ನಮ್ಮದು ಒಂದು ಪುಟ್ಟ ಹಳ್ಳಿ, ಕೆಲವೇ ಕೆಲವು ಮನೆಗಳಿರುವ ಒಂದು ಹಿಂದುಳಿದ ಗ್ರಾಮ. ಅಂದು ನಾನು ಕಾಲೇಜು ಮುಗಿಸಿಕೊಂಡು ಮನೆಗೆ ತೆರಳುವ ಹೊತ್ತಿಗೆ ಸಂಜೆ 4:00 ಗಂಟೆಯಾಗಿತ್ತು, ನಮ್ಮ ಮನೆಯ ಎದುರು ಹಲವಾರು ಜನ ಗುಂಪು ಕಟ್ಟಿಕೊಂಡು ಎಲ್ಲರೂ ತಮ್ಮ ತಮ್ಮ ಮೂಗಿನ ನೇರಕ್ಕೆ ಮಾತನಾಡುತ್ತಿದ್ದರು.
ನನಗೂ ಅಲ್ಲಿ ಏನು ನಡೆಯುತ್ತಾ ಇದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಹೆಚ್ಚಾಗಿ ಹೋಗಿ ನೋಡಿದೆ , ಒಂದು ದಿವಾನ್ ಕಾಟ್ ಮೇಲೆ ಒಬ್ಬ ವ್ಯಕ್ತಿ ಸತ್ತು ಮಲಗಿದ್ದರು , ಆದರೆ ಅಲ್ಲಿ ಒಂದು ಶವಕ್ಕೆ ಕೊನೆಯ ಬಾರಿ ಕೊಡಬೇಕಾದ ಗೌರವಗಳು ಯಾವುದು ಕಾಣುತ್ತಿರಲಿಲ್ಲ , ಹೇಗೆ ಆ ಮನುಷ್ಯ ತನ್ನ ಕೊನೆಯುಸಿರು ಏಳೆದಿದ್ದನೋ ಹಾಗೆಯೇ ಅವನನ್ನು , ದಿವಾನ್ ಕಾಟ್ ಸಮೇತ ಹೊರಗಡೆ ತಂದು ಮಲಗಿಸಲಾಗಿತ್ತು.
ನನಗೆ ಆಶ್ಚರ್ಯದ ಜೊತೆ , ಏನಿದು ಈ ಲೈಫ್ ಎನ್ನುವಷ್ಟರ ಮಟ್ಟಿಗೆ ಬೇಜಾರು ಮತ್ತು ತಳವಳ ಒಂದೇ ಬಾರಿಗೆ ಮನಸಲ್ಲಿ ಆಗ ತೊಡಗಿತ್ತು.
ಸತ್ತಂತಹ ಮನುಷ್ಯ ಬೇರೆ ಯಾರೂ ಆಗಿರಲಿಲ್ಲ , ನಮ್ಮ ಮನೆಯ ಎದುರಿಗೆ ಇದ್ದಂತಹ ಸುಮಾರು 30 ರಿಂದ 35 ವರ್ಷದ ಹುಡುಗ , ಅವನಿಗೆ ಮದುವೆಯಾಗಿ ಮಕ್ಕಳೂ ಸಹ ಇದ್ದರು , ಆದರೆ ಹೆಂಡತಿ ಮಕ್ಕಳು ಜೊತೆಗಿರಲಿಲ್ಲ , ಈ ದುರಾದೃಷ್ಟದ ಸಾವಿಗೆ ಹೆಂಡತಿ ಮಕ್ಕಳು ದೂರವಾಗಿದ್ದೆ ಮುಖ್ಯ ಕಾರಣ ಎಂದು ನನಗೆ ಇಂದು ಅನ್ನಿಸುತ್ತಿದೆ.
ಏಕೆಂದರೆ ಒಬ್ಬ ಮಹಿಳೆ ಗಂಡನನ್ನು ಬಿಟ್ಟು ಬದುಕಬಹುದು ಆದರೆ ಮದುವೆಯಾದ ನಂತರ ಗಂಡ ತನ್ನ ಹೆಂಡತಿಯನ್ನು ಬಿಟ್ಟು ಈ ಸಮಾಜದಲ್ಲಿ ಬದುಕಿರಲಾರ.
ತನ್ನ ಸಂಸಾರ ದೂರವಾದ ನಂತರ ಆ ಮನುಷ್ಯ ದುಶ್ಚಟಗಳ ದಾಸನಾಗಿದ್ದ, ಸಿಕ್ಕ ಸಿಕ್ಕ ಹೆಂಗಸರ ಸಹವಾಸ ಮಾಡಲು ಶುರು ಮಾಡಿದ್ದ ಅನ್ನಿಸುತ್ತದೆ ನನಗೆ. ಆದರೆ ಸರಿಯಾಗಿ ಗೊತ್ತಿಲ್ಲ ಕೆಲವೇ ಕೆಲವು ದಿನಗಳಲ್ಲಿ ಅವನಿಗೆ ಏಡ್ಸ್ ಲಕ್ಷಣಗಳು ಕಾಣಿಸಿಕೊಂಡಿದ್ದರು .
