ಮನಸು ಮೃದಂಗ
(ಲೇಖನಗಳ ಸಂಕಲನ)
ಬಾಲಾ-ಪರಾಧ
ಒಬ್ಬ ಚಿಂತಕ ಅಪರಾಧವನ್ನ ಕುರಿತು ಆಲೋಚಿಸಿದಾಗ ಆತನು ತಿಳಿದುಕೊಳ್ಳುವ ವಿಷಯವೆಂದರೆ; ಒಬ್ಬ ಅಪರಾಧಿಯು ಅಪರಾಧ ಸ್ಥಾನದಲ್ಲಿ ಕಂಡಾಗ ಆ ಅಪರಾಧ ಕೃತ್ಯಕ್ಕೆ ದಂಡಿಸಬೇಕಾ? ಅಥವ ಆ ಕೃತ್ಯದ ಹಿಂದೆ ಅಡಿಗಿರುವ ಆತನ ಇಚ್ಚೆಯನ್ನು ದಂಡಿಸಬೇಕಾ? ಇಲ್ಲೆ ಆ ವೈರುತ್ಯದ ತಳಹದಿ ಅಡಿಗಿರುವದು. ನಮ್ಮ ದಂಡ ಸಂಹಿತೆಯನ್ನ ಅವಲೋಕಿಸಿದಾಗ ನಾವು ಕೊಡುವ ದಂಡ ಶರೀರಕ್ಕೆ ಹೊರೆತು ಮನಸ್ಸಿಗಲ್ಲ. ಹೀಗಿದ್ದಾಗ ಅಪರಾಧಿಯ ಮನಸ್ಸಿಗೆ ಕೊಡುವ ದಂಡದ ಮಾನದಂಡ ಯಾವುದು? ಇಂತಹ ವಿಚಾರ ಮಾನವೀಯತೆ ಹೊಂದಿದ ವ್ಯಕ್ತಿಗೆ ಸಮಾನ್ಯವಾಗಿ ಕಾಡುವ ಪ್ರಶ್ನೆ ಮತ್ತು ಒಗಟಾಗಿ ಆತನ ಮನದಲ್ಲೇ ಉಳಿದುಬಿಟ್ಟಿದೆ. ಮಾನವನ ಮನಸ್ಸು ಹಾಗು ಶರೀರ ಒಂದೆನಿಸಿದರೂ, ಶರೀರ ಮಾತ್ರ ನ್ಯಾಯ ದಂಡನೆಗೆ ಶಕ್ತ. ಆದರೆ ಆತನ ಮನಸ್ಸು ಇಚ್ಚೆ ಆ ದಂಡನೆಗೆ ಅರ್ಹವಾಗಿರುವುದಿಲ್ಲ. ಅಪರಾಧಿಯನ್ನ ದಂಡಿಸುವುದರ ಮೂಲಕ ನಾವು ತಿಳಿದಂತೆ ಅಪರಾಧಿ ಸರಿಯಾಗುತ್ತಾನೆನ್ನುವದು ನಮ್ಮ ಊಹೆಯಷ್ಟೇ. ಆದುದರಿಂದ ಇಲ್ಲಿ ಅಪರಾಧಿಯ ಮನಪರಿವರ್ತನೆಯಸ್ಟೆ ಅತಿ ದೂಡ್ಡ ಮಾನದಂಡ.
ಈ ಅಪರಾಧಿಗಳಲ್ಲಿ ತಮ್ಮ ತಮ್ಮ ನರ ಅಪಕ್ವತೆ ಹಾಗು ನರರಸ ನ್ಯೂನತೆಗಳಿಂದ ಮನೋ ವಿಕಾಸ ಬೇಗ ಆಗುವುದಿಲ್ಲ. ಈ ಕಾರಣಕ್ಕಾಗಿ ಅಪರಾಧಿಗಳ ಬೀಕರ ಕೃತ್ಯಗಳಿಗೆ ಜೀವನ ಪರ್ಯಂತ ಶಿಕ್ಷೆ ಅನುಭವಿಸುತ್ತಾರೆ. ಇದನ್ನು ನಮ್ಮ ಕಾನೂನಿನಲ್ಲಿ ಅನುಮೋದಿಸಿದ್ದರೂ ಕಳವು ವೇಳೆ ವಿರಳದಲ್ಲಿ ಅತಿ ವಿರಳವಾದ ಕೃತ್ಯಗಳಿಗೆ ಅಂದರೆ ಘೋರ ಕೃತ್ಯಗಳಿಗೆ ನಮ್ಮ ನ್ಯಾಯ ಸಂಹಿತೆಯಲ್ಲಿ ಮರಣ ದಂಢನೆ ವಿಧಿಸುವದನ್ನ ಕಾಣಬಹುದಾಗಿದೆ. ಇದರ ಅರ್ಥ ಇಂತಹ ಅಪರಾಧಿಯನ್ನು ಯಾವುದೇ ಪರಿವರ್ತನ ಆಥವ ವಿಕಾಸ ಕಾರ್ಯಗಳಿಂದ ಮಾನವನನ್ನಾಗಿ ಪರಿವರ್ತಿಸಲು ಸಾದ್ಯವಾಗುವುದಿಲ್ಲವೆಂದು. ಕಾರಣ, ಇವರಿಗೆ ಆ ಘೋರ ಕೃತ್ಯಕ್ಕೆ ಮರಣವೆ ಒಳ್ಳೆಯದೇನೋ ಎಂಬ ಅಭಿಪ್ರಾಯ ನಮ್ಮ ಕಾನೂನಿನ ಚೌಕಟ್ಟಿನಲ್ಲಿ ಬಂದಿರಬಹುದು ಎನ್ನುವುದು ನನ್ನ ಅನ್ನಿಸಿಕೆ.
