡೆತನದಲ್ಲಿದೆ ಎಂದು ಅದು ಹೇಳಿಕೊಂಡಿದೆ.
*****
5.ದ್ವೇಷ ರಾಜಕೀಯ: ED ಕಚೇರಿಗಳ ಮುಂದೆ ಇಂದು ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು: ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದು, ದ್ವೇಷ ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಇದನ್ನು ಖಂಡಿಸಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ಜಾರಿ ನಿರ್ದೇಶನಾಲಯ (ED) ಕಚೇರಿಯ ಎದುರು ಬುಧವಾರ ಪ್ರತಿಭಟನೆ ನಡೆಸುವುದಾಗಿ ತಿಳಿಸಿದೆ.
ನ್ಯಾಷನಲ್ ಹೆರಾಲ್ಡ್ನ ಆಸ್ತಿಗಳನ್ನು ಅನಿಯಂತ್ರಿತ ಮತ್ತು ಅನ್ಯಾಯವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿದ್ದು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ವಿರುದ್ಧ “ರಾಜಕೀಯ ಪ್ರೇರಿತ ಆರೋಪಪಟ್ಟಿಗಳನ್ನು” ಸಲ್ಲಿಸಲಾಗಿದೆ ಎಂದು ರೋಪಿಸಿದೆ.
