ಮನಸು ಮೃದಂಗ
(ಲೇಖನಗಳ ಸಂಕಲನ)
ಕಣ್ಣೀರಿಗೆ ಬಣ್ಣವಿದ್ದಿದ್ದರೆ…
ಒಮ್ಮೆ ನಗರದಲ್ಲಿ ಸ್ನೇಹಿತನ ಮನೆಯನ್ನು ಹುಡಿಕಿ ಹೊರಟೆ. ಸ್ನೇಹಿತ ವಿಳಾಸ ಕೊಟ್ಟಿದ್ದರೂ ಮನೆ ಹುಡುಕುವದು ಕಷ್ಟವಾಗಿತ್ತು. ಬೆಳಿಗ್ಗೆ ಹೊರಟ ನಾನು ಸ್ನೇಹಿತನ ಮನೆ ಕಂಡಿದ್ದು ಮಧ್ಯಾಹ್ನ. ನನಗೆ ಆಶ್ಚರ್ಯವೆಂದರೆ ಮನೆಯ ಮುಂಬಾಗಿಲು ದೊಡ್ಡದಾಗಿ ತೆರೆದಿದೆ, ಬೆಲ್ ಮಾಡಿದೆ, ಕೋಗಿದೆ, ಹೆಸಿರಿಟ್ಟು ಕರೆದೆ, ಕದ ತಟ್ಟಿದೆ ಆದರೆ ಯಾರು ಹೊರ ಬರಲೇ ಇಲ್ಲ. ಹತ್ತು ನಿಮಿಷ ನಂತರವು ಯಾರ ಸದ್ದು ಇರಲಿಲ್ಲ.
ಅಡಿಗೆ ಮನೆಯಲ್ಲಿ ಶಬ್ದ ಕೇಳುತ್ತಿದೆ, ರೂಮಿನಲ್ಲಿ ಹಾಡಿನ ಶಬ್ದವಿದೆ, ಹಾಲ್ನಲ್ಲಿ ನಲವತ್ತೆರಡು ಇಂಚಿನ ಟಿವಿ ಮಾತ್ರ ಕನ್ನಡ ಹಾಡಿನಿಂದ ಶಬ್ದ ಮಾಡುತ್ತಿತ್ತು. ಇನ್ನೇನು ನಾನು ಹೊರ ಬಂದು ಸ್ನೇಹಿತಿನಿಗೆ ಮತ್ತೆ ಕರೆ ಮಾಡಬೇಕು ಎನ್ನವುದೊರಳಗೆ ಮಧ್ಯ ವಯಸ್ಸಿನ ಸ್ನೇಹಿತನ ಅತ್ತಿಗೆ ನನ್ನನ್ನು ಗುರುತಿಸಿ ಒಳ ಕರೆದು ಸೋಫಾ ಮೇಲೆ ಕೂರಲು ಸೂಚಿಸಿದರು. ಆಸಿನನಾದ ನಾನು ಆಕೆಗೆ ಕೇಳಿದ ಮೊದಲ ಪ್ರಶ್ನೇ “ಮನೆಯವರೆಲ್ಲಾ ಎಲ್ಲಿ ಹೋಗಿದ್ದಾರೆ” ಎಂದು. ಅದಕ್ಕೆ ಆಕೆಯ ಉತ್ತರ “ನಮ್ಮ ಮನೆಯಲ್ಲಿ ಬೆಳಿಗ್ಗೆ ಆರು ಘಂಟೆಗೆ ಟಿವಿ ಚಾಲು ಮಾಡಿದರೆ ರಾತ್ರಿ ಹನ್ನರಡು ಘಂಟೆಗೆ ಬಂದ್ ಮಾಡುವುದು” ಎಂದರು. ಅವರ ಹೇಳಿಕೆ, ಎಲ್ಲಾ ಮನೆಯಲ್ಲೇ ಇದ್ದರೂ ಟಿವಿ ಶಬ್ದದಿಂದ ಯಾರು ಎಲ್ಲಿ ಇದ್ದಾರೆ ಎಂದು ತಿಳಿಯುವುದಿಲ್ಲ ಎನ್ನುವಹಾಗಿತ್ತು. ಮತ್ತು ಅವರು