ಇದೇ ವಿಷಯವನ್ನ ಮತ್ತೂಮ್ಮೆ ಅವಲೋಕಿಸಿ ತರ್ಕಿಸಿದಾಗ ಬೀಕರತೆಯ ಅಪರಾಧ ಕೃತ್ಯಗಳಿಗೆ ಅಳತೆ ಮಾಪನವಾದರೂ ಯಾವದು?. ಉದಾಹರಣೆಗೆ ಒಬ್ಬ ವ್ಯಕ್ತಿ ತನ್ನ ವೈಯುಕ್ತಿಕ ಇಚ್ಚೆಯನ್ನ ಇನ್ನೊಬ್ಬರ ವಿರುಧ್ಧವಾಗಿ ನಡೆದು ತನ್ನ ಮನದ ಆಶೆಯನ್ನು ಇಂಗಿಸಿಕೊಂಡು, ಪಶ್ಚಾತ್ತಾಪ ಪಟ್ಟು ಮತ್ತೆ ಅವನೆ ತನ್ನ ಅಪರಾದವನ್ನ ತಿಳಿದು ಆಘಾತಕ್ಕೆ ಒಳಗಾಗುವದು.
ಮತ್ತೊಂದು ಒಂದು ಅಪರಾಧ ಘಟನೆಯನ್ನು ಪ್ರಮಾಣೀಕರಿಸಬಹುದೆಂಬ ಭಯದಿಂದ, ನ್ಯಾಯಾಲಯದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ, ಆಕೆಯನ್ನು ಸಂಹರಿಸದನು ಅಂದುಕೊಳ್ಳೋಣ. ಇಂತಹ ಸ್ಥಿತಿಯಲ್ಲಿ ವೈರುತ್ಯದ ಬಗ್ಗೆ ಸಿದ್ದಾಂತಿಸುವಾಗ ಮಾನವ ಹಕ್ಕು ಪ್ರತಿಪಾದಿಸುವವನಿಗೆೆ ಅವನ ಇಚ್ಚೆ ಮುಖ್ಯವಾದರೆ ಸಮಾಜ ಮುಖಿಗೆ ಸಾಮಾಜಿಕ ಸಕರಾತ್ಮಕ ದೃಷ್ಠಿಕೋನಗಳು ಅತಿ ಮುಖ್ಯ. ಈ ತರ್ಕ ನಿಜವಾದರೆ ಮಾನವ ಹಕ್ಕುದಾರನಿಗೆ ಈತನ ಕೃತ್ಯ ಅಪರಾದಮುಕ್ತ. ಆದರೆ ಅದೇ ಕೃತ್ಯ ನಮ್ಮಲ್ಲಿ ಹಿಂದಿನಿಂದಲೂ ಬಂದಂತಹಾ ಸಮಾಜದ ಚೌಕಟ್ಟಿನಲ್ಲಿ ಅಪರಾದದ ಕೃತ್ಯ ಎಸಗಿದವನು ನಿಜವಾದ ಅಪರಾಧಿ. ಈ ಸಿದ್ದಾಂತವನ್ನು ವಿಶ್ಲೇಷಿಸಿ ನೋಡಿದಾಗ ಅಥವ ಈ ಸಂಘರ್ಷಣೆಯನ್ನ ಕಂಡು ವಿಮರ್ಶಿಸಿದಾ ನಾವು ಎರೆಡು ಅವಸ್ಥೆಗಳನ್ನ ಕಾಣಬಹುದು.