ಅವನು ಸಮಾಜದಿಂದ ದೂರವಾಗಿ ಕೇವಲ ಮನೆಯಲ್ಲಿ ಉಳಿಯಲು ಶುರು ಮಾಡಿದ್ದ .
ಏಡ್ಸ್ ಎಂಬುದು ಗುಣಪಡಿಸಲಾಗದ ಕಾಯಿಲೆ ಇರಬಹುದು , ಆದರೆ ಸರಿಯಾದ ಔಷಧಿಗಳನ್ನು ಸರಿಯಾದ ಕ್ರಮದಲ್ಲಿ ತೆಗೆದುಕೊಂಡರೆ ಹಲವಾರು ವರ್ಷಗಳು ಬದುಕಬಹುದು (ನನಗೆ ತಿಳಿದಿರುವ ಮಟ್ಟಿಗೆ). ಆದರೆ ನಮ್ಮ ಸಮಾಜ ಏಡ್ಸ್ ಬಂದಿರುವ ವ್ಯಕ್ತಿಗಳನ್ನು ಬದುಕಲು ಬಿಡಬೇಕಲ್ಲವೇ , ಅವನು ಕಾಯಿಲೆಯಿಂದ ಸಾಯುವ ಮೊದಲೇ ಪ್ರತಿನಿತ್ಯ ಅವನನ್ನು ಹೀಯಾಳಿಸಿ ಹೀಯಾಳಿಸಿ ಸಾಯಿಸಿ ಬಿಡುತ್ತದೆ ಈ ಸಮಾಜ.
ಕೊನೆಗೂ ಅವನ ಜೀವಿತಾವಧಿ ಮುಗಿದಿತ್ತು ಅನಿಸುತ್ತದೆ , ಏಡ್ಸ್ ಬಂದ ಕೇವಲ ಮೂರು ನಾಲ್ಕು ವರ್ಷಗಳಲ್ಲೇ ಕೊನೆಯುಸಿರೆಳೆದಿದ್ದ, ಸಾವು ಒಂದಲ್ಲ ಒಂದು ದಿನ ಬಂದೆ ಬರುವುದು, ನಾವು ಹುಟ್ಟಿದ ದಿನವೇ ಇಂತಹ ದಿನವೇ ಸಾವು ಬರುತ್ತದೆ ಎಂದು ನಿಶ್ಚಯವಾಗಿರುತ್ತದೆ. ಆದರೆ ಒಳ್ಳೆಯ ಸಾವು ಎಷ್ಟು ಜನರಿಗೆ ಸಿಗುತ್ತದೆ ಅಲ್ಲವೇ..?

ಇಲ್ಲೂ ಆಗಿದ್ದು ಅಷ್ಟೇ ಅವನ ಸಾವಿನ ನಂತರ ಆದಂತಹ ಘಟನೆಗಳು ಹಾಗೂ ನಾನು ನೋಡಿದ್ದು ಕರುಳು ಕಿತ್ತು ಬರುವಂತಿತ್ತು.
ಏಕೆಂದರೆ ಅವನ ಶವವನ್ನು ಯಾರು ಮುಟ್ಟುತಿರಲಿಲ್ಲ, ಒಂದೇ ಒಂದು ಹಾರವನ್ನು ಹಾಕಿರಲಿಲ್ಲ , ಕೊನೆಯ ಬಾರಿ ಮಾಡಿಸುವ ಸ್ನಾನ , ಪೂಜೆ ಯಾವುದು ಅಲ್ಲಿ ನಡೆಯುತ್ತಿರಲಿಲ್ಲ, ಎಲ್ಲರೂ ದೂರವೇ ನಿಂತು ಸುಮ್ಮನೆ ನೋಡುತ್ತಿದ್ದರು ಅಷ್ಟೇ.
ನನಗೆ ಚೆನ್ನಾಗಿ ನೆನಪಿದೆ ಅವನು ಬದುಕಿದ್ದಂತಹ ಸಂದರ್ಭದಲ್ಲಿ ನೋವು ತಡೆಯಲಾರದೆ ಮನೆಯೊಳಗೇ ಕಿರಿಚಿಕೊಳ್ಳುತ್ತಿದ್ದ, ನಮ್ಮಮ್ಮ ಅವರ ಮನೆಯ ಮುಂದೆ ಹೋಗಿ ಹೊರಗಡೆ ಊಟ ಇಟ್ಟು ಬರುತ್ತಿದ್ದಳು , ಅವಳಿಗೆ ಈ ಏಡ್ಸ್ ಬಗ್ಗೆ ಗೊತ್ತಿತ್ತೋ ಇಲ್ಲವೋ ನಾ ಕಾಣೆ, ಆದರೆ ಅವಳ ತಾಯಿ ಹೃದಯ ಮಾತ್ರ ಅಂದು ಮಿಡಿದಿತ್ತು.