“ಇಷ್ಟು ಶಬ್ದವಿಲ್ಲದೇ ಇದ್ದರೆ ಯಾರಿಗು ಈ ಮನೆಯಲ್ಲಿ ಕೆಲಸ ಮಾಡಲು ಮೂಡ್ ಇರುವುದಿಲ್ಲ” ಎಂದರು. ಅವರ ಮಾತನ್ನು ಕೇಳಿದ ನನಗೆ ಬೇರೆ ಯಾರಿಗಾದರು ಮೊದಲೆ ಗೊತ್ತಾಗಿದ್ದರೆ ಅವರ ಅಂಗಳದಲ್ಲಿ ಇಟ್ಟದ್ದ ಬೆಳೆಬಾಳುವ ವಸ್ತುಗಳು ಕಳವು ಆಗುತ್ತಿದ್ದವೇನೊ. ಹೌದು ಓದುಗರೆ ಇಂದಿನ ನಮ್ಮ ತಾಂತ್ರಿಕ ಹಾಗು ಯಾಂತ್ರಿಕ ಬದುಕಿಗೆ “ಟಿವಿ” ಎಂಬುದು ಮನೆಗೆ ಒಂದು ಅವಿಭಾಜ್ಯ ಅಂಗವಾಗಿದೆ. “ನಿಮ್ಮ ಮನೆಯಲ್ಲಿ ಎಷ್ಟುಮಂದಿ ಇದ್ದೀರಿ?” ಎಂದು ಕೇಳಿದರೆ “ನಾವಿಬ್ಬರು, ಒಂದು ಮಗು ಹಾಗು “ಟಿವಿ” ಎಂದು ಉತ್ತರಿಸುವುದರಲ್ಲಿ ತಪ್ಪು ಇಲ್ಲ.

ಇಂದು ಇಂತಹ ವೀಕ್ಷಿಸುವ ಮಾಧ್ಯಮ ಯಂತ್ರಗಳು ನಮ್ಮ ಕುಟುಂಬದ ಸದಸ್ಯರಾಗಿ ಸರ್ಪಡೆ ಆಗುತ್ತಿವೆ. ಹೆಂಡತಿಯನ್ನು ಮರೆತರು ಲ್ಯಾಪ್ ಟಾಪ್ ಮರೆಯಲಾರರು. ಮಕ್ಕಳನ್ನು ಬಿಟ್ಠಾರು ಆದರೆ ಮೊಬೈಲ್ ಫೋನನ್ನು ಬಿಡಲಾರರು. ಇವುಗಳ ಸದಸ್ಯತ್ವ ಜನರನ್ನು ಗೀಳಾಗಿ ಪರಿವರ್ತಿಸಿವೆ, ಹಾಗೆಯೇ ಅಂತರ್ ಜಾಲಗಳ ಜಾಣ ತಾಣಗಳು ಸಹ ಮಾನವನನ್ನು ಹುಚ್ಚೆಬ್ಬಿಸಿವೆ. ಇವುಗಳಿಂದ ಮಾನವನ ಪರಸ್ಪರ ಬಂಧನಗಳು ಕಾಣದಾಗಿವೆ. ಬಂಧನಗಳು ಇಲ್ಲವಾದಾಗ ನಂಬಿಕೆಗಳು ಪಾತಾಳ ಕಚ್ಚುತ್ತಿವೆ.
ಕೇಳರಯದ ಮನೋ ನ್ಯೂನತೆಗಳು ಹೆಚ್ಚುತ್ತಿವೆ. ಪೊಷಕ ಬಂಧು ಮಿತ್ರರಲ್ಲಿ ಅಸಹನೆಗಳು ತ್ವರಿತ ಗತಿಯಲ್ಲಿ ಬೆಳೆಯುತ್ತಿವೆ. ಇಂದು ಅಂತರ್ಜಾಲಗಳ ಸಮಾಜಿಕ ತಾಣಗಳಲ್ಲಿ ಒಂದಾದ ಟ್ವೀಟರ್ ನಲ್ಲಿ ಟ್ವೀಟ್ ಮಾಡಿ ತಮ್ಮ ಪ್ರತಿಭೆಯನ್ನು ತೋರತ್ತಿರುವರು, ಹಾಗೆಯೇ ಮನಸ್ಸು ಹಾಗು ಸಮಾಜದ ನೆಮ್ಮದಿ ಹಾಳು ಮಾಡುತ್ತಿರುವರು.