ಮೊದಲನೆಯದು; ಮಾಡಿದ ಅಪರಾದಕ್ಕೆ ನಿರಪರಾಧಿ ಎಂದು ಬಿಡುಗಡೆಯಾಗಬಹುದು, ಮತ್ತೊಂದು ಸುದಾರಿಸಲಾಗದ ಅಪರಾಧಿಯೆಂದು ಘೋಷಿಸಬಹುದು. ಒಟ್ಟಾರೆ ಪ್ರಜಾಪ್ರಭುತ್ವದ ಆಳದಲ್ಲಿ ಇವರೆಡು ಸಾದ್ಯವಾಗುವದರಿಂದ ಚಿಂತನಾ ಮನೋಭಾವುಳ್ಳವನಿಗೆ ನ್ಯಾಯ ದೇವತೆಯನ್ನು ನಂಬಬಹುದೇ? ಎನ್ನುವ ಪ್ರಶ್ನೆ ಸಹಜವಾಗಿ ಕಾಡುವದು ಸತ್ಯ. ಹಾಗಿದ್ದರೆ ಯಾವುದು ಕೆಟ್ಟದ್ದು? ಕೆಟ್ಟದ್ದು ಮತ್ತು ಅಪರಾದಕ್ಕು ಇರುವ ವ್ಯತ್ಯಾಸವಾದರೂ ಏನು? ‘ಅಪರಾಧ’ ಕೃತ್ಯವಾದಲ್ಲಿ ಅದರ ಹಿಂದೆ ಅಡಿಗಿರುವ ಇಚ್ಚೆಯನ್ನ ಕೆಟ್ಟದ್ದೆನ್ನಬಹುದೆ? ಕ್ರಿಯೆ ಕೃತ್ಯ ಆದರೆ, ಅದೆ ಇಚ್ಚೆ ಕೆಟ್ಟದ್ದಾ? ಮೊದಲನೆಯ ನಡವಳಿಕೆಯು ಸಮಾಜ ಧರ್ಮಕ್ಕೆ ಸೆರಿದ್ದು, ಎರಡನೆಯದು ಮನೂ ಧರ್ಮಕ್ಕೆ ಸೆರಿದ್ದು. ಸಮಾಜದ ದೃಷ್ಠಿಯಲ್ಲಿ ವ್ಯಕ್ತಿಯ ನಡುವಳಿಕೆ ಮಾನದಂಡವಾದರೆ ಮನಸ್ಸಿನ ಲೆಕ್ಕಾಚಾರದಲ್ಲಿ ಯೋಚನೆಯೇ ಮಾನದಂಡ.
ನಮ್ಮ ನಡವಳಿಕೆಗಳ ಆದಾರದ ಮೇರೆಗೆ ನೀತಿ ಸಂಹಿತೆಗಳನ್ನ ಅಳವಡಿಸುವ ನಾವು ನಮ್ಮ ಕೆಟ್ಟ ಯೋಚನೆಗೆ ದಂಡ ಸಂಹಿತೆಗಳ ಅಡಿ ದಂಡ ಅರ್ಹವಲ್ಲವೇ? ಇದ್ದರೂ ಪ್ರಮಾಣಿಕರಿಸುವುದು ಹೇಗೆ? ಕೆಟ್ಟದ್ದು ಯಾವತ್ತೂ ವಿಚಾರವಷ್ಟೆ, ಆಚಾರಗಳಲ್ಲ. ಹೀಗಿದ್ದಾಗ ಪಾಪ ಮತ್ತು ಕೆಟ್ಟದ್ದರೆಡು ಒಂದೆಯೇ? ಪಾಪ ದೇವರಿಗೆ ಸೇರಿದ್ದ ಅಥವ ಮಾನವನಿಗೆ ಸೇರಿದ್ದ ಅನ್ನುವ ಅನುಮಾನಗಳು ಕಾಡುತ್ತವೆ. ಕಾರಣ, ಪಾಪ ಅಂದರೆ ದೇವರ ವಿರುದ್ದ ಎಂದು ನಮ್ಮ ಸಂಸ್ಕೃತಿ ಆನಾದಿ ಕಾಲದಿಂದಲೂ ತಿಳಿಸಲ್ಪಟ್ಟಿರುವ ವಿಷಯ.
ಕರ್ಮ (ಪೊರ್ವಜರು ಮಾಡಿದ್ದಾರೆನ್ನುವ ಪಾಪಗಳ ಅಕೌಂಟ್) ಸಿದ್ಧಾಂತ ಅಂದರೆ ಇದೇ ಅಲ್ಲವೇ? ದೇವರು ಇದ್ದಾನೆ ಎನ್ನುವುದಾದರೆ ದುಷ್ಟನಿಗೆ ಶಿಕ್ಷೆ ಆಗಬೇಕಲ್ಲವೆ? ನಾನಂತೂ ಈ ದೇವರು ಕೊಡುವ ಶಿಕ್ಷೆ ಕಂಡಿಲ್ಲ, ಆದುದರಿಂದ ಎಲ್ಲರೂ ಒಳ್ಳೆಯವರೆನ್ನೋಣವೆ?. ಹೌದು, ನನ್ನ ಪ್ರಕಾರದಲ್ಲಿ ಹುಟ್ಟಿದ ಸಮಸ್ತ ಜೀವ ಜಂತುಗಳು ಒಳ್ಳಯವೆ ಆದರೆ ಕಂಡರಿಯದ ಮಾಯೆಯ ಜೊತೆ ಸೇರಿ ಅವುಗಳ ಜೀವ ಕೆಟ್ಟದಾಗಿ ಬಿಡುತ್ತವೆ. ಪ್ರಾಣಿಗಳು ತನ್ನ ಹಸಿವು ಹಾಗು ಕುಲೋದ್ದಾರಕ್ಕೆ ಮಾತ್ರ ಸೀಮಿತವಾದರೆ ಮಾನವನು ಮಾನವಿಯತೆಯನ್ನು ತೊರೆದು ಪ್ರಾಣಿಗಳಿಗಿಂತ ಕೀಳಾಗುತ್ತಿದ್ದಾನೆನ್ನುವದು ವಿಷಾದನೀಯ.