ಅವನ ಶವವನ್ನು ಆ ದಿನವೇ ದಿವಾನ್ ಕಾಟ್ ಸಮೇತ ಟ್ಯಾಕ್ಟರ್ ನಲ್ಲಿ ಹಾಕಿಕೊಂಡು ಹೋದರು , ಜೆಸಿಬಿ ಸಹಾಯದಿಂದ ಗುಂಡಿ ತೋಡಿ ಶವವನ್ನು ಯಾವುದೇ ಅಂತ್ಯ ಸಂಸ್ಕಾರಗಳ ರೀತಿ ನೀತಿಗಳಿಲ್ಲದೆ ಮಣ್ಣು ಮಾಡಿದರು.
ಆ ವ್ಯಕ್ತಿಗೆ ಅಣ್ಣ-ತಮ್ಮಂದಿರು ಇಲ್ಲವೆಂತಲ್ಲ ಎಲ್ಲರು ಇದ್ದರು ಆದರೆ ಈ ಒಂದು ಕಾಯಿಲೆ ಎಲ್ಲರನ್ನೂ ದೂರ ಮಾಡಿತ್ತು.
ಅಣ್ಣ ತಮ್ಮ ಅಕ್ಕ ತಂಗಿ ಎಲ್ಲೀ ತನಕ..
ಬದುಕೀ ಬೆಳೆಯೋ ತನಕ.
ಕೂಡಿ ಬೆಳೆಯೋ… ತನಕ.
ಸತ್ತಾಗ ಬರುವರು ತಮ್ಮ ಗುಣಿ ತನಕ
ಮಣ್ಣು ಮುಚ್ಚೋ ತನಕ..!!
ನಂತರ ಆ ದಿವಾನ್ ಕಾಟ್ ನ್ನು ನಮ್ಮ ಮನೆಯ ಮುಂದೆ ಇಟ್ಟಿದ್ದರು, ದಿನವೂ ನಾನು ಕಾಲೇಜಿಗೆ ಹೋಗುವ ಸಮಯದಲ್ಲಿ ಅದನ್ನು ನೋಡುತ್ತಿದ್ದೆ , ಆ ದಿವಾನ್ ಕಾಟ್ ಕೂಡ ಅಳುತ್ತಾ ರೋಧಿಸುತ್ತಿತ್ತು , ಎಂತಹ ಮನುಷ್ಯರ ಜಾತಿ ಇದು ಸತ್ತಾಗಲೂ ಈ ಕಾಯಿಲೆ , ಜಾತಿ, ಧರ್ಮ , ಮೇಲು-ಕೀಳು ಎಂಬುದು ಬೇಕೆ ಮನುಷ್ಯನಿಗೆ , ಇಂತಹ ಮನುಷ್ಯನ ಜಾತಿಗೆ ಧಿಕ್ಕಾರ ಎನ್ನುತ್ತಿತ್ತು.
ಏಡ್ಸ್ ಒಂದು ನಿಷ್ಠುರ ಕಾಯಿಲೆ ನಿಜ , ಆದರೆ ಅದು ಹರಡುವ ವಿಧಾನ ಮಾತ್ರ ಎಲ್ಲಾ ಕಾಯಿಲೆಯಂತಲ್ಲ. ತಾಯಿಯಿಂದ ಮಕ್ಕಳಿಗೆ, ಸರಿಯಾಗಿ ಸ್ವಚ್ಛಗೊಳಿಸಿದ ಸಿರೆಂಜ್ ಮೂಲಕ , ದೈಹಿಕ ಸಂಪರ್ಕದ ಮೂಲಕ ಮಾತ್ರ ಹರಡುತ್ತದೆ.
ಈ ಕಾಯಿಲೆ ಇರುವವರು ಕೂಡ ಮನುಷ್ಯರು ಅಲ್ಲವೇ, ಯಾವುದೋ ಒಂದು ಸಂದರ್ಭದಲ್ಲಿ ದುಡುಕಿ ಮಾಡಿದ ತಪ್ಪು ಅವರನ್ನು ಈ ಸ್ಥಿತಿಗೆ ತಳ್ಳಿ ಇರುತ್ತದೆ ಅಷ್ಟೇ.
ಅವರು ಆ ಕಾಯಿಲೆಯಿಂದ ಅನುಭವಿಸುತ್ತಿರುವ ಕಷ್ಟಗಳೇ ಸಾಕು , ನಾವು ಕೂಡ ಅವರ ಮನಸ್ಸನ್ನು ಘಾಸಿಗೊಳಿಸಿ ಆಗಿರುವ ಗಾಯಕ್ಕೆ ಉಪ್ಪು ಸುರಿಯುವ ಕೆಲಸ ಮಾಡಬಾರದು , ಅವರಿಗೂ ಬದುಕುವ ಹಕ್ಕಿದೆಯಲ್ಲವೇ , ಇರುವ ತನಕ ಚೆನ್ನಾಗಿ ಖುಷಿಯಾಗಿ ಬದುಕುವಂಥ ವಾತಾವರಣನ್ನು ನಾವುಗಳು ಕಲ್ಪಿಸಿಕೊಡಬೇಕು.
-ಅಪರಿಚಿತ ಮೌನಿ