ಟ್ವೀಟರ್ ಮೂಲಕ ರಾಜಕಾರಣಿಗಳು ಹಾಗು ಪ್ರಭಾವಿಗಳು ತಮ್ಮ ಕಲ್ಪನೆಗಳನ್ನು (ಐಡಿಯಾಲಾಜಿಗಳನ್ನು ) ಟ್ವೀಟ್ ಮಾಡಿ ಕಾಲು ಎಳೆಯುತ್ತಿದ್ದಾರೆ, ಕೆಲವರು ತಮ್ಮ ಹಿಂಬಾಲಕರನ್ನು ಹೆಚ್ಚಿಸಿ ಕೊಳ್ಳುತ್ತಿದ್ದಾರೆ, ಸಂತೃಪ್ತಿಗೊಳಿಸುತ್ತಿದ್ದಾರೆ, ಪ್ರಚೋದನೆ ಮಾಡುತ್ತಿದ್ದಾರೆ, ಸಮಾಜದ ದೃಷ್ಟಿಯನ್ನೆ ಬದಲಾಯಿಸುತ್ತಿದ್ದಾರೆ. ಇನ್ನು ಕೆಲವರು ತಮ್ಮ ಟ್ವೀಟ್ ಮೂಲಕ ಮನಸ್ಸುಗಳನ್ನು ಹಗುರ ಮಾಡುವ ಪ್ರಯತ್ನ ಮಾಡುತ್ತಾರೆ ಹಾಗು ಸಕಾರತ್ಮಕ ವಿಷಯಗಳನ್ನು ವಿನಮಯ ಮಾಡುತ್ತಾರೆ. ಒಮ್ಮೊಮ್ಮೆ ವ್ಯಕ್ತಿ ಸ್ವಾತಂತ್ರ, ನುಡಿ ಸ್ವಾತಂತ್ರ ಹಾಗು ಭಾವ ಸ್ವಾತಂತ್ರವೆಂದು ಕುಟುಕು, ವ್ಯಂಗ್ಯ, ಹಾಗು ನೋವು ಆಗುವಂತಹ ಸಂಗತಿಗಳನ್ನು ಟ್ವೀಟ್ ಮಾಡುವರು. ಈ ಕಾರಣದಿಂದ ಈ ಜಾಣ ತಾಣಗಳಿಗೆ ಯುವಕರು ಹೋಗುವ ಮುನ್ನ ಸ್ವಯಂ ವಿವೇಕ ಹಾಗು ವಿಮರ್ಶಕರಾಗಬೇಕು.
ನಾನೊಮ್ಮೆ ದಿನ ಪತ್ರಿಕೆಯ ಅಂಕಣದಲ್ಲಿ ಒಬ್ಬ ಕ್ರಿಕೆಟ್ ಆಟಗಾರನ ಟ್ವೀಟ್ ಹೀಗತ್ತು “tears colourless, otherwise pillows would have told all the secrets”. ಮನೋ ವ್ಯದ್ಯನಾದ ನನಗೆ ಈ ಟ್ವೀಟ್ ರೋಮಾಂಚಿಸಿತ್ತು. ಮನುಷ್ಯ ಘಣಾಧಾರಿತ ರೂಪಿ. ಇವನನ್ನು ತೂಕ, ಬಣ್ಣ ಹಾಗು ಎತ್ತರಗಳಗಳಿಂದ ಗುರಿತಸಬಹುದು. ಆದರೆ ಮಾನವನ ಭಾವನೆಗಳಿಗೆ ಯಾವುದೆ ಅಳತೆ ಮಾಡುವ ಮಾನ ದಂಡ ಅಥವ ಮಾಪನಗಳು ಇಲ್ಲ. ಆದುದರಿಂದ ಭಾವನೆಯನ್ನು ಸರ್ವಾಂತರ್ಯಾಮಿ ಅನ್ನುವುದು.