ಇಂತಹ ಅನೇಕ ಸೈದ್ದಾಂತಿಕ ವಿಷಯಗಳನ್ನು ಹನ್ನೂಂದನೆ ಶತಮಾನದಲಿ ಪ್ರಸ್ಥಾಪಿಸಿದ್ದ ತತ್ವ ಜ್ಞಾನಿ “ಅಬೆಲಾರ್ಡ”. ಈ ತರ್ಕವನ್ನು ತರ್ಕಿಸಲ್ಪಟ್ಟರು ಅನೇಕರಿಂದ ವಿರುದ್ದವಾದ ವಾದವೆ ಹೆಚ್ಚಾಗಿ ಕೊನೆಗೆ Circo ತತ್ವಜ್ಞಾನಿಯ ತತ್ವ ಕಟ್ಟಪಾಡಿಗೆ ಅಬೆಲಾರ್ಡ ಮಾರು ಹೋಗಬೇಕಾಯಿತು. “ಪಾಪ” ಮತ್ತು “ಅಪರಾದ”ಗಳನ್ನ ಮೂಲ ಮೌಲ್ಯ ಚಿಂತನದೊಳಗೆ ಅಳವಡಿಸಿ ಸೃಜನಶೀಲ ತಳಹದಿಯ ಅಡಿಯಲ್ಲೆ ಬಗೆಹರಿಸಬಹುದೆನ್ನುವ ವಿಚಾರ ಮಂಡಿಸಿ ಅಬೆಲಾರ್ಡ ಬಚಾವ್ ಆದರೆನ್ನುವದು ಇತಿಹಾಸ. ನಾವು ದಿನ ನಿತ್ಯ ಅಕ್ಷರ ಮಾಧ್ಯಮ ಹಾಗು ದೃಶ್ಯ ಮಾಧ್ಯಮಗಳಲ್ಲಿ ಬಾಲಾಪರಾದವನ್ನ ಪ್ರಮಾಣೀಕರಿಸದೆ ಕೇಳುತ್ತಿದ್ದೇವೆ, ಓದುತ್ತಿದ್ದೇವೆ ಹಾಗು ನೋಡುತಿದ್ದೇವೆ. ಇಂತಹ ವಿಷಯಗಳು ಪ್ರಶ್ನಾರ್ಹ ಹಾಗು ತರ್ಕಾರ್ಹಗಳಾಗಿಬಿಟ್ಟಿವೆ.

ಪರಂಪರಾ ಭಾವವುಳ್ಳ ನಾವುಗಳು ಬಾಲಾವಸ್ಥೆಯ ಮುಗ್ದತೆಯನ್ನು ನೆನೆದು ಮಕ್ಕಳನ್ನ ದೇವರೆಂದು ಭಾವಿಸುತ್ತೇವೆ. ಈ ವಿಷಯವಾಗಿ ನಾನು ಹಿಂದೆ ಬರೆದಂತಹ ಇಂಗ್ಲಿಷ್ ಪುಸ್ತಕ “PARIVARTHANA” ” ದಲ್ಲಿ WHERE IS LORD THIMMAPPA” ಲೇಖನದಲ್ಲಿ ವಿಸ್ತಾರವಾಗಿ ಮಕ್ಕಳು ಯಾಕೆ ದೇವರಾಗುತ್ತಾರೆನ್ನುವದನ್ನ ತಿಳಿಸಿರುವೆನು. ಇಲ್ಲಿ ಚರ್ಚಿಸಬೇಕಾಗಿರುವ ವಿಷಯ ಇದಲ್ಲ. ಇಂದಿನ ಯಾಂತ್ರಿಕ ಜಗತ್ತಿನಲ್ಲಿ ಮಕ್ಕಳು ಮಾಡುತ್ತಿರುವ ಘೋರ ಅಪರಾದ ಕೃತ್ಯಗಳನ್ನು ನಮ್ಮ ಆನಾದಿ ಕಾಲದಿಂದ ಬಂದ ಮನು ಸಂಹಿತೆಯಲ್ಲಿ, ನಾವು ಕಂಡುಕೊಂಡ ಸಂಹಿತೆಯಲ್ಲಿ ಮತ್ತು ನಾವು ನಮ್ಮ ಸಮಾಜದ ಹಿತಕ್ಕೆ ಅನುಗುಣವಾಗಿ ಮಾಡಿಕೂಂಡ ಕಾನೂನಿನಲ್ಲಿ ಬಾಲಾಪರಾದ ಅಪರಾದವಲ್ಲವೆಂಬುದು ಗೋಚರವಾಗುತ್ತದೆ. ಆದರೆ ಇಂದು ಈ ವಿಷಯ ಬಹೃತ್ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ. ಇಂತಹ ಸಾಂದರ್ಭಿಕ ವಿಷಯಗಳಿಗೆ ತಕ್ಕಂತೆ ಪ್ರಪಂಚದಲ್ಲಿ ಆಯಾ ದೇಶದ ಮನೂ ಧರ್ಮ ಹಾಗು ಸಮಾಜದ ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಆ ದೇಶದ ಪ್ರಾರಂಭಿಕ ಕಾನೂನಿಗೆ ಆಗಾಗ್ಗೆ ತಿದ್ದುಪಡೆಯ ವಿಧೇಯಕಗಳನ್ನು ಅಂಗೀಕರಿಸುತ್ತಿರುವದನ್ನ ನಾವು ಗಮನಿಸುತಿದ್ದೇವೆ. ಕೆಲವು ದೇಶಗಳಲ್ಲಿ ಪ್ರಬುದ್ದ ಪೂರ್ವ ಯುವಕರನ್ನು ಬಾಲಕೃಷ್ಣನಂತಯೇ ಇನ್ನೂ ನೋಡುತ್ತಿದ್ದಾರೆ.
ಇಂದಿನ ಸಾಮಾಜಿಕ ಕೌಟುಂಬಿಕ ವ್ಯವಸ್ಥೆಯು ಕುಬ್ಜವಾಗುತ್ತಿರುವುದರಿಂದ ಮಕ್ಕಳ ಬಗ್ಗೆ ಪೋಷಕರ ಉತೃಷ್ಟ ಪ್ರೀತಿ ಹಾಗು ಮುದ್ದಿನಿಂದ ಇಂತಹ ಅನೇಕ ಆಗಬಾರದ ಅಪರಾದ ಕೃತ್ಯಗಳಿಗೆ ಸಹಕಾರವಾಗುತ್ತಿದೆ ಎನ್ನುವುದು ಕೆಲವರ ವಾದ. ತೀರಾ ವೇಗದಲ್ಲಿ ಯಾಂತ್ರಿಕ ಬೆಳವಣಿಗೆ, ಸ್ವಚ್ಚಾಕಾರ, ಕಷ್ಟವಿಲ್ಲದ ಆರ್ಥಿಕ ವ್ಯವಸ್ಥೆ ಸಹ ಇಂತಹ ಕೃತ್ಯಗಳಿಗೆ ಪೂರಕ ಸಾಧ್ಯ
ಸಂವಿಧಾನವು ಬಾಲಾವಸ್ಥೆಯನ್ನು ಹದಿನೆಂಟು ವರ್ಷಗಳಿಗೆ ನಿಗದಿಪಡಿಸಿದೆ. ಆದರೆ ನಾಗರಿಕರು ಈ ವಯಸ್ಸನ್ನು ಹದಿನಾರಕ್ಕೆ ಇಳಿಸಬೇಕು ಎಂದು ಒತ್ತಾಯಿಸುತಿದ್ದಾರೆ. ಮನವ ಹಾಗು ಮಾನಸಿಕ ಹಕ್ಕನ್ನು ಪ್ರತಿಪಾದಿಸುವ ವ್ಯಕ್ತಿನಿಷ್ಟ ಅನುಯಾಯಿಗಳು ಮುಗ್ದತೆಯ ಕನ್ನಡಿಯನ್ನ ತೋರಿಸಿ ವಯಸ್ಸನ್ನು ಕಡಿಮೆ ಮಾಡಬಾರದು ಎಂದು ಹೇಳಿಕೆ ಕೊಟ್ಟಿರುವರು. ಈ ವಿಷಯ ಸಂವಿಧಾನ ಹಾಗು ಕಾನೂನಿನ ಚೌಕಟ್ಟಿನ ಮದ್ಯೆ ತೂಗುಕತ್ತಿಯಂತೆ ನೆತಾಡುತ್ತಿದೆ. ಕಾರಣ, ಅಪರಾಧತೆಯು ಇಚ್ಚೆ(ಮುಗ್ದತೆ) ಮತ್ತು ಕೃತ್ಯ(ಘೋರತೆ)ಕ್ಕೆ ತದ್ವಿರುದ್ದವಾದ್ದರಿಂದ ವಯಸ್ಸನ್ನು ಇಳಿಸಬೇಕೆ ಅಥವ ಬೇಡವೇ? ಎನ್ನುವ ವಿಚಾರದಲ್ಲಿ ಸಂವಿಧಾನ ಹಾಗು ಸರ್ವೋಚ್ಚ ನ್ಯಾಯಾಲಯ ಸಂದಿಗ್ನ ಪರಿಸ್ಥಿತಿಯಲ್ಲಿಯೇ ಇದೆ. ಈ ದೃಷ್ಠಿಯನ್ನು ಮನಗಂಡು ಬಾಲಪರಾಧವನ್ನು ಶಿಕ್ಷೆಗೆ ಒಳಪಡಿಸದೆ ಅವರ ಮನಸನ್ನು ಪರಿವರ್ತಿಸಬೇಕೆನ್ನುವುದು ಮಾನವ ಹಕ್ಕು ಹೋರಾಟಗಾರನ ಕೂಗಾಗಿದೆ.