ಹೀಗಾಗಿ ಭಾವನೆಯು ದೇವತಾ ಸ್ವರೂಪಿ ಎಂದು ಋಷಿವರ್ಯರು ಹೇಳಿದ್ದಾರೆ. ಸೃಷ್ಟಿಕರ್ತನು ನಮ್ಮ ಕಣ್ಣೀರಿಗೆ ಬಣ್ಣವನ್ನು ಕೊಟ್ಟಿಲ್ಲ. ಅಕಾಸ್ಮಾತ್ ಕಣ್ಣೀರಿಗೆ ಬಣ್ಣವನ್ನು ಕೊಟ್ಟಿದ್ದೇ ಆದರೇ ನಮ್ಮ ಭಾಂದವ್ಯಗಳಲ್ಲಿ ಅರಾಜಕತೆಗಳನ್ನು ಸೃಷ್ಟಿಸುತ್ತಿದ್ದವು. ನಂಬಿಕೆಗೆ ಅನರ್ಹರಾಗುತ್ತಿದ್ದಿವಿ. ಕಳವಳ, ದುಖಃ, ದುಮ್ಮಾನ, ತಳ್ಳಣ, ಭಯ ಹಾಗು ಖಿನ್ನತೆಗಳು ಅಧಿಕವಾಗುತಿದ್ದವೊ ಎನೊ ತಿಳಿಯದು? ಇನ್ನು ಮುಂದೆ ಹೀಗೆ ನಮ್ಮ ಯಾಂತ್ರಿಕ ಬದುಕು ಮುಂದುವರಿದಿದ್ದಲ್ಲಿ ನಮ್ಮ ಪರಸ್ಪರ ಭಾಂದವ್ಯಗಳು ನಶಿಸುತ್ತಾ ಸೆಕ್ಸ್ ರೋಬೋಟ್ ಕಡೆ ವಾಲುವುದರಲ್ಲಿ ಅನುಮಾನವಿಲ್ಲ. ಇದಕ್ಕೆ ಕಾರಣ ಅಗೋಚರವಾದ ಮನಸ್ಸಿನ ಬಯಕೆಗಳು ಮತ್ತು ಮಾನಸಿಕ ಒತ್ತಡಗಳು ಇರಬಹುದು.
ನನ್ನ ವೈಯಕ್ತಿಕ ಅನಿಸಿಕೆ, ನಾವು ನಮ್ಮ ಮಾಹಿತಿ ತಂತ್ರ ಜ್ಞಾನದಲ್ಲಿ ಮುಂದುವರಿದಂತೆ ನಮ್ಮ ಮೆದುಳಿನ ಸಂವೇದನಾ ನರ ಪುಂಜಾ ಹಾಗು ಭಾವ ಕೇಂದ್ರ ಬಿಂದುವಿಗಳಲ್ಲಿ ಅರೆವಾಹಕ ಬಿಲ್ಲೆಯನ್ನು ಶಸ್ತ್ರ ಚಿಕಿತ್ಸೆ ಮೂಲಕ ಅಳವಡಿಸಿದಾಗ ಹೆಂಡತಿಯ ಅಥವ ಗಂಡನ ವಿವಿಧ ಭಾವನೆಗಳನ್ನು ಆ ಭಾವನೆಗೆ ತಕ್ಕಂತೆ ಮನೆಯಲ್ಲಿ ಮೊದಲೆ ನಿಗದಿ ಪಡಿಸಿದ ಸಾದೃಶ್ಯ ಬಣ್ಣದ ಬಲ್ಬ್ ಗಳು ಹತ್ತಿಕೊಳ್ಳುವಂತೆ ಮಾಡಿದ್ದೇ ಆದರೆ ಜನರು ಇದನ್ನು ಅರಿತು ಅವರವರ ಮೈ ಮನಸ್ಸಿನ ಭಾವನೆಗಳನ್ನು ತಿಳಿದು ಜಗಳ ಮತ್ತು ವಿಚ್ಚೇದನಗಳನ್ನು ಇಲ್ಲದಂತೆ ಮಾಡಬಹುದೇನೊ? ಇದೊಂದು ಹೊಸ ಮನೋ ವೈದ್ಯಕೀಯ ಚಿಕಿತ್ಸಾ ಆವಿಷ್ಕಾರವೆಂದೇ ತಿಳಿದುಕೊಳ್ಳಿ…………..
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ


[…] ಕಣ್ಣೀರಿಗೆ ಬಣ್ಣವಿದ್ದಿದ್ದರೆ….. […]
[…] ಕಣ್ಣೀರಿಗೆ ಬಣ್ಣವಿದ್ದಿದ್ದರೆ….. […]