ಹುಟ್ಟಿದ ಮಗುವನ್ನು ನಾವು ದೇವರೆಂದು ಭಾವಿಸುತ್ತೇವೆ. ಈ ಮಗು ಬೆಳೆಯುತ್ತಾ ಅನೈಸರ್ಗಿಕ ಬಣ್ಣದ ಮಾಯೆಯ ಜೊತೆ ಬೆರತು ವ್ಯವಹಾರವನ್ನು ಬಯಸಿ ತನ್ನ ಷಡ್ ಐಶ್ರ್ಯಗಳನ್ನು ವೃದ್ದಿಸಿಕೊಂಡು ಶಕ್ತಿಭಲ ಪಡೆಯುವದರಿಂದ ಆದರ್ಶವನ್ನು ಮೂಲೆಗುಂಪಾಗಿಸಿ ಕೂನೆಗೊಮ್ಮೆ ತಾನೆ ಧರ್ಮನಿಷ್ಠೆ ಕಾಣದೆ ಅಪರಾಧಿ ಆಗುತ್ತಾನೆ. ಪ್ರಬುದ್ಧ ಹೀನರ ಕೃತ್ಯದ ಘೋರತೆಯನ್ನು ನ್ಯಾಯಲಯ ಸಾಕ್ಷಿ(ಇದ್ದರೆ) ಮೂಲಕ ಅಳೆದು ಅಪರಾಧಿ ಎಂದು ತೀರ್ಮಾನಿಸಿ ನ್ಯಾಯಾಧೀಶರು ಆತನನ್ನು ಕಾರಾಗೃಹಕ್ಕೆ ತಳ್ಳುವರು.
ಮಾನವೀಯ ದೃಷ್ಠಿ ಮಾಪನದಡಿ ನೇಣಿನ ಶಿಕ್ಷೆಯನ್ನು ಸಡಿಲಿಸುತ್ತಿರುವರು. ಈ ವಿಷಯಗಳನ್ನು ಅರಿತ ನಾವು ಈ ಹಿಂದೆ ಇದ್ದ ಬಾಲ ಶಿಷ್ಟಾಚಾರ ಮತ್ತು ಇಂದಿನ ಬಾಲ ಚೇಷ್ಠಾಚಾರಗಳ ಬಗ್ಗೆ ಹೋಲಿಸುವ ಪ್ರಯತ್ನದಲ್ಲಿ ಹಿಂದಿದ್ದ ತಾಯಿ ಹಾಗು ಗುರುವಿನ ಮಮೆತಗಳಿಂದ ಪಡೆದ ಆದರ್ಶ ಮತ್ತು ಜ್ಞಾನದಿಂದ ಮಕ್ಕಳ ವಿಕಾಸಕ್ಕೆ ಪೂರಕವಾಗಿದ್ದವು ಎಂಬುದನ್ನು ಮರೆತಿದ್ದೇವೆ. ಸ್ನೇಹ ಮತ್ತು ಬಂದುನಿಷ್ಟೆಗಳು ಯಾವಾಗುಲೂ ಅವಿಭಾಜ್ಯ ಅಂಗಾವಾಗಿಯೆ ಕಾಣುತಿತ್ತು. ಅಹಾರ ನೈಸರ್ಗಿಕದಿಂದ ಕೂಡಿದ್ದು ಆಟೋಟಗಳಿಂದ ಮನಸ್ಸು ಅಹ್ಲಾದಿಂದ ಮೆರೆದು ಶರೀರ ಸುದೃಡವಾಗಿರುತಿತ್ತು. ಆದರೆ ಇಂದಿನ ಯಾಂತ್ರಿಕ ಜೀವನದ ಬೇಗೆಯಿಂದ ಮಗುವಿಗೆ ತಾಯಿಯ ಪರಿವೆಯೇ ಇಲ್ಲದಾಗಿದೆ, ಗುರು ವ್ಯಾಪರಸ್ಥನಾಗಿದ್ದಾನೆ, ಸ್ನೇಹ ತನ್ನ ಪಾವಿತ್ರತೆಯನ್ನು ಕಾಪಾಡುಕೊಳ್ಳುವದರಲ್ಲಿ ವಿಫಲವಾಗಿದೆ, ಬಂಧುಗಳು ಬೇಡವಾಗಿದ್ದಾರೆ ಹಾಗು ಕ್ರೀಡೆಗಳು ವಾಣಿಜ್ಯ ಪಥದಲ್ಲಿ ಸಾಗಿದೆ. ಇಂತಹ ಸಂದರ್ಭದಲ್ಲಿ ಮಕ್ಕಳ ಮನಃಸ್ಥಿತಿಯನ್ನು ನಾವುಗಳು ತಿಳಿಯಾಗಲಾರದೆ ಪರಿತಪಿಸುತಿದ್ದೆವೇ.

ಈ ವೇಗದ ಬದುಕಿನಲ್ಲಿ ಸಮಯ, ಸಂಯಮ ಮತ್ತು ತಾಳ್ಮೆ ಕೊರತೆಗಳಿಂದ ವೃತ್ತಿಯ ನಿಷ್ಟೆ ಮರೆತು ಕೆಟ್ಟ ಮನೋ ಧರ್ಮವನ್ನು ಬೆಳೆಸಿಕೊಳ್ಳುತ್ತಿದ್ದೇವೆ. ಹೀಗಿರುವಾಗ ಬಾಲಕರು ಹಾಗು ಯುವಕರು ಯಾವ ನೀತಿ ಪಾಠವನ್ನು ಕಲಿಯಬಲ್ಲರು? ಇಂದಿನ ತಾಂತ್ರಿಕ ಹಾಗು ಮುಕ್ತ ಜೀವನದಲ್ಲಿ ಆಗಾಗ ಅಂತರ್ಜಾಲದಲ್ಲಿ ಕಾಮ ಕೇಳಿಯ ಬಿಂಬ ಹಾಗು ಸಿನಿಮಾವನ್ನು ಜಾಲಾಡುವ ಬಾಲಕರು ಕಾಮವಿಕೃತವಲ್ಲದೆ ಸಹಜ ಪ್ರೀತಿ ಮತ್ತು ಪ್ರೇಮವನ್ನು ಕಾಣಲು ಸಾದ್ಯವೇ? ನಮ್ಮ ಮುಕ್ತ ಜೀವನ ಶೈಲಿಯಡಿ ಕಾಮವು ಅಭಿವಾಜ್ಯ ಅಂಗ ಹಾಗು ನೈಸಿರ್ಗಿಕ ಕೂಡ ಆದರೆ ವಯಸ್ಸಿಗೆ ಸರಿಯಾಗಿ ಅದನ್ನು ಅಳವಡಿಸಿದಾಗ ಮಾತ್ರ ನೈಸಿರ್ಗಿಕ. ಅಪ್ರಾಪ್ತ ವಯಸ್ಸಿನಲ್ಲಿ ಕಾಣದೆ ಇರುವದನ್ನ ಕಾಣುವ ಆಸೆ, ಕಂಡಾಗ ಈಡೇರಿಸಿಕೊಳ್ಳುವ ಬಯಕೆ. ಆದರೆ ಸಮಾಜದ ಭಯ. ಆದುದರಿಂದ ಅವರ ಸೃಜನ ಶೀಲ ಮತ್ತು ಮುಗ್ದತೆಗಳು ಗೀಳಿನಿಂದ ಮತ್ತು ಮಾದಕ ದ್ರವ್ಯಗಳಿಗೆ ಮಾರುಹೋಗಿ ಅನಾಹುತಗಳನ್ನ ಸೃಷ್ಟಿಸಿ ಪಡಬಾರದ ಕಷ್ಠವನ್ನ ಅನುಭವಿಸುತ್ತಿರುವರು.
ಇಂತಹ ನೂರಾರು ಮಾಯೆಗಳಿಗೆ ಹಾಲಿನಂತ ಮಕ್ಕಳ ಮನಸ್ಸು ವಿಷವಾಗುವದರಲ್ಲಿ ಸಂದೇಹವಿಲ್ಲ. ಈ ಅನೇಕ ಕಾರಣಗಳಿಂದ ಮಕ್ಕಳ ಮುಗ್ದತೆ ಮಾಯವಾಗಿರುವದರಿಂದ ಪರಿಣಿತರು, ಸಂವಿಧಾನ ಹಾಗು ಸಂತ್ರಸ್ಥರುಗಳ ಕೂಗು ಬಾಲಪರಾಧದ ವಯಸ್ಸನ್ನು ಕಮ್ಮಿ ಮಾಡಬೇಕೆನ್ನವುದು. ಅಂದರೆ ನಾವು ವಿಮರ್ಶಿಸಬೇಕಾದ ವಿಷಯ, ಮಕ್ಕಳ ಇಚ್ಚಾ ಮನೋಭಾವ ಕಲ್ಮಶಗೊಂಡಿರುವದರಿಂದ ಮಕ್ಕಳ ಅಪರಾಧ ಕೃತ್ಯ ದಂಡ ಸಂಹಿತೆಯಲ್ಲಿ ದಂಡವನ್ನ ವಿಧಿಸಬೇಕನ್ನುವುದು. ಪರಿವರ್ತನೆ ಸಾದ್ಯವಿದ್ದರೂ ಪ್ರಪಂಚವನ್ನ ತಿದ್ದಲು ಸಾದ್ಯವಾಗದೇ ಇರುವದರಿಂದ ಮಕ್ಕಳು ಮಾಡುವ ಅಪರಾಧಗಳಿಗೆ ಸರಿಯಾದ ದಂಡವನ್ನ ವಿದಿಸಬೇಕು ಹಾಗು ಅಂತಹ ಮಕ್ಕಳ ಪೋಷಕರ ಮನೋ ಚಿಂತನಾ ವ್ಯವಸ್ಥೆಯನ್ನು ಮನಗಾಣಬೇಕೆನ್ನವುದು ನನ್ನ ವಾದ.
ಕೆಲವೊಮ್ಮೆ ಅಪ್ರಾಪ್ತ ವಯಸ್ಕರ ವ್ಯಭಿಚಾರದಂತಹ ಪ್ರಕರಣಗಳನ್ನು “ಆಕ್ಸಿಡೆಂಟ್ (ACCIDENT)” ” ಎಂದು ತಳ್ಳಿಹಾಕುವರು. ಇದನ್ನು ಆಘಾತವೆಂದು ಸಹಾ ಕರೆಯಬಹುದು. ಈ ಪದದ ಅರ್ಥ, ಸಹಜ ವಾಸ್ಥವ ಸ್ಥಿತಿಯಲ್ಲಿ ಇಲ್ಲದ ಹಾಗು ಗೋಚರಿಸದೆ ಇರುವ ವಸ್ತು ಗೋಚರಿಸಿಕೂಳ್ಳುವುದು ಮತ್ತು ಅನಿರೀಕ್ಷಿತ ಘಟನೆ ನೆಡೆಯುವುದನ್ನ ಅಘಾತವೆಂದು ಕರೆಯಬಹುದು. ಯಾವುದೆ ಸಂದರ್ಭದಲ್ಲಿ ಒಬ್ಬ ಚಾಲಕನ ಇಚ್ಚೆ ಎಂದು ಅಪಘಾತ ಬಯಸುವುದಿಲ್ಲ, ಅಪಘಾತಗಳು ಆತನ ನಿರ್ಲಕ್ಷೆ ಮತ್ತು ರಹದಾರಿಗಳ ತಪ್ಪಿನಿಂದ ಆಗುತ್ತವೆ. ಇಲ್ಲಿ ಅಧಿಕವಾದ ಸಾಕ್ಷಿ ಪ್ರಜ್ಞೆಯೇ ಮಾನದಂಡವಾಗಿ ಇರುತ್ತದೆ. ಈ ಪ್ರಜ್ಞೆ ಕಡಿಮೆ ಆದಂತೆ ಅನಾಹುತ ಬೆಳೆಯುತ್ತಾ ಸಾಗುತ್ತದೆ.
ಯುವಕರಲ್ಲಿ ಈ ಆತ್ಮಪ್ರಜ್ಞೆ ಇಲ್ಲವಂತಲ್ಲ ಆದರೆ ಅದನ್ನು ಅದುಮಿಡುವ ಪ್ರಯತ್ನಗಳೇ ಹೇರಳ. ಗೀಳು, ಮಧ್ಯವ್ಯಸನ, ಮಾದಕ ದ್ರವ್ಯಗಳ ಚಟದಿಂದ ಹಾಗೂ ಅಹಂಭಾವನೆಗಳಿಂದ ಅತೀ ಘೋರ ಕ್ರತ್ಯಗಳು ನಡೆದು ಹೋಗಿಬಿಡುತ್ತವೆ. ಈ ಕಾರಣದಿಂದಲೆ ಬಾಲಕರಲ್ಲಿ ಮತ್ತು ಯುವಕರಲ್ಲಿ ಅವರವರ ಆತ್ಮ ಮತ್ತು ಸಾಕ್ಷಿಪ್ರಜ್ಞೆಗಳನ್ನು ತುಂಬುವ ಪ್ರಯತ್ನಗಳು ನಮ್ಮಿಂದ ಆಗಬೇಕಾಗಿವೆ. ಈ ನಿಟ್ಟಿನಲ್ಲಿ ನಮ್ಮ ಸಂವಿಧಾನ ರೂಪರೇಷೆಗಳನ್ನ ಸಿದ್ದಪಡಸಿ, ನಾವು ನಮ್ಮ ಕೈಗೆ ಎಟುಕುವಂತಹ ರೀತಿಯಲ್ಲಿ ವಿದ್ಯೆ, ನಮ್ಮಿಂದಾಗುವ ಅಂತರ್ಜಾಲ ನಿಯಂತ್ರಣ, ಒಳ್ಳೆ ಸಂಸ್ಕಾರ, ನಮ್ಮ ಸಂಸ್ಕೃತಿಗಳ ಆಚಾರ ಮತ್ತು ವಿಚಾರಗಳ ತಿಳುವಳಿಕೆ ಮತ್ತು ಉತ್ತೇಜನ ಕೊಡುವದರಲ್ಲಿ ಸಫಲವಾದರೆ ಮತ್ತು ಸರಿಯಾದ ಕಾನೂನಿನ ವ್ಯವಸ್ಥೆ, ಮನಸ್ಸನ್ನು ಉತ್ತೇಜಿಸುವ ದ್ರವ್ಯಗಳಿಗೆ ಮತ್ತು ಸವಲತ್ತುಗಳಿಗೆ ಕಡಿವಾಣ ಹಾಕಿದರೆ ಇಂತಹ ಅನೇಕ ಪ್ರಕರಣಗಳನ್ನು ತಡೆಗಟ್ಟಬಹುದು. ಸಮಾಜ, ಮಾನವೀಯತೆ ಮತ್ತು ಪ್ರಜಾಪ್ರಭುತ್ವಗಳ ದೃಷ್ಠಿ ಸಕಾರತ್ಮಕಗಳಾದರೆ ಇನ್ನೂ ಒಳ್ಳೆಯದು.
– ಡಾ|| ಎ.ಎಂ. ನಾಗೇಶ್
ಖ್ಯಾತ ಮನೋವೈದ್ಯ


[…] ಬಾಲಾಪರಾಧ – ಮನಸು ಮೃದಂಗ (ಲೇಖನಗಳ ಸಂಕಲನ) […